ಆಯುಷ್ಮಾನ್ ಭಾರತ್: ಎಲ್ಲ ಖಾಸಗಿ ಆಸ್ಪತ್ರೆ ಸೇರ್ಪಡೆಗೆ ಸಂಸದ ಸೂಚನೆ

KannadaprabhaNewsNetwork |  
Published : Nov 06, 2024, 12:51 AM IST
ಆಯುಷ್ಮಾನ್‌ ಭಾರತ್‌ ಯೋಜನೆ ಕುರಿತು ಸಭೆ ನಡೆಯಿತು. | Kannada Prabha

ಸಾರಾಂಶ

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಸೇರಿಸಬೇಕು ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತುರ್ತು ಸಂದರ್ಭದಲ್ಲಿ ರೋಗಿ ಮತ್ತು ಕುಟುಂಬದವರಿಗೆ ಆಯುಷ್ಮಾನ್ ಭಾರತ್ ಅಡಿ ನೋಂದಣಿಯಾದ ಆಸ್ಪತ್ರೆಗಳನ್ನು ಹುಡುಕುವುದು ಕಷ್ಟಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಸವಲತ್ತುಗಳು ಹಾಗೂ ಆಸ್ಪತ್ರೆಗಳ ಮಾಹಿತಿಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತಾಗಲು ಪ್ರತ್ಯೇಕ ಆ್ಯಪ್ ಸಿದ್ಧಗೊಳಿಸಬೇಕು ಎಂದು ಸಂಸದರು ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳಿದ್ದು, ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ ಆದರೆ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆಯುವಲ್ಲಿ ಗೊಂದಲ ಉಂಟಾಗುತ್ತಿರುವುದು ವಿಷಾದಕರ. ಆಯುಷ್ಮಾನ್ ಅಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬಿಸುವುದು, ರೋಗಿಗಳನ್ನು ಅಲೆದಾಡಿಸುವುದು, ಸರ್ಕಾರಿ ಆಸ್ಪತ್ರೆಯ ಶಿಫಾರಸು ಪತ್ರ ನೀಡಲು ವಿಳಂಬಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಸೌಲಭ್ಯಗಳ ಕುರಿತು ಆರೋಗ್ಯ ಇಲಾಖೆ, ಆಸ್ಪತ್ರೆ ಮತ್ತು ರೋಗಿಗಳ ನಡುವೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಆಸ್ಪತ್ರೆಗಳಲ್ಲಿ 24 ಗಂಟೆಗಳ ಕಾಲವೂ ಆಯುಷ್ಮಾನ್ ಸೇವೆ ಲಭ್ಯವಿರಬೇಕು ಎಂದು ಸೂಚಿಸಿದರು.ಎಪಿಎಲ್‌ಗೂ ನಿರಾಕರಿಸುವಂತಿಲ್ಲ:

ಯಾವುದೇ ಆಸ್ಪತ್ರೆಗಳು ಎಪಿಎಲ್ ಕುಟುಂಬಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಪಿಎಲ್ ಕುಟುಂಬದ ಸದಸ್ಯರಿಗೆ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಎಪಿಎಲ್ ಕುಟುಂಬದವರಿಗೆ ಒಟ್ಟಾರೆ ಚಿಕಿತ್ಸೆ ವೆಚ್ಚದಲ್ಲಿ ಶೇ.30 ರಿಯಾಯಿತಿ ಪಡೆಯಲು ಅವಕಾಶ ಇದೆ ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿ, ಕಳೆದ ಆಗಸ್ಟ್ ತಿಂಗಳೊಂದರಲ್ಲಿ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅಡಿ ಚಿಕಿತ್ಸೆ ನೀಡಿದ ಮೊತ್ತ 15.08 ಲಕ್ಷ ರು.ಗಳನ್ನು ವಿವಿಧ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಶಿವಕುಮಾರ್ ಮಾತನಾಡಿದರು. ಸಭೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ವಿವಿಧ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ