ಬಾಹ್ಯ ಜಗತ್ತಿನ ಆಕರ್ಷಣೆಗೆ ಬಲಿಯಾಗಬೇಡಿ

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಮಕ್ಕಳು ಕೇವಲ ಅಕ್ಷರ ಜ್ಞಾನ, ಅಂಕ, ನೌಕರಿಗಾಗಿ ಓದುತ್ತಿದ್ದು, ಸಂಸ್ಕಾರವನ್ನು ಮರೆತು ದೇಶಕ್ಕೆ ಮಾರಕವಾಗುತ್ತಿರುವುದನ್ನು ಕಂಡು ವ್ಯಥೆ ಪಟ್ಟು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಇಡೀ ರಾಜ್ಯ ಸುತ್ತುತ್ತಾ ಉಚಿತವಾಗಿ ಶಾಲಾ ಮಕ್ಕಳಿಗೆ ಉಪನ್ಯಾಸ ನೀಡುತ್ತಿರುವುದು ಮಾದರಿ ಕೆಲಸ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ತಂದೆ-ತಾಯಿಗಳೇ ದೇವರು. ಗುರು ಈ ಜಗದ ಎರಡನೇ ದೇವರು ಅವರನ್ನು ಭಕ್ತಿ ಗೌರವಗಳಿಂದ ಕಂಡರೇ ಮಾತ್ರ ಜೀವನ ಪಾವನವಾಗುವುದು ಎಂದು ಮೋಟಿವೇಶನ್‌ ಸ್ಪೀಕರ್‌ ನವೀನ್ ಪಾವಗಡ ಹೇಳಿದರು.

ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ನೈತಿಕ ಮೌಲ್ಯಗಳ ಅರಿವು ಮೂಡಿಸಿ ಮಾತನಾಡಿದ ಅವರು, ಯಾವ ಕಾರಣಕ್ಕೂ ಬಾಹ್ಯ ಜಗತ್ತಿನ ಆಕರ್ಷಣೆಗೆ ಬಲಿಯಾಗಬೇಡಿ ಎಂದು ಕಿವಿ ಮಾತು ಹೇಳಿದ ಅವರು, ಅದರಿಂದಾಗುವ ಕೆಡುಕುಗಳು ಹಾಗೂ ಹೆತ್ತವರು ಅನುಭವಿಸುವ ಅವಮಾನ, ನೋವುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು, ತಾವು ಮೈತುಂಬಾ ಬಟ್ಟೆ ತೊಡದಿದ್ದರೂ ಮಕ್ಕಳಿಗೆ ಮೈತುಂಬಾ ಬಟ್ಟೆ, ಹೊಟ್ಟೆ ತುಂಬಾ ಊಟ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಸರ್ವ ತ್ಯಾಗ ಮಾಡುವ ತಂದೆ ತಾಯಿಗಳು ಈ ಜಗದ ಸೂಪರ್ ಪವರ್ ಹಾಗೂ ತಮ್ಮ ಇಡೀ ಜ್ಞಾನವನ್ನು ಮಕ್ಕಳ ಶ್ರೇಯಸ್ಸಿಗಾಗಿ ಧಾರೆ ಎರೆಯುವ ಗುರು ಈ ಜಗದ ಎರಡನೇ ಸೂಪರ್ ಪವರ್. ಹಾಗಾಗಿ ಹೆತ್ತವರನ್ನು ಹಾಗೂ ಗುರುವನ್ನು ಗೌರವಸುತ್ತಾ ಉತ್ತಮ ಬದುಕು ಕಟ್ಟಿಕೊಳ್ಳಲು ಕರೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ಕಡು ಬಡತನದಲ್ಲಿ ಬೆಳೆದ ನವೀನ್ ನಮ್ಮ ನಾಡಿನ ಸಂಸ್ಕಾರ ಉಳಿಸಿ ಬೆಳೆಸುವ ಸಾರ್ಥಕ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಕೇವಲ ಅಕ್ಷರ ಜ್ಞಾನ, ಅಂಕ, ನೌಕರಿಗಾಗಿ ಓದುತ್ತಿದ್ದು, ಸಂಸ್ಕಾರವನ್ನು ಮರೆತು ದೇಶಕ್ಕೆ ಮಾರಕವಾಗುತ್ತಿರುವುದನ್ನು ಕಂಡು ವ್ಯಥೆ ಪಟ್ಟು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಇಡೀ ರಾಜ್ಯ ಸುತ್ತುತ್ತಾ ಉಚಿತವಾಗಿ ಶಾಲಾ ಮಕ್ಕಳಿಗೆ ಉಪನ್ಯಾಸ ನೀಡುತ್ತಿರುವುದು ಮಾದರಿ ಕೆಲಸ ಎಂದರು.

ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ ಇತರರಿದ್ದರು. ಭೂಮಿಕಾ ಹುಣಶ್ಯಾಳ ಮತ್ತು ಸಂಗಡಿಗರು ಪ್ರಾರ್ಥಿಸಿದರು ನಾರನಗೌಡ ಉತ್ತಂಗಿ ನಿರೂಪಿಸಿದರು.

Share this article