ಬಾಬು ಜಗಜೀವನರಾಂ ಕೊಡುಗೆ ಅಪಾರ: ತಹಸೀಲ್ದಾರ್ ವಿಜಯ್ ಕುಮಾರ್

KannadaprabhaNewsNetwork | Published : Jul 7, 2024 1:18 AM

ಸಾರಾಂಶ

ಬಾಬು ಜಗಜೀವನ್ ರಾಂ ಉಪ ಪ್ರಧಾನಿಗಳಾಗಿ ಬಡವರ, ಹಿಂದುಳಿದವರ ಹಸಿವು ನೀಗಿಸಲು ಹಸಿರು ಕ್ರಾಂತಿ ಮಾಡಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ವಿಜಯ್ ಕುಮಾರ್ ತಿಳಿಸಿದರು. ಹೊಸಕೋಟೆಯಲ್ಲಿ ಬಾಬು ಜಗಜೀವನ್ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

-ಬಾಬು ಜಗಜೀವನ್‌ ರಾಂ ಪುಣ್ಯಸ್ಮರಣೆಕನ್ನಡಪ್ರಭ ವಾರ್ತೆ ಹೊಸಕೋಟೆ

ಬಾಬು ಜಗಜೀವನ್ ರಾಂ ಉಪ ಪ್ರಧಾನಿಗಳಾಗಿ ಬಡವರ, ಹಿಂದುಳಿದವರ ಹಸಿವು ನೀಗಿಸಲು ಹಸಿರು ಕ್ರಾಂತಿ ಮಾಡಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ವಿಜಯ್ ಕುಮಾರ್ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವವನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದ ಹಲವು ಮಹನೀಯರಿದ್ದಾರೆ. ಆದರೂ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟರೂಪ ಕೊಟ್ಟವರಲ್ಲಿ ಬಾಬು ಜಗಜೀವನ್ ರಾಂ ಒಬ್ಬರು. ದೇಶದ ದಲಿತ ಸಮುದಾಯ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಬಾಬುಜೀ ಅವರು ದಲಿತರ ಕುರಿತು ಸಹಾನುಭೂತಿ ಹೊಂದಿದ್ದರು. ತಮ್ಮ ಜ್ಞಾನ ಮತ್ತು ವ್ಯಾಪಕ ದೃಷ್ಟಿಕೋನದಿಂದ ದೇಶಸೇವೆ ಮಾಡಿ ಸರ್ವಜನರ ಕಲ್ಯಾಣದ ಕನಸು ಕಂಡಿದ್ದವರು. ಆದ್ದರಿಂದ ಅವರ ಆದರ್ಶಗಳನ್ನು ಇಂದಿನ ಯುವಪೀಳಿಗೆ ಪಾಲಿಸುವಂತಾಗಬೇಕು. ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು ಎಂದು ಹೇಳಿದರು.

ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಕಾರ್ಯಕ್ರಮವನ್ನು ಎಲ್ಲ ಸಮುದಾಯ ಒಳಗೊಂಡಂತೆ ಮಾಡಬೇಕು ಎಂಬ ನಮ್ಮ ಮನವಿಗೆ ಮಾನ್ಯತೆ ಸಿಕ್ಕಿಲ್ಲ. ದೇಶದಲ್ಲಿ ಜಾತಿ ವ್ಯವಸ್ಥೆ ಬಲವಾಗಿ ಬೇರೂರಿದ್ದು ಇನ್ನು ನಿರ್ಮೂಲನೆ ಆಗಿಲ್ಲ ಎಂದರು. ಅಧಿಕಾರಿಗಳ ಗೈರು ವ್ಯಾಪಕ ಖಂಡನೆ:ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ತೀವ್ರವಾಗಿ ಖಂಡಿಸಿದರು. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದು ಅಧಿಕಾರಿಗಳು ಹಾಜರಿದ್ದು ದಲಿತಪರ ಸಂಘಟನೆಯ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಆದರೆ ಪ್ರತಿ ಬಾರಿ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳ ಗೈರು ಎದ್ದುಕಾಣುತ್ತದೆ. ಇದನ್ನು ತಹಸೀಲ್ದಾರ್ ಅವರು ಸರಿಪಡಿಸಬೇಕು ಎಂದು ತಿಳಿಸಿದರು.

ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜು, ತಾಲೂಕು ಸಮಾಜ ಕಲ್ಯಾಣಧಿಕಾರಿ ಸಿದ್ಧರಾಜು, ದಲಿತ ಪರ ಹೋರಾಟಗಾರ ನರಸಿಂಹಯ್ಯ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್‌ ಇತರರಿದ್ದರು.

Share this article