ಬಾನಂಗಳದಲ್ಲಿ ಹಾರಾಡಿದ ಅಯೋಧ್ಯೆ ಶ್ರೀರಾಮ

KannadaprabhaNewsNetwork |  
Published : Jan 28, 2024, 01:21 AM IST
ಬಾನೆತ್ತರದಲ್ಲಿ ಹಾರಾಡಿದ ಬಣ್ಣಬಣ್ಣದ ಗಾಳಿಪಟಗಳು. | Kannada Prabha

ಸಾರಾಂಶ

ಬಾನಂಗಳದಲ್ಲಿ ಈ ಗಾಳಿಪಟ ಹಾರುತ್ತಿದ್ದಂತೆ ಪ್ರೇಕ್ಷಕರು ಜೈ ಶ್ರೀರಾಮ ಎಂಬ ಘೋಷಣೆ ಕೂಗಿದರು. ಈ ಮೂಲಕ ಗಾಳಿಪಟ ಸ್ಪರ್ಧಿಗಳಿಗೆ ಹುರಿದುಂಬಿಸಿದರು. ದೊಡ್ಡಬಳ್ಳಾಪುರದ ಗಾಳಿಪಟ ಕಲಾ ಸಂಘದ ಬಿ.ಪಿ. ಪ್ರಸನ್ನ ಹಾರಿಸಿದ 20 ಅಡಿಯ ಶ್ರೀರಾಮನ ಭಾವಚಿತ್ರ ಹಾಗೂ ಅಯೋಧ್ಯೆ ಮಂದಿರದ ಭಾವಚಿತ್ರ ಹೊತ್ತ ಬಾವುಟ ಎಲ್ಲರ ಗಮನ ಸೆಳೆಯಿತು

ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ

ಬಾನಂಗಳದಲ್ಲಿ ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಚಿತ್ತಾರ!. ಒಂದು ಕಡೆ ಅಯೋಧ್ಯೆಯ ರಾಮ ಮಂದಿರ ಬಾನಂಗಳಕ್ಕೆ ಮುತ್ತಿಡುತ್ತಿದ್ದರೆ, ಮತ್ತೊಂದೆಡೆ ಛತ್ರಪತಿ ಶಿವಾಜಿ ಮಹಾರಾಜ, ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ-3 ಹೀಗೆ ಎಲ್ಲಿ ನೋಡಿದರಲ್ಲಿ ಬಾನಂಗಳದಲ್ಲಿ ಬಣ್ಣಬಣ್ಣದ ಗಾಳಿಪಟಗಳ ಚಿತ್ತಾರ.

ಇದು ಕಂಡುಬಂದಿದ್ದು ನಗರದ ಕುಸುಗಲ್ಲ ರಸ್ತೆಯ ಆಕ್ಸಪರ್ಡ್‌ ಕಾಲೇಜು ಹತ್ತಿರ ಶನಿವಾರ ಹಾಗೂ ಭಾನುವಾರ 2 ದಿನಗಳ ಕಾಲ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದ ಅಂತಾರಾಷ್ಟ್ರೀಯ ಗಾಳಿಪಟ ಮತ್ತು ಸಾಂಸ್ಕೃತಿಕ ಮಹೋತ್ಸವದಲ್ಲಿ. ದೇಶ, ವಿದೇಶ, ಅನ್ಯರಾಜ್ಯಗಳಿಂದ ಸ್ಪರ್ಧಿಗಳು ಪಾಲ್ಗೊಂಡು ಗಾಳಿಪಟ ಹಾರಿಸಿ ನೋಡುಗರಿಗೆ ಮುದ ನೀಡಿದರು.

ಬಾನಂಗಳದಲ್ಲೂ ಶ್ರೀರಾಮ: ಉತ್ಸವದ ಪ್ರಮುಖ ಆಕರ್ಷಣೆ ಅಯೋಧ್ಯೆಯ ಶ್ರೀರಾಮ ಮಂದಿರ. ಬೆಂಗಳೂರಿನ ಗಾಳಿಪಟ ಸ್ಪರ್ಧಿ ವಿ.ಕೆ.ರಾವ್‌ ಹಾರಿಸಿದ ಶ್ರೀರಾಮಚಂದ್ರ ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರದ ಚಿತ್ರ ಹೊಂದಿದ ಗಾಳಿಪಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಾನಂಗಳದಲ್ಲಿ ಈ ಗಾಳಿಪಟ ಹಾರುತ್ತಿದ್ದಂತೆ ಪ್ರೇಕ್ಷಕರು ಜೈ ಶ್ರೀರಾಮ ಎಂಬ ಘೋಷಣೆ ಕೂಗಿದರು. ಈ ಮೂಲಕ ಗಾಳಿಪಟ ಸ್ಪರ್ಧಿಗಳಿಗೆ ಹುರಿದುಂಬಿಸಿದರು. ದೊಡ್ಡಬಳ್ಳಾಪುರದ ಗಾಳಿಪಟ ಕಲಾ ಸಂಘದ ಬಿ.ಪಿ. ಪ್ರಸನ್ನ ಹಾರಿಸಿದ 20 ಅಡಿಯ ಶ್ರೀರಾಮನ ಭಾವಚಿತ್ರ ಹಾಗೂ ಅಯೋಧ್ಯೆ ಮಂದಿರದ ಭಾವಚಿತ್ರ ಹೊತ್ತ ಬಾವುಟ ಎಲ್ಲರ ಗಮನ ಸೆಳೆಯಿತು.

ಪಂಜಾಬ್‌ನಿಂದ ಆಗಮಿಸಿದ್ದ ವರುಣ ಛಡ್ಡಾ ಎಂಬುವರು 25 ಅಡಿ ಎತ್ತರದ ಹುಲಿ ಆಕೃತಿಯ ಗಾಳಿಪಟ ಮುದ ನೀಡಿತು.

44 ಸ್ಪರ್ಧಿಗಳು ಭಾಗಿ: ಉತ್ಸವದಲ್ಲಿ ಯುಕೆ, ಇಂಡೋನೇಷಿಯಾ, ಸ್ಲೋವೋನಿಯಾ, ನೆದರಲ್ಯಾಂಡ್‌, ಗ್ರೀಸ್ ದೇಶಗಳಿಂದ, ನಾಗ್ಪುರ, ಗುಜರಾತ್, ಪಂಜಾಬ, ರಾಜಸ್ಥಾನ, ಮಹಾರಾಷ್ಟ್ರ, ಒಡಿಶಾ, ವಡೋಧರಾ ಅಲ್ಲದೇ ರಾಜ್ಯದ ಬೆಂಗಳೂರು, ದೊಡ್ಡಬಳ್ಳಾಪುರ, ಬೆಳಗಾವಿ ಸೇರಿದಂತೆ 44 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸ್ಥಳೀಯರು ಪಾಲ್ಗೊಂಡಿದ್ದರು.

ಚಂದ್ರಯಾನ-3, ಪ್ರಧಾನಿ ನರೇಂದ್ರ ಮೋದಿ, ಭಾರತದ ಧ್ವಜವುಳ್ಳ ಗಾಳಿಪಟದೊಂದಿಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಮೋದಿ ಎಂಬ ಸ್ಲೋಗನ್‌ ಹೊಂದಿದ ಗಾಳಿಪಟಗಳು ಹೆಚ್ಚಿನ ಆಕರ್ಷಣೆಗೆ ಕಾರಣ‍ವಾದವು.

ನೆದರಲ್ಯಾಡ್‌ನಿಂದ ಆಗಮಿಸಿದ್ದ ಪೀಟರ್‌ ಥೈನೆಸಿನ್‌ ಹಾಗೂ ಸಿಸ್ಕಾ ಥೈನೆಸಿನ್‌ ಅವರು ಭಾರತದ ಧ್ವಜ ಹೊಂದಿದ ಕಿಂಗ್‌ ಫಿಷರ್‌, ಇಂಡೋನೇಶಿಯಾದಿಂದ ಆಗಮಿಸಿದ ಸತ್ಯೋ ಅಜಿ ಅವರು ಕಿಂಗ್‌ ಕೋಬ್ರಾ, ಕೋಬ್ರಾ ಬೈಟ್‌, ಟ್ರಿನೋಬೈಟ್‌, ಗುಜರಾತ್‌ನ ಸೂರತ್‌ನಿಂದ ಆಗಮಿಸಿದ್ದ ನಿತೇಶ ಲಕಮ್ ಅವರು ಡೆಲ್ಟಾ, ರ್ಯಾಬಿಟ್‌, ಜೆಲ್ಲಿಫಿಶ್, ಎಲ್‌ಇಡಿ ಲೈಟ್‌ ಹೊಂದಿರುವ ಸ್ಟನ್‌ ಲೈಟ್, ಟ್ರೈನ್‌ ಲೈಟ್‌ ಗಾಳಿಪಟ ಹಾರಿಸಿದರು.

ಪಂಜಾಬಿನ ವರುಣ ಛಡ್ಡಾ 76 ಮೀಟರ್‌ ಉದ್ದದ ಭಾರತದ ಬಾವುಟ, ಬೇಟಿ ಪಡಾವೋ ಬೇಟಿ ಬಚಾವೋ ಸ್ಲೋಗನ್‌ ಹೊಂದಿದ ಗಾಳಿಪಟ, ಮಹಾತ್ಮ ಗಾಂಧೀಜಿ, ವೋಟ್‌ ದೋ ಸ್ಲೋಗನ್‌ ಹೊಂದಿದ ಗಾಳಿಪಟ ಹಾರಿಸಿದರು. ಕಣ್ಣುಗಳಿಗೆ ಮುದ ನೀಡುವ ರೀತಿ ಬಗೆಬಗೆಯ ಬಣ್ಣ, ಆಕೃತಿಗಳಲ್ಲಿ ಬಾನಂಗಳದಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿಸುತ್ತಾ ಹಾರಾಡುತ್ತಿರುವ ಗಾಳಿಪಟಗಳನ್ನು ನೋಡುವುದೇ ಚಂದ ಎನ್ನುವಂತಿದ್ದವು.

ಗಾಳಿಪಟ ಸ್ಪರ್ಧೆಗಾಗಿಯೇ ನಾನು ಭಾರತಕ್ಕೆ ಐದನೇ ಬಾರಿಗೆ ಬಂದಿರುವೆ. ಇಲ್ಲಿನ ಜನರ ಪ್ರೀತಿ, ಅಭಿಮಾನ ನೋಡಿ ಸಂತಸವಾಗುತ್ತಿದೆ. ಇಂತಹ ಗಾಳಿಪಟ ಸ್ಪರ್ಧೆಗಳು ಎಲ್ಲೆಡೆಯೂ ನಡೆಯುವಂತಾಗಲಿ ಎಂದು ನೆದರಲ್ಯಾಂಡಿನಿಂದ ಆಗಮಿಸಿರುವ ಗಾಳಪಟ ಸ್ಪರ್ಧಿ ಪೀಟರ್‌ ಥೈನಿಸನ್‌ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆಗೆ ಉತ್ತಮ ಸ್ಪಂಧನೆ ದೊರೆಯುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಗಾಳಿಪಟ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ ಎಂದು

ಬೆಂಗಳೂರಿನ ಗಾಳಿಪಟ ಸ್ಪರ್ಧಿ ವಿ.ಕೆ.ರಾವ್‌ ಹೇಳಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...