ಬಾಬು ಜಗಜೀವನ ರಾಮ್‌ ಬದ್ದತೆ ಎಲ್ಲರಿಗೂ ಪ್ರೇರಣೆ

KannadaprabhaNewsNetwork | Published : Jul 7, 2024 1:25 AM

ಸಾರಾಂಶ

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಡಾ.ಬಾಬು ಜಗಜೀವನ ರಾಮ್‌ ಅವರ 38ನೇ ಪುಣ್ಯಸ್ಮರಣೆ ಆಚರಿಸಲಾಯಿತು.

38ನೇ ಪುಣ್ಯ ಸ್ಮರಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಫೀರ್ ಅಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್‌ ಅವರ ಬದ್ದತೆ ಹಾಗೂ ದೇಶ ಪ್ರೇಮ ಎಲ್ಲರಿಗೂ ಪ್ರೇರಣೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಡಾ.ಬಾಬು ಜಗಜೀವನ ರಾಮ್‌ ಅವರ 38ನೇ ಪುಣ್ಯಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾಗಿದ್ದ ಡಾ.ಬಾಬು ಜಗಜೀವನರಾಂರವರು ಪಕ್ಷಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಅನೇಕ ಖಾತೆಗಳನ್ನು ನಿಭಾಯಿಸಿದ್ದಾರೆ. ದೇಶದಲ್ಲಿ ಆಹಾರಕ್ಕೆ ಕೊರತೆಯಾಗಿ ವಿದೇಶದಿಂದ ಕೆಂಪು ಜೋಳ ತರಿಸಿಕೊಳ್ಳುತ್ತಿದ್ದ ಪರಿಸ್ಥಿತಿಯಲ್ಲಿ ನೀರಾವರಿಗೆ ಒತ್ತು ನೀಡಿ ವಿದೇಶಕ್ಕೆ ರಫ್ತು ಮಾಡುವಷ್ಟರ ಮಟ್ಟಿಗೆ ಆಹಾರ ಧಾನ್ಯಗಳನ್ನು ಬೆಳೆಯುವಲ್ಲಿ ರೈತರಿಗೆ ಪ್ರೋತ್ಸಾಹ ನೀಡಿದರು ಎಂದರು.

ನೆಹರು, ಲಾಲ್‍ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಅನೇಕ ಖಾತೆಗಳನ್ನು ನಿಭಾಯಿಸಿದ್ದಾರೆ. ರಕ್ಷಣಾ ಮಂತ್ರಿಯಾಗಿ ಚೀನಾ ಭಾರತದ ಮೇಲೆ ಯುದ್ದಕ್ಕೆ ಬಂದಾಗ ಎದುರಿಸಿ ಹಿಮ್ಮೆಟ್ಟಿಸಿದ ದಿಟ್ಟತನ ಅವರದು. ದೊಡ್ಡ ವ್ಯಕ್ತಿತ್ವದವರಾಗಿದ್ದ ಡಾ.ಬಾಬುಜಗಜೀವನ ರಾಮ್‌ ಅವರನ್ನು ಎಲ್ಲರೂ ಸ್ಮರಿಸಲೇಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ, ಬಿಹಾರದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಡಾ.ಬಾಬುಜಗಜೀವನ ರಾಮ್‌ ರವರು ದಲಿತರೆನ್ನುವ ಕಾರಣಕ್ಕಾಗಿ ಪ್ರಧಾನಿ ಹುದ್ದೆಯಿಂದ ವಂಚಿತರಾದರು. ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿ ದಲಿತರ, ಶೋಷಿತರಿಗೆ ಧ್ವನಿ ತುಂಬಿ ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಂಡರು ಎಂದರು.

ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಚಾಂದ್‍ಪೀರ್, ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್‍ನವಾಜ್, ಎಸ್.ಸಿ.ಸೆಲ್ ಉಪಾಧ್ಯಕ್ಷ ಡಿ.ಕುಮಾರ್ ಪಿಳ್ಳೆಕೆರನ ಹಳ್ಳಿ, ಸೈಯದ್ ಸೈಫುಲ್ಲಾ, ಗ್ರಾಪಂ ಅಧ್ಯಕ್ಷ ದೇವೇಂದ್ರಪ್ಪ, ಕಾರ್ಮಿಕ ವಿಭಾಗದ ಸಂಘಟನಾ ಕಾರ್ಯದರ್ಶಿ ಸೈಯದ್ ಅಕ್ಬರ್, ರೇಣುಕ ಶಿವು, ನಗರಸಭೆ ನಾಮ ನಿರ್ದೇಶನ ಸದಸ್ಯರಾದ ಎಚ್.ಶಬ್ಬೀರ್‌ ಭಾಷ, ನರಸಿಂಹ ಮೂರ್ತಿ, ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಮಂಜಣ್ಣ, ದಲಿತ ಮುಖಂಡ ಬಿ.ರಾಜಪ್ಪ ಇದ್ದರು.

Share this article