ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುಹುಣಸೂರು ತಾಲೂಕಿನ ಬಸ್ತಿಮಾದನಹಳ್ಳಿಯ ಬಿ. ಅಖಿಲ್ ಅವರು 14.20 ಎಕರೆ ಜಮೀನಿನಲ್ಲಿ ನೈಸರ್ಗಿಕ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಇದರಲ್ಲಿ 7 ಎಕರೆ ಮಾತ್ರ ಸ್ವಂತ ಜಮೀನು. ಉಳಿಕೆ ಗುತ್ತಿಗೆ ಆಧಾರದ ಮೇಲೆ ಪಡೆದು, ವ್ಯವಸಾಯ ಮಾಡುತ್ತಿರುವುದು ವಿಶೇಷ.ಇವರು ಭತ್ತ, ರಾಗಿ, ಮುಸುಕಿನ ಜೋಳ, ಅಲಸಂದೆ, ಹುರುಳಿ, ತೋಟಗಾರಿಕೆ ಬೆಳೆಗಳಾದ ಬಾಳೆ, ಏಲಕ್ಕಿ, ಕಾಫಿ, ಅಡಿಕೆ, ಕಾಳು ಮೆಣಸು ಬೆಳೆಯುತ್ತಿದ್ದಾರೆ. ಸಾವಯವ ಹಾಗೂ ನೈಸರ್ಗಿಕ ಕೃಷಿಕರಾಗಿರುವ ಇವರು ಎರೆಹುಳು ಗೊಬ್ಬರ, ಎರೆಜಲ, ಗೋಕೃಪಾಮೃತ, ಜೀವಾಮೃತ, ಕಾಂಪೋಸ್ಟ್ ಗೊಬ್ಬರದ ಜೊತೆಗೆ ಹಸಿರೆಲೆಗೊಬ್ಬರಗಳಾದ ಅಲಸಂದೆ, ಗ್ಲಿರಿಸೀಡಿಯಾ, ಹುರುಳಿ ಬೆಳೆದು, ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಬರುತ್ತಿದ್ದಾರೆ. ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಬದುಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮುಂತಾದ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ. ಆಧುನಿಕ ನೀರಾವರಿ ಪದ್ಧತಿಗಳಾದ ಹನಿ ನೀರಾವರಿ ಹಾಗು ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅರಣ್ಯ, ತೋಟಗಾರಿಕೆ, ಕೃಷಿ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದು, ಬದುಗಳಲ್ಲಿ ತೇಗ (100), ಮಹಾಗನಿ (75), ಬಿಲ್ಚಾರ (30), ಸಿಲ್ವರ್ (100), ಹೆಬ್ಬೇವು (15), ನೇರಳೆ (10), ಹಲಸು (10), ಹೊಂಗೆ (12) ಮರಗಳನ್ನು ಬೆಳೆಸುತ್ತಿದ್ದಾರೆ. ಉಪಕಸುಬುಗಳಲ್ಲಿ ಹೈನುಗಾರಿಕೆ ಪ್ರಮುಖವಾಗಿದ್ದು ದೇಸಿ ತಳಿಗಳಾದ ಹಳ್ಳಿಕಾರ್ (14), ಮಲೆನಾಡುಗಿಡ್ಡ (8), ಗಿರ್ (4), ಕಾಸರಗೋಡುಕುಳ್ಳ (2), ಬರಗೂರು ತಳಿ (2) ಹಾಗೂ 3 ಹೋರಿಗಳಿದ್ದು, ನಾಟಿ ಹಸುವಿನ ತುಪ್ಪ ತಯಾರಿಸಿ ಮಾರಾಟ ಮಾಡಿ ವಾರ್ಷಿಕವಾಗಿ ಸುಮಾರು 2 ಲಕ್ಷ ಆದಾಯ ಗಳಿಸುತ್ತಾರೆ. ರಾಸುಗಳ ಮೇವಿಗಾಗಿ 4 ಎಕರೆ ಪ್ರದೇಶದಲ್ಲಿ ರೆಡ್ ನೇಪಿಯಾರ್ ಹುಲ್ಲು , ಗಿನಿಹುಲ್ಲು, ಸಿ.ಒ.-03, ಸಿ.ಒ.-04, ಮೇವಿನ ಜೋಳ, ರೋಡ್ಸ್, ಅಗಸೆ, ಡ್ಸ್ರಿಸೀಡಿಯಾ, ಸುಬಾಬುಲ್, ಬೆಳೆಯುತ್ತಾರೆ. ನಾಟಿ ಕೋಳಿ (20), ಗಿರಿರಾಜ (10) ಹಾಗೂ 2 ಟರ್ಕಿ ಕೋಳಿಗಳನ್ನು ಸಾಕುತ್ತಿದ್ದಾರೆ. ಕೃಷಿ ಹೊಂಡ ನಿರ್ಮಿಸಿ 1300 ಕಾಮನ್ ಕಾರ್ಪ್ ಮೀನುಗಳನ್ನು ಸಾಕಲಾಗಿದೆ. ಜೇನು ಕೃಷಿ ಮಾಡುತ್ತಿದ್ದು ಒಟ್ಟು 22 ಜೇನು ಪೆಟ್ಟಿಗೆಗಳಿದ್ದು, ವಾರ್ಷಿಕವಾಗಿ ಸುಮಾರು 25 ಕೆ.ಜಿ. ಜೇನುತುಪ್ಪ ಉತ್ಪಾಾದಿಸಿ ಉತ್ತಮ ಬೆಲೆಗೆ ಮಾರಾಟಮಾಡಿ ಆದಾಯ ಗಳಿಸುತ್ತಿದ್ದಾರೆ. ಸಾವಯವ ಕೃಷಿ ಮಾಡುತ್ತಿರುವುದರಿಂದ, ರೋಗ/ಕೀಟಗಳ ನಿರ್ವಹಣೆಗಾಗಿ ನೀಮಾಸ್ತ್ರ, ಅಗ್ನಿ ಅಸ್ತ್ರ, ಜೀವಾಮೃತ, ಗೋಕೃಪಾಮೃತ, ಗಂಜಲ ಮತ್ತು ಹುಳಿಮಜ್ಜಿಗೆ ಸಿಂಪರಣೆ ಮಾಡಿ ನಿರ್ವಹಣೆ ಮಾಡುತ್ತಿದ್ದಾರೆ. ಅಡಿಕೆಯನ್ನು ಒಣಗಿಸಲು ಮನೆ ಚಾವಣಿಯಲ್ಲಿ ಸೋಲಾರ್ ಡ್ರೈಯರ್ ನಿರ್ಮಿಸಿಕೊಂಡಿದ್ದಾರೆ. ರೈತರಿಗೆ ನೈಸರ್ಗಿಕ/ಸಾವಯವ ಕೃಷಿಗಾಗಿ ಗೊಬ್ಬರಗಳ ತಯಾರಿಕೆ ಹಾಗೂ ಸ್ವಸಹಾಯ ಗುಂಪುಗಳಿಗೆ ಹಾಲಿನ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿಗಳನ್ನು ನೀಡುತ್ತಾರೆ. ಹಲವಾರು ರೈತ/ರೈತ ಮಹಿಳೆಯರು ಹಾಗೂ ಇತರೆ ಸಂಘ ಸಂಸ್ಥೆಗಳ ಸದಸ್ಯರು ಇವರ ತೋಟಕ್ಕೆ ಭೇಟಿ ನೀಡಿ ಸಾವಯವ ಕೃಷಿ/ ನೈಸರ್ಗಿಕ ಕೃಷಿಯ ಬಗ್ಗೆ ಮಾಹಿತಿ ಪಡೆಯುತ್ತಾರೆ. ಸಾವಯವ ಕೃಷಿಯಲ್ಲಿ ಹೊಸ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಇತರೆ ರೈತರಿಗೆ ಸೂಕ್ತ ಮಾಹಿತಿ ನೀಡಿ ಅವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ, ಜಿಲ್ಲಾ ಕೃಷಿ ತರಬೇತಿ ಸಂಸ್ಥೆ-ಮೈಸೂರು, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಅರಣ್ಯ ಇಲಾಖೆಯ ವಿಜ್ಞಾಾನಿಗಳು ಹಾಗೂ ಅಧಿಕಾರಿಗಳೊಡನೆ ಸತತ ಸಂಪರ್ಕದಲ್ಲಿದ್ದು, ಕೃಷಿ ತಾಂತ್ರಿಕತೆ, ತರಬೇತಿಗಳು ಹಾಗು ಇಲಾಖೆಯಿಂದ ಲಭಿಸುವ ಸವಲತ್ತುಗಳನ್ನು ಸದುಪಯೋಗ ಪಡೆದು ಆದಾಯ ವೃದ್ಧಿಸಿಕೊಳ್ಳುವಲ್ಲಿ ಇತರರಿಗೆ ಮಾದರಿಯಾಗಿ ಪ್ರಗತಿಪರ ಯುವರೈತರಾಗಿ ಗುರುತಿಸಿಕೊಂಡಿದ್ದಾರೆ.ರಿವು ಮೂಡಿಸುತ್ತಿದ್ದಾರೆ. ಇವರು ಒಟ್ಟಾರೆ ಜಮೀನಿನಿಂದ ರು. 18 ಲಕ್ಷ ಗಳ ನಿವ್ವಳ ಆದಾಯ ಗಳಿಸುತ್ತಿದ್ದಾರೆ. ಅಖಿಲ್ ಅವರ ಈ ಪರಿಶ್ರಮವನ್ನು ಗುರುತಿಸಿ 2023ನೇ ಸಾಲಿನ ರೈತ ದಿನಾಚರಣೆ ಅಂಗವಾಗಿ ಪೃಥ್ವಿ ಜ್ಯುವೆಲ್ಲರ್ಸ್ ವತಿಯಿಂದ ತಾಲೂಕು ಮಟ್ಟದ ಉತ್ತಮ ರೈತ ಪ್ರಶಸ್ತಿ ನೀಡಲಾಗಿದೆ. 2024ನೇ ಸಾಲಿನಲ್ಲಿ ಹುಣಸೂರು ತಾಲೂಕು ಮಟ್ಟದ ಯುವ ರೈತ ಪ್ರಶಸ್ತಿ ಪಡೆದಿದ್ದಾರೆ.ಸಂಪರ್ಕ ವಿಳಾಸಃಬಿ. ಅಖಿಲ್ ಬಿನ್ ಲೇಟ್ ರಾಮಕೃಷ್ಣರಾವ್ ಬನಾರಿ, ಬಸ್ತಿಮಾದನಹಳ್ಳಿ, ಬಿಳಿಕೆರೆ ಹೋಬಳಿ, ಹುಣಸೂರು ತಾಲೂಕು, ಮೈಸೂರು ಜಿಲ್ಲೆಮೊ. 70905 21514 ಕೋಟ್‌ವ್ಯವಸಾಯ ಅಂದ್ರೆ ಪ್ಲಾನಿಂಗ್. ಕೃಷಿ ಮಾಡುವ ಮನಸ್ಸು ಇರಬೇಕು. ಕಷ್ಟಾನೂ ಪಡಬೇಕು. ಒಂದೇ ಬೆಳೆ ನಂಬಿದ್ರೆ ಶೇ.99 ಲಾಸ್, ಬಹುಬೆಳೆ ನಂಬಿದ್ರೆ ಸಕ್ಸಸ್ ಗ್ಯಾರಂಟಿ. ಈಗ ಎರೆಹುಳು ಗೊಬ್ಬರ ತಯಾರಿಕೆ ಮತ್ತು ಮಾರಾಟ ಕೂಡ ಆರಂಬಿಸಿದ್ದೀನಿ.- ಬಿ. ಅಖಿಲ್, ಬಸ್ತಿಮಾದನಹಳ್ಳಿ