ವರ್ಷವಿಡೀ ವಸ್ತುಪ್ರದರ್ಶನ ಚಟುವಟಿಕೆಗೆ ಚಿಂತನೆ: ಅಯೂಬ್ ಖಾನ್

KannadaprabhaNewsNetwork | Published : Mar 14, 2024 2:02 AM

ಸಾರಾಂಶ

ಬೇರೆ ಬೇರೆ ಸ್ಥಳಗಳಲ್ಲಿ ಆಟದ ಮೈದಾನಗಳನ್ನು ಬಳಸಿಕೊಂಡು ಪ್ರದರ್ಶನ ಆಯೋಜಿಸುವುದರಿಂದ ಕ್ರೀಡಾರ್ಥಿಗಳಿಗೆ, ಪಾರ್ಕಿಂಗ್ ವ್ಯವಸ್ಥೆಗೆ, ಕುಡಿಯುವ ನೀರು, ಟ್ರಾಫಿಕ್ ಇತ್ಯಾದಿ ಮೂಲಭೂತ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಮ್ಮ ವಸ್ತು ಪ್ರದರ್ಶನ ಆವರಣದಲ್ಲಿ ಎಲ್ಲಾ ರೀತಿಯ ಅನುಕೂಲ ಇರುವುದರಿಂದ ಇನ್ನು ಮುಂದೆ ಯಾವುದೇ ವಸ್ತು ಪ್ರದರ್ಶನವು ಕೂಡ ಪ್ರದರ್ಶನದ ಆವರಣದಲ್ಲಿಯೇ ಏರ್ಪಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿನ ಪ್ರದರ್ಶನಗಳು ದಸರಾ ಸಂದರ್ಭದ ಮೂರ್ನಾಲ್ಕು ತಿಂಗಳಿಗೆ ಮಾತ್ರ ಸೀಮಿತವಾಗಿದ್ದು ವರ್ಷಪೂರ್ತಿ ಚಟುವಟಿಕೆಯಿಂದಿರಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್ ಮಾಹಿತಿ ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಮೈಸೂರಿನ ಇತರೆ ಸ್ಥಳಗಳಲ್ಲಿ ನಡೆಯುವ ವಸ್ತುಪ್ರದರ್ಶನಗಳು ಪ್ರಾಧಿಕಾರದ ಆವರಣದಲ್ಲಿಯೇ ಆಯೋಜಿಸಲು ನಿಯಮ ರೂಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಹಾಗೂ ನಗರದ ಬೇರೆ ಬೇರೆ ಮೈದಾನಗಳಲ್ಲಿ ವಸ್ತು ಪ್ರದರ್ಶನ ನಡೆಸಲು ಪರವಾನಗಿ ನೀಡಬಾರದು ಎಂದು ಕೋರಿದರು.

ಯಾರೇ ಆಗಲಿ ವಸ್ತು ಪ್ರದರ್ಶನದ ಮಳಿಗೆಗಳನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅವರಣದಲ್ಲಿಯೇ ಇಡಬೇಕು. ಅದಕ್ಕೆ ಬೇಕಾಗುವ ಎಲ್ಲಾ ಸೌಲಭ್ಯ ಒದಗಿಸುವ ಜವಾಬ್ದಾರಿ ಪ್ರಾಧಿಕಾರದ್ದು ಎಂದರು.

ಈ ರೀತಿ ಬೇರೆ ಬೇರೆ ಸ್ಥಳಗಳಲ್ಲಿ ಆಟದ ಮೈದಾನಗಳನ್ನು ಬಳಸಿಕೊಂಡು ಪ್ರದರ್ಶನ ಆಯೋಜಿಸುವುದರಿಂದ ಕ್ರೀಡಾರ್ಥಿಗಳಿಗೆ, ಪಾರ್ಕಿಂಗ್ ವ್ಯವಸ್ಥೆಗೆ, ಕುಡಿಯುವ ನೀರು, ಟ್ರಾಫಿಕ್ ಇತ್ಯಾದಿ ಮೂಲಭೂತ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಮ್ಮ ವಸ್ತು ಪ್ರದರ್ಶನ ಆವರಣದಲ್ಲಿ ಎಲ್ಲಾ ರೀತಿಯ ಅನುಕೂಲ ಇರುವುದರಿಂದ ಇನ್ನು ಮುಂದೆ ಯಾವುದೇ ವಸ್ತು ಪ್ರದರ್ಶನವು ಕೂಡ ಪ್ರದರ್ಶನದ ಆವರಣದಲ್ಲಿಯೇ ಏರ್ಪಡಬೇಕು ಎಂದರು.

ವಸ್ತು ಪ್ರದರ್ಶನದ ''ಎ'' ಬ್ಲಾಕ್ ಅನ್ನು ಪಾರಂಪರಿಕ ಮಾದರಿಯಲ್ಲಿ ವಿನ್ಯಾಸ ಗೊಳಿಸಿ, ಪ್ರಸ್ತುತ ಇರುವ ಫೌಂಟೈನ್ ಅನ್ನು ಮ್ಯೂಸಿಕಲ್ ಫೌಂಟೈನ್ ಅನ್ನಾಗಿ ಮಾಡಿ ಸಾರ್ವಜನಿಕರನ್ನು ಆಕರ್ಷಸಲಾಗುತ್ತದೆ. ಇದರಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಲು ಸಹಕಾರಿ ಆಗಲಿದೆ ಎಂದು ಅವರು ಹೇಳಿದರು.

ಏಪ್ರಿಲ್ ಮತ್ತು ಮಾರ್ಚ್ ತಿಂಗಳಲ್ಲಿ ಬೇಸಿಗೆ ಶಿಬಿರ ಏರ್ಪಡಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಮೈಸೂರಿನಲ್ಲಿ ಯೂನಿಟಿ ಮಾಲ್

ದೇಶದಾದ್ಯಂತ ಯೂನಿಟಿ ಮಾಲ್ ಸ್ಥಾಪಿಸಲು ಕೇಂದ್ರ ಸರ್ಕಾರವು ಅನುದಾನ ಬಿಡುಗಡೆಗೊಳಿಸಿದ್ದು, ಅದರಲ್ಲಿ ರಾಜ್ಯಕ್ಕೆ 193 ಕೋಟಿ ರೂ. ಬಿಡುಗಡೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ಯೂನಿಟಿ ಮಾಲ್ ಸ್ಥಾಪಿಸಬೇಕು ಎಂಬ ಚಿಂತನೆಗಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ಮೈಸೂರಿನಲ್ಲಿ ಯೂನಿಟಿ ಮಾಲ್ ಸ್ಥಾಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಏನಿದು ಯೂನಿಟಿ ಮಾಲ್?

ದೇಶದ ಎಲ್ಲಾ ರಾಜ್ಯಗಳಿಂದ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಮ್ಮ ತಮ್ಮ ರಾಜ್ಯ ಮತ್ತು ಜಿಲ್ಲೆಯ ಉತ್ಪನ್ನಗಳು ದೊರೆಯುವ ಮಳಿಗೆಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸುವುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಸಿಇಒ ರಾಜೇಶ್ ಗೌಡ ಇದ್ದರು.

Share this article