ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾ. ಬಾಬು ಜಗಜೀವನ್ ರಾಂ ಅವರ 38ನೇ ಪುಣ್ಯ ಸ್ಮರಣೆ ಸರಳ ಸಮಾರಂಭ ಏರ್ಪಡಿಸಲಾಗಿತ್ತು. ಡಾ. ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿ ಮಾದಿಗ ದಂಡೋರ ಸಮಿತಿ ತಾಲೂಕು ಘಟಕ ಅಧ್ಯಕ್ಷ ಎ. ಪಿ. ಚಂದ್ರಯ್ಯ ಮಾತನಾಡಿದರು.ಡಾ. ಬಾಬು ಜಗಜೀವನ್ ರಾಂ ಅವರು ಈ ದೇಶ ಕಂಡ ಅಪ್ರತಿಮ ಹೋರಾಟಗಾರರಲ್ಲಿ ಒಬ್ಬರಾಗಿದ್ದಾರೆ, ದೇಶದ ರಕ್ಷಣಾ ಮತ್ತು ಕೃಷಿ ಹಾಗೂ ಕಾರ್ಮಿಕ ಇಲಾಖೆಗಳ ಮಂತ್ರಿಯಾಗಿ, ದೇಶದ ಉಪ ಪ್ರಧಾನಮಂತ್ರಿಯಾಗಿ ಸಲ್ಲಿಸಿರುವ ಅವರ ಸೇವೆ ಅವಿಸ್ಮರಣೀಯವಾದುದು, ಅಂಥ ಮಹಾನ್ ನಾಯಕರಿಗೆ ಭಾರತರತ್ನ ಪ್ರಶಸ್ತಿ ಪುರಸ್ಕಾರ ಇನ್ನೂ ಲಭಿಸದೇ ಇರುವುದು ದೇಶದ ದಲಿತರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವಾಗಿದೆ, ಕೇವಲ ಅವರ ಜನ್ಮ ಜಯಂತಿ ಹಾಗೂ ಪುಣ್ಯ ಸ್ಮರಣೆ ದಿನಗಳ ಸಂದರ್ಭದಲ್ಲಿ ಬಾಬು ಜಗಜೀವನ್ ರಾಂ ಅವರ ಬಗ್ಗೆ ಸರ್ಕಾರಗಳು ಉದ್ದುದ್ದ ಭಾಷಣ ಮಾಡುವುದನ್ನು ಬಿಟ್ಟು ಈಗಲಾದರೂ ಅವರಿಗೆ ಭಾರತ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸುವ ಮೂಲಕ ದೇಶದ ದಲಿತರ ಆಶೋತ್ತರಗಳಿಗೆ ಮನ್ನಣೆ ಸಿಗುವಂತಾಗಲಿ ಎಂದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ ಮಾತನಾಡಿ, ಭಾರತ ದೇಶದಿಂದ ಬಾಂಗ್ಲಾದೇಶ ಇಬ್ಭಾಗವಾದ ಸಂದರ್ಭದಲ್ಲಿ ಡಾ. ಬಾಬು ಜಗಜೀವನ್ ರಾಂ ಅವರ ಪರಿಶ್ರಮ ಮತ್ತು ಅವರ ಚಾಣಾಕ್ಷತೆಯನ್ನು ಮರೆಯಲಾಗದು, ಕಾರ್ಮಿಕ ಸಚಿವರಾಗಿ ಅವರು ಜಾರಿಗೆ ತಂದ ಕಾರ್ಮಿಕರ ಪರ ಕಾನೂನುಗಳು ಕಾರ್ಮಿಕ ವರ್ಗದ ಜೀವನಾಡಿಯಾಗಿವೆ. ಇಂದಿನ ಆಧುನಿಕ ಯುಗದಲ್ಲಿ ಯುವಕರು ಬಾಬು ಜಗಜೀವನ್ ರಾಂ ಅವರ ಆದರ್ಶಗಳು ಮತ್ತು ಹೋರಾಟ ಮನೋಭಾವವನ್ನು ಅಳವಡಿಸಿಕೊಂಡು, ಮಾದರಿ ವ್ಯಕ್ತಿಗಳಾಗಿ ಜೀವಿಸಬೇಕು ಎಂದರು.ದಲಿತ ಮುಖಂಡ ಶಿವಮೂರ್ತಿ ಗುತ್ತಿನಕೆರೆ ಮಾತನಾಡಿ, ಇಂದು ಬಾಬು ಜಗಜೀವನ್ ರಾಂ ಅವರ ಪುಣ್ಯ ಸ್ಮರಣೆ ಮಾಡುತ್ತಿರುವುದು ಅರ್ಥಪೂರ್ಣವಾದುದು, ಎಲ್ಲ ದಲಿತ ಸಂಘಟನೆಗಳು ತಮ್ಮ ತಮ್ಮ ಪ್ರತಿಷ್ಠೆ ಬದಿಗಿಟ್ಟು ನಾವೆಲ್ಲರೂ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು, ಇದರಿಂದ ಒಗ್ಗಟ್ಟಿನಲ್ಲಿ ಬಲ ಇದೆ ಎಂಬುದನ್ನು ಇಡೀ ದೇಶಕ್ಕೆ ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಸಮುದಾಯಗಳು ಇನ್ನೂ ಹೆಚ್ಚಿನ ತೊಂದರೆ- ಕಷ್ಟದ ದಿನಗಳನ್ನು ಅನುಭವಿಸಬೇಕಾಗುತ್ತದೆ, ಈಗಿನಿಂದಲೇ ಒಗ್ಗಟ್ಟು ಮತ್ತು ಸಂಘಟನೆ, ಹೋರಾಟದ ನಿಟ್ಟಿನಲ್ಲಿ ಹೊಂದಾಣಿಕೆಯ ಹೆಜ್ಜೆ ಇಡುವುದು ಅತ್ಯಗತ್ಯವಾಗಿದೆ, ದಲಿತ ಸಮುದಾಯಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರಬೇಕು ಎಂದರು.
ತಾಲೂಕು ದಲಿತ ಮುಖಂಡರಾದ ಜಯಕುಮಾರ್, ವೆಂಕಟೇಶ್ ಬಾಣಾವರ, ಸುನಿಲ್ ನಾಯ್ಕ್ , ಚಂದ್ರಪ್ಪ ಮಾಡಾಳು, ಮೂಡ್ಲಪ್ಪ ಮಾಡಾಳು, ಭಾಸ್ಕರ್ ಜಾಜೂರು, ರಮೇಶ್ ಕಲ್ಗುಂಡಿ, ರೇಣುಕಪ್ಪ , ಕಿರಣ್ ಅರಕೆರೆ, ಪ್ರದೀಪ್, ಲೋಕೇಶ್, ಮಹೇಶ್ ಬಾಣಾವರ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ದಲಿತ ಮುಖಂಡರು ಸೇರಿ ಇತರರು ಉಪಸ್ಥಿತರಿದ್ದರು.ಫೋಟೋ ಶೀರ್ಷಿಖೆ
: ಡಾ. ಬಾಬು ಜಗಜೀವನ್ ರಾಂ ಅವರ 38ನೇ ಪುಣ್ಯ ಸ್ಮರಣೆಯ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಮಾದಿಗ ದಂಡೋರ ಸಮಿತಿ ಸದಸ್ಯರು ಪುಷ್ಪ ನಮನ ಸಲ್ಲಿಸಿದರು.