ನಾಲ್ಕು ವರ್ಷಗಳಿಂದ ನಡೆಯದ ಬಿ.ಕಣಬೂರು ಗ್ರಾಮಸಭೆ

KannadaprabhaNewsNetwork | Published : Jun 14, 2024 1:04 AM

ಸಾರಾಂಶ

ಬಾಳೆಹೊನ್ನೂರು, ಪಟ್ಟಣದ ಬಿ.ಕಣಬೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ 4 ವರ್ಷಗಳಿಂದ ಗ್ರಾಮಸಭೆ ಮತ್ತು ವಾರ್ಡ್ ಸಭೆ ಗಳನ್ನು ನಡೆಸದಿರುವುದರಿಂದ ಗ್ರಾಮದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ

ಸಭೆ ಕರೆಯಲು ಗ್ರಾಮಸ್ಥರ ಒತ್ತಾಯ । ಸಮಸ್ಯೆ ಪರಿಹಾರಕ್ಕೆ ವೇದಿಕೆ ಕಲ್ಪಿಸಲು ಕೋರಿಕೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಬಿ.ಕಣಬೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ 4 ವರ್ಷಗಳಿಂದ ಗ್ರಾಮಸಭೆ ಮತ್ತು ವಾರ್ಡ್ ಸಭೆ ಗಳನ್ನು ನಡೆಸದಿರುವುದರಿಂದ ಗ್ರಾಮದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಬಿ.ಕಣಬೂರು ಗ್ರಾಪಂನಲ್ಲಿ 2020ಕ್ಕೂ ಮೊದಲು ಸಭೆ ನಡೆಸಿದ್ದು, ನಂತರ ಕೊರೋನಾ ಸೋಂಕಿನ ನೆಪ ಹೇಳಿ 2 ವರ್ಷಗಳ ಕಾಲ ಜನಸಂದಣಿ ಸೇರಬಾರದೆಂದು ಯಾವುದೇ ಸಭೆ ನಡೆಸಿರಲಿಲ್ಲ. ಕೊರೋ ನಾ ನಿಯಮಗಳು ಸಡಿಲಗೊಂಡ ಬಳಿಕವೂ ಬಿ.ಕಣಬೂರು ಗ್ರಾಪಂನಿಂದ ಇದುವರೆಗೂ ಗ್ರಾಮ/ ವಾರ್ಡ್ ಸಭೆಗಳನ್ನು ಕರೆದಿಲ್ಲ. ಹಾಗಾಗಿ ಹಲವು ಸಮಸ್ಯೆಗಳು ಗ್ರಾಮದಲ್ಲಿ ಬಗೆಹರಿಯುತ್ತಿಲ್ಲ. ಸಾರ್ವಜನಿಕರ ಕುಂದುಕೊರತೆ ಹೇಳಿಕೊಳ್ಳಲು ವೇದಿಕೆ ಇಲ್ಲವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಗ್ರಾಮಸಭೆ, ಪಂಚಾಯತ್ ರಾಜ್ ಮತ್ತು ಗ್ರಾಮಗಳ ಅಭಿವೃದ್ಧಿ ಆಧಾರಸ್ತಂಭವಾಗಿದ್ದು, ಸ್ಥಳೀಯ ಆಡಳಿತ ಮತ್ತು ಅಭಿವೃದ್ಧಿ ಕುರಿತು ಚರ್ಚಿಸಲು, ಗ್ರಾಮಕ್ಕೆ ಅಗತ್ಯ ಆಧಾರಿತ ಯೋಜನೆ ಮಾಡಲು ಜನರು ಗ್ರಾಮ ಸಭೆ ವೇದಿಕೆ ಬಳಸಿಕೊಳ್ಳುತ್ತಾರೆ.ಗ್ರಾಪಂನ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗುತ್ತದೆ. ಗ್ರಾಪನಲ್ಲಿ ಎಲ್ಲಾ ಪ್ರಮುಖ ನಿರ್ಧಾರ ಗಳನ್ನು ಗ್ರಾಮಸಭೆ ಮೂಲಕ ತೆಗೆದುಕೊಳ್ಳಲಾಗುತ್ತದೆ. ಗ್ರಾಮಸಭೆ ಒಪ್ಪಿಗೆಯಿಲ್ಲದೆ ಯಾವುದೇ ನಿರ್ಧಾರ ಅಧಿಕೃತ ಮತ್ತು ಮಾನ್ಯವಾಗಿರುವುದಿಲ್ಲ.ಗ್ರಾಮಸಭೆ, ಪಂಚಾಯತ್‌ರಾಜ್ ವ್ಯವಸ್ಥೆ ಪ್ರಾಥಮಿಕ ಅಂಗವಾಗಿದ್ದು, ಈ ವ್ಯವಸ್ಥೆಯಲ್ಲಿ ಇದೇ ದೊಡ್ಡ ಮತ್ತು ಮಹತ್ವದ್ದಾಗಿದೆ. ಗ್ರಾಮಸಭೆಯ ನಿರ್ಧಾರಗಳನ್ನು ಬೇರೆ ಯಾವುದೇ ಸಂಸ್ಥೆ ರದ್ದುಗೊಳಿಸಲು ಸಾಧ್ಯವಿಲ್ಲ ವಾಗಿದ್ದು, ಆ ನಿರ್ಣಯ ರದ್ದುಗೊಳಿಸುವ ಅಧಿಕಾರ ಗ್ರಾಮಸಭೆಗೆ ಮಾತ್ರ ಇರುತ್ತದೆ.ಪಂಚಾಯತ್ ರಾಜ್ ಕಾಯ್ದೆಗಳ ಪ್ರಕಾರ ಗ್ರಾಮಸಭೆ ವರ್ಷದಲ್ಲಿ ಕನಿಷ್ಠ 2 ರಿಂದ 4 ಬಾರಿ ಸಭೆ ಸೇರ ಬಹುದಾಗಿದೆ. ಗ್ರಾಪಂಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಯಾವುದೇ ದಿನಗಳಲ್ಲಿ ಗ್ರಾಮಸಭೆ ಕರೆಯಲು ಅವಕಾಶವಿದೆ. ಗ್ರಾಮಸ್ಥರು ಮುಕ್ತವಾಗಿ ಗ್ರಾಮದ ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿದೀಪ ಮುಂತಾದ ಸಮಸ್ಯೆಗಳು, ವಿವಿಧ ಯೋಜನೆಗಳಿಗೆ ಫಲಾನುಭವಿ ಗಳ ಆಯ್ಕೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಅವಕಾಶವಿದೆ. ಆದರೆ ಕಳೆದ 4 ವರ್ಷಗಳಿಂದ ಕನಿಷ್ಠ ವರ್ಷಕ್ಕೆ ಒಂದು ಬಾರಿಯೂ ಗ್ರಾಮಸಭೆ ಕರೆಯದೆ ಸಮಸ್ಯೆ ಗಳನ್ನು ಚರ್ಚಿಸಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ಹಿನ್ನೆಲೆ ಯಲ್ಲಿ ಸಂಬಂಧಿಸಿದ ತಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಆಡಳಿತ ಮಂಡಳಿ ತಕ್ಷಣ ಗ್ರಾಮಸಭೆ ಕರೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.-- ಕೋಟ್ ೧ಗ್ರಾಪಂಗಳಲ್ಲಿ ಕಾಲಕಾಲಕ್ಕೆ ಸರಿಯಾಗಿ ಗ್ರಾಮಸಭೆ ನಡೆಸಿದರೆ ಸಮಸ್ಯೆ ಬಗೆಹರಿಯಲಿದೆ. ಗ್ರಾಮದಲ್ಲಿ ಅನೇಕ ಸಮಸ್ಯೆಗಳಿದ್ದು, ಊರಿನ ಹಿತ ದೃಷ್ಟಿಯಿಂದ ಗ್ರಾಮಸಭೆ ನಡೆಯಬೇಕು. ಸರ್ಕಾರ ಇದಕ್ಕಾಗಿಯೇ ಗ್ರಾಮಸಭೆ ಅವಕಾಶ ನೀಡಿದೆ. ಗ್ರಾಮಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರ ಅಹವಾಲು ಸ್ವೀಕರಿಸಬೇಕಿದೆ. ಆಗ ಮಾತ್ರ ಗ್ರಾಮಸಭೆಗಳು ಯಶಸ್ವಿಯಾಗಲು ಸಾಧ್ಯ. ಇಲ್ಲದಿದ್ದರೆ ಅದು ಕಾಟಾಚಾರದ ಸಭೆ ಆಗಲಿದೆ.- ಹಿರಿಯಣ್ಣ, ಬಿ.ಕಣಬೂರು ಗ್ರಾಮಸ್ಥ.--ಕೋಟ್ ೨ಗ್ರಾಮಸಭೆಯನ್ನು ವರ್ಷಕ್ಕೆ ಎರಡು ಬಾರಿ ಕಡ್ಡಾಯವಾಗಿ ನಡೆಸಬೇಕಿದೆ. ಬಿ.ಕಣಬೂರು ಗ್ರಾಪಂನ ಗ್ರಾಮಸಭೆ ನಾಲ್ಕು ವರ್ಷದಿಂದ ನಡೆಯದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಗುರುವಾರ ಈ ಬಗ್ಗೆ ಗ್ರಾಪಂ ಪಿಡಿಓ ಅವರಿಂದ ಮಾಹಿತಿ ಪಡೆಯಲಾಗುವುದು.ನವೀನ್‌ಕುಮಾರ್, ಇಒ, ಎನ್.ಆರ್.ಪುರ ತಾಪಂ.-- ಕೋಟ್ ೩ಫೆಬ್ರವರಿ ತಿಂಗಳಿನಲ್ಲಿ ಎನ್‌ಆರ್‌ಇಜಿ ಗ್ರಾಮಸಭೆ ನಡೆಸಲಾಗಿದೆ. ಸಾಮಾನ್ಯ ಗ್ರಾಮಸಭೆ ನಡೆಸಲು ಗ್ರಾಪಂ ಅಧ್ಯಕ್ಷರು ದಿನಾಂಕ ನಿಗದಿಪಡಿಸಬೇಕಿದೆ. ಅವರು ದಿನಾಂಕ ನಿಗದಿಪಡಿಸಿದರೆ ಗ್ರಾಮಸಭೆ ಪ್ರಕಟಣೆ ಹೊರಡಿಸಲಾಗುತ್ತದೆ. ಗ್ರಾಮಸಭೆ ನಡೆಸಲು ದಿನಾಂಕ ನಿಗದಿಗೆ ಅಧ್ಯಕ್ಷರ ಬಳಿ ಚರ್ಚಿಸಲಾಗುವುದು.- ಕಾಶಪ್ಪ,

ಬಿ.ಕಣಬೂರು ಗ್ರಾಪಂ ಪಿಡಿಓ.೧೨ಬಿಹೆಚ್‌ಆರ್ ೧:

ಬಿ.ಕಣಬೂರು ಗ್ರಾಪಂ (ಸಂಗ್ರಹ ಚಿತ್ರ)

Share this article