ಕನ್ನಡಪ್ರಭ ವಾರ್ತೆ ಮಂಗಳೂರು
ಶ್ರೀರಾಮ ಮಂದಿರ ಭೇಟಿಗೆ ಬಿಜೆಪಿ ಆಯೋಜನೆಯ ಕರ್ನಾಟಕದ ಪ್ರಥಮ ಹಂತದ ಅಯೋಧ್ಯಾ ದರ್ಶನ್ ಕೊನೆ ಯಾತ್ರೆ ಬುಧವಾರ ಮಂಗಳೂರಿನಿಂದ ಹೊರಟಿದೆ. ಇನ್ನು ಎರಡನೇ ಹಂತದ ಅಯೋಧ್ಯಾ ದರ್ಶನ್ ಯಾತ್ರೆ ಲೋಕಸಭಾ ಚುನಾವಣೆ ಬಳಿಕ ಪುನಾರಂಭಗೊಳ್ಳಲಿದೆ ಎಂದು ಅಯೋಧ್ಯಾ ದರ್ಶನ್ ಯಾತ್ರಾ ರಾಜ್ಯ ಸಹ ಸಂಚಾಲಕ್ ಜಗದೀಶ್ ಹಿರೇಮನಿ ತಿಳಿಸಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂದಿರ ಪ್ರತಿಷ್ಠಾಪನೆ ಬಳಿಕ ಇಲ್ಲಿವರೆಗೆ ಕರ್ನಾಟಕದ 12 ಕಡೆಗಳಿಂದ ಆಸ್ತಾ ವಿಶೇಷ ರೈಲು ಮೂಲಕ ಸುಮಾರು 20 ಸಾವಿರ ಮಂದಿ ಬಿಜೆಪಿ ಕಾರ್ಯಕರ್ತರು ಶ್ರೀರಾಮನ ದರ್ಶನ ಪಡೆದಿದ್ದಾರೆ. ಪ್ರತಿಯೊಬ್ಬರು 3 ಸಾವಿರ ರು. ಹಣ ತೆತ್ತು ಅಯೋಧ್ಯೆಗೆ ತೆರಳುತ್ತಿದ್ದಾರೆ. ಆಸ್ತಾ ರೈಲಿನಲ್ಲಿ ರಾಮಭಕ್ತರಿಗೆ ಊಟ, ತಿಂಡಿ, ಸ್ವಚ್ಛತೆ ಹಾಗೂ ರಕ್ಷಣೆ ಸೇರಿದಂತೆ ಎಲ್ಲ ಸೌಕರ್ಯವನ್ನೂ ಒದಗಿಸಲಾಗುತ್ತಿದೆ. ಊಟಕ್ಕೂ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು. ರೈಲಿನಲ್ಲಿ ಅಲ್ಲದೆ ರಾಜ್ಯದಿಂದ ಪ್ರತಿದಿನ ಎರಡು ಸಾವಿರದಷ್ಟು ಮಂದಿ ತಾವಾಗಿಯೇ ಅಯೋಧ್ಯೆಗೆ ತೆರಳುತ್ತಿದ್ದಾರೆ ಎಂದರು. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಸುಗಮ ದರ್ಶನಕ್ಕೆ ಈ ಯಾತ್ರಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದವರಿಗೆ ಗ್ರೀನ್ ಕಾರ್ಡ್ ನೀಡಲಾಗಿದೆ. ಅಲ್ಲಿ ಕೂಡ ಕರ್ನಾಟಕ ಯಾತ್ರಿಗಳ ವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿದೆ. ರಾಮ ಮಂದಿರದ ಐದು ಕಿ.ಮೀ. ಸುತ್ತಮುತ್ತ ವಿವಿಧ ದೇವಸ್ಥಾನಗಳು ಹಾಗೂ ಸರಯೂ ನದಿ ವೀಕ್ಷಣೆಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇವೆಲ್ಲವನ್ನೂ ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಡಿದೆ ಎಂದರು.ಬುಧವಾರ ಸಂಜೆ ಹೊರಟ ಅಯೋಧ್ಯಾ ದರ್ಶನ್‌ನ ಆಸ್ತಾ ರೈಲು ಮಾ.6ರಂದು ಬೆಳಗ್ಗೆ ಅಯೋಧ್ಯೆ ತಲುಪಲಿದೆ. ಈ ರೈಲಿಗೆ ಉಡುಪಿಯಿಂದ 400, ಕಾರವಾರದಿಂದ 200, ದ.ಕ.ದಿಂದ 8 ಸಾವಿರ ಸೇರಿ ಒಟ್ಟು 1,400 ಮಂದಿ ತೆರಳಲುತ್ತಿದ್ದಾರೆ. ಮಾ.10ರಂದು ವಾಪಸ್ ಮಂಗಳೂರಿಗೆ ಹೊರಡುವ ಈ ರೈಲು ಮಾ.13ರಂದು ಮಂಗಳೂರು ತಲುಪಲಿದೆ. ಯಾತ್ರೆಯುದ್ಧಕ್ಕೂ ಆಸ್ತಾ ರೈಲಿಗೆ ಆಯ್ದ ರೈಲು ನಿಲ್ದಾಣಗಳಲ್ಲಿ ಹೂ ಎರಚುವ ಮೂಲಕ ಸ್ಥಳೀಯ ಹಿಂದು ಬಾಂಧವರು ಸ್ವಾಗತ ಕೋರಲಿದ್ದಾರೆ ಎಂದರು. ಹೊಸಪೇಟೆ ಬಳಿಕ ಮಂಡ್ಯದಲ್ಲಿ ಅಯೋಧ್ಯೆಗೆ ತೆರಳುವವರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟದಂತಹ ಕೃತ್ಯ ನಡೆಸಿದ್ದಾರೆ. ದುಷ್ಕೃತ್ಯ ನಡೆಸಿದವರನ್ನು ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲರ ಬೆಂಬಲ ಅತ್ಯಗತ್ಯ ಎಂದರು. ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಯಾತ್ರಾ ಸಹ ಸಂಚಾಲಕ ವಿಜೇಂದ್ರ, ಜಿಲ್ಲಾ ಸಂಚಾಲಕಿ ಕಸ್ತೂರಿ ಪಂಜ, ಸಹ ಸಂಚಾಲಕ ರಣದೀಪ್ ಅಂಚನ್, ದೇವದಾಸ್ ಶೆಟ್ಟಿ, ಜಿತೇಂದ್ರ ಇದ್ದರು.