ಜಾತ್ರೆಗಳಲ್ಲಿ ಸೈಬರ್ ವಂಚನೆ ಜಾಗೃತಿ

KannadaprabhaNewsNetwork | Published : Feb 26, 2024 1:31 AM

ಸಾರಾಂಶ

ಸೈಬರ್‌ ವಂಚನೆ ಪ್ರಕರಣಗಳಲ್ಲಿ ಲಕ್ಷಾಂತರ ರುಪಾಯಿ ಹಣ ಹಾಗೂ ಸಂಚಾರಿ ನಿಯಮ ಪಾಲಿಸದೇ ಅನೇಕ ಜನರು ಜೀವ ಕಳೆದುಕೊಂಡವರಿದ್ದಾರೆ.

ಜಗದೀಶ ವಿರಕ್ತಮಠ

ಕನ್ನಡಪ್ರಭ ವಾರ್ತೆ ಬೆಳಗಾವಿ

ಇದು ಡಿಜಿಟಲ್ ಯುಗ. ಈ ಆಧುನಿಕ ಜಮಾನದಲ್ಲಿ ಸೈಬರ್ ಕ್ರೈಂಗಳು ಅಧಿಕವಾಗುತ್ತಲೇ ಇವೆ. ಸಂದೇಶಗಳು, ಫೋನ್ ಕರೆಗಳ ಮೂಲಕ ನಿಮ್ಮನ್ನು ಸಂಪರ್ಕಿಸುವ ಸೈಬರ್ ಕ್ರಿಮಿನಲ್‌ಗಳು ಬಳಿಕ ಮೋಸದಿಂದ ನಿಮ್ಮ ಬ್ಯಾಂಕ್ ಖಾತೆ, ವೈಯಕ್ತಿಕ ವಿವರಗಳಿಗೆ ಕನ್ನ ಹಾಕಿ ಸಂಕಷ್ಟಕ್ಕೆ ತಳ್ಳುತ್ತಾರೆ. ಹೀಗಾಗಿ ಇಂತಹ ಅಕ್ರಮಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದದ್ದು ಬಹಳ ಅಗತ್ಯ. ಇದಕ್ಕಾಗಿಯೇ ಇಂತಹ ಮೋಸಗೊಳಿಸುವ ತಂತ್ರಗಳಿಗೆ ಬಲಿಯಾಗದಂತೆ ಜನರನ್ನು ಎಚ್ಚರಿಸಿಲು ಬೆಳಗಾವಿ ಪೊಲೀಸರು ವಿನೂತನ ವಿಧಾನ ಕೈಗೊಂಡಿದ್ದಾರೆ.

ಜಾತ್ರೆ, ಸಭೆ, ಸಮಾರಂಭಗಳಲ್ಲಿ ಸ್ವಾಗತ ಕೋರುವ, ಶುಭಾಶಯ ತಿಳಿಸುವ ಫ್ಲೆಕ್ಸ್‌ಗಳು ಸಾಮಾನ್ಯ. ಆದರೆ, ಇದೇ ಮೊದಲು ಎನ್ನುವಂತೆ ಸೈಬರ್‌ ವಂಚನೆ ಹಾಗೂ ಸಂಚಾರ ನಿಯಮ ಪಾಲನೆ ಕುರಿತು ಜಾತ್ರೆಗಳಲ್ಲಿ ಜಾಗೃತಿ ಮೂಡಿಸುವ ಫ್ಲೆಕ್ಸ್‌ಗಳನ್ನು ಹಾಕುವ ಮೂಲಕ ಜಿಲ್ಲಾ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಈಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯ ಜಾಹಿರಾತು, ಹಣ ಡಬ್ಲಿಂಗ್‌, ಕಡಿಮೆ ದರಕ್ಕೆ ಬ್ರ್ಯಾಂಡೆಡ್‌ ವಸ್ತುಗಳ ಖರೀದಿ, ಉದ್ಯೋಗ, ಕಡಿಮೆ ದರಕ್ಕೆ ವಾಹನ ಖರೀದಿ ಹಾಗೂ ಉಡುಗೊರೆ ಹೆಸರಲ್ಲಿ ನಡೆಯುವ ವಂಚನೆಗೆ ಬಲಿಯಾಗಿ ಜನರು ಕೋಟ್ಯಂತರ ರು. ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್ ಮೂಲಕ ಜಾಲ ಬೀಸುವ ವಂಚಕರು, ಬಣ್ಣದ ಮಾತುಗಳನ್ನಾಡಿ ಲಿಂಕ್‌ ಹಾಗೂ ಒನ್ ಟೈಮ್‌ ಪಾಸ್‌ವರ್ಡ್‌ (ಓಟಿಪಿ) ಕಳಿಸುವ ಮೂಲಕ ಕೋಟ್ಯಂತರ ರೂ. ಪಂಗನಾಮ ಹಾಕುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಮೋಸದ ಜಾಲಕ್ಕೆ ಅವಿದ್ಯಾವಂತರಿಗಿಂತ ವಿದ್ಯಾವಂತರು, ಸರ್ಕಾರಿ ನೌಕರರು, ಉದ್ಯಮಿಗಳೇ ಹೆಚ್ಚು ಬಲಿಯಾಗುತ್ತಿರುವುದು ದುರಾದೃಷ್ಟ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ 65ಕ್ಕೂ ಹೆಚ್ಚು ಸೈಬರ್‌ ವಂಚನೆ ಜಾಲದಲ್ಲಿ ಸುಶಿಕ್ಷಿತರೇ ಹೆಚ್ಚು ಸಿಕ್ಕು ನಲುಗಿರುವುದು ಪೊಲೀಸರಿಗೆ ತಲೆನೋವಾಗಿದೆ. ಸೈಬರ್‌ ವಂಚನೆ ಕುರಿತು ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದರೂ ಪ್ರಕರಣಗಳ ಸಂಖ್ಯೆಯಲ್ಲಿ ಕ್ಷೀಣಿಸದಿರುವುದು ಪೊಲೀಸರನ್ನು ಮತ್ತಷ್ಟು ಚಿಂತೆಗೆ ನೂಕಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿನ ಜನರು, ಅವಿದ್ಯಾವಂತರು, ರೈತರು, ಕೂಲಿ ಕಾರ್ಮಿಕರಿಗೆ ಸೈಬರ್‌ ವಂಚನೆ ಕುರಿತು ಚಿಂತಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಸರ್ಕಾರ ಹಾಗೂ ಇಲಾಖೆಯಿಂದ ಜಾಗೃತಿಗಾಗಿ ಆಗುವ ವೆಚ್ಚಕ್ಕೆ ಸಂಪನ್ಮೂಲ ಇಲ್ಲದಿದ್ದರೂ, ತಮ್ಮ ಹಂತದಲ್ಲೇ ಖರ್ಚು ಮಾಡಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಮೊದಲ ಹಂತದಲ್ಲಿ ದೊಡ್ಡ ಗಾತ್ರದ ನಾಲ್ಕು ಪೊರ್ಟೇಬಲ್‌ ಫ್ಲೆಕ್ಸ್‌ಗಳನ್ನು ಸಿದ್ದಪಡಿಸಿದ್ದು, ಇವುಗಳಲ್ಲಿ ಸೈಬರ್‌ ವಂಚನೆ ಹೇಗೆ ಮಾಡಲಾಗುತ್ತದೆ, ಸೈಬರ್‌ ವಂಚನೆಯಿಂದ ಪಾರಾಗುವುದು ಹೇಗೆ ಮತ್ತು ಸೈಬರ್ ವಂಚನೆಗೊಳಾದವರು ತಕ್ಷಣ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು, ವಾಟ್ಸಾಪ್‌, ಫೇಸ್‌ಬುಕ್‌, ಇನ್‌ ಸ್ಟಾ ಗ್ರಾಂ. ಟೆಲಿಗ್ರಾಂಗಳಲ್ಲಿ ಬರುವ ಸಂದೇಶ, ಜಾಹಿರಾತುಗಳ ಬಗ್ಗೆ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲು ಕ್ರಮಕೈಗೊಂಡಿದ್ದಾರೆ. ಅಲ್ಲದೇ ಸ್ಥಳೀಯ ಪೊಲೀಸರು ಸೈಬರ್‌ ವಂಚನೆ ಕುರಿತು ಸಾರ್ವಜನಿಕರಿಗೆ ತಿಳಿ ಹೇಳಿದ್ದಾರೆ. ಒಂದು ಜಾತ್ರೆ ಮುಕ್ತಾಯದ ಬಳಿಕ ಬೇರೆ ಬೇರೆ ಗ್ರಾಮಗಳಲ್ಲಿರುವ ಜಾತ್ರೆಗಳಿಗೆ ಫ್ಲೆಕ್ಸ್‌ಗಳನ್ನು ಸ್ಥಳಾಂತರಿಸಲಿದ್ದಾರೆ. ಸದ್ಯ ನಡೆಯುತ್ತಿರುವ ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಜಾಗೃತಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಈ ರೀತಿ ಜಿಲ್ಲೆಯಲ್ಲಿ ನಡೆಯುವ ವಿವಿಧ ಜಾತ್ರೆಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ. ಕೋಟ್‌

ಸೈಬರ್‌ ವಂಚನೆ ಪ್ರಕರಣಗಳಲ್ಲಿ ಲಕ್ಷಾಂತರ ರುಪಾಯಿ ಹಣ ಹಾಗೂ ಸಂಚಾರಿ ನಿಯಮ ಪಾಲಿಸದೇ ಅನೇಕ ಜನರು ಜೀವ ಕಳೆದುಕೊಂಡವರಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಅಷ್ಟೇ ಗ್ರಾಮೀಣ ಭಾಗದಲ್ಲಿರುವ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳಲ್ಲಿ ಅಳವಡಿಸಲು ಮೊದಲ ಹಂತದಲ್ಲಿ ದೊಡ್ಡ ಗ್ರಾತದ ನಾಲ್ಕು ಪೊರ್ಡೇಬಲ್‌ ಪ್ಲೆಕ್ಸ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಒಂದು ಜಾತ್ರೆ ಮುಕ್ತಾಯದ ಬಳಿಕ ಬೇರೆ ಬೇರೆ ಗ್ರಾಮಗಳಲ್ಲಿರುವ ಜಾತ್ರೆಗಳಿಗೆ ಪ್ಲೆಕ್ಸ್‌ಗಳನ್ನು ಸ್ಥಳಾಂತರಿಸಲಾಗುವುದು.

- ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೆಳಗಾವಿ.

Share this article