ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಮಾಜದ ಕೆಳಸ್ತರದಲ್ಲಿ ಹುಟ್ಟಿ ಬದುಕನ್ನೇ ಸವಾಲಾಗಿ ಸ್ವೀಕರಿಸಿ, ಮನುಕುಲಕ್ಕೆ ಮಾದರಿ ಎನ್ನುವಂತ ಕೊಡುಗೆ ನೀಡಿದ ಮಹಾನ್ ಚೇತನ ಡಾ.ಬಾಬು ಜಗಜೀವನರಾಮ್ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸ್ಮರಿಸಿದರು.ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನರಾಮ ಅವರ 117ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಅವರು, ಬಡ ಕುಟುಂಬದಲ್ಲಿ ಹುಟ್ಟಿದ ಜಗಜೀವನರಾಮ್ ಉಪಪ್ರಧಾನ ಮಂತ್ರಿಯವರೆಗೆ ಸಾಗಿ ಬಂದ ದಾರಿ, ಜೀವನ ಮೌಲ್ಯವನ್ನು ಇವತ್ತಿನ ಯುವಜನತೆಯೂ ಅನುಸರಿಸಬೇಕಿದೆ. ಮುಖ್ಯವಾಗಿ ನಮ್ಮ ಮಕ್ಕಳಲ್ಲಿ ಜಗಜೀವನರಾಮ್ ಅವರ ಜೀವನ ಪಾಠವನ್ನು ಹೇಳಿಕೊಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ ಕುರೇರ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಮ್ ಅವರ ಕಂಡ ಕಷ್ಟಗಳು, ಹೋರಾಟದ ಬದುಕು, ಬೆಳೆದು ಬಂದ ದಾರಿ ಇಂದಿನ ಯುವ ಜನರಿಗೆ ದಾರಿದೀಪವಾಗಿದೆ. ಸ್ವಾಭಿಮಾನ ಭಾರತಕ್ಕಾಗಿ ಆಹಾರ ಸಮತೋಲ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಸಿರು ಕ್ರಾಂತಿ ಹುಟ್ಟುಹಾಕಿದ್ದರು. ಶೋಷಿತ ಮತ್ತು ದುರ್ಬಲರ ವರ್ಗದವರಿಗೂ ತಮ್ಮ ಜೀವನವನ್ನೇ ಮೀಸಲಾಗಿಟ್ಟಿದ್ದರು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, 1974 ರಲ್ಲಿ ಸರ್ಕಾರ ಗರೀಬಿ ಹಟಾವೋ ಜಾರಿಗೆ ತಂದ ಹಿನ್ನೆಲೆಯಲ್ಲಿ ಅದಕ್ಕೆ ಮೂಲ ಕಾರಣಿಕರ್ತರು ಬಾಬುಜಿ. ಭಾರತದಲ್ಲಿರುವ ಆಹಾರ ಪದ್ದತಿಯನ್ನು ಉತ್ತೇಜನಗೊಳಿಸುವ ಹಿನ್ನೆಲೆಯಲ್ಲಿ ಹಸಿರು ಕ್ರಾಂತಿಯನ್ನು ಹುಟ್ಟು ಹಾಕಿದರು. ಈ ದಿಶೆಯಲ್ಲಿ ಬಾಬು ಜಗಜೀವನರಾಮ್ ಅವರನ್ನು ಹಸಿರು ಕ್ರಾಂತಿಯ ಹರಿಕಾರರೆಂದು ಕರೆಯಲಾಯಿತು. ದೇಶದ ಸ್ವತಂತ್ರ ಪೂರ್ವ ಹಾಗೂ ನಂತರದ ಸಮಯದಲ್ಲಿ ದೇಶಕ್ಕೆ ಬಾಬುಜಿ ಅವರ ಸೇವೆ ಅನನ್ಯವಾಗಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು.(ಪೋಟೊ 5 ಬಿಕೆಟಿ3,: ಡಾ.ಬಾಬು ಜಗಜೀವನರಾಂ ಅವರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಪುಷ್ಪ ನಮನ ಸಲ್ಲಿಸಿದರು.ಕೋಟ್
ಎಲ್ಲ ಇದ್ದು ಸಾಧನೆ ಮಾಡುವುದು ದೊಡ್ಡದಲ್ಲ, ನೀರಾವರಿ ಜಮೀನು ಇದ್ದು ಬತ್ತ ಬೆಳೆಯುವುದು ಕಷ್ಟವಲ್ಲ. ಆದರೆ ಕಷ್ಟ, ತೊಂದರೆ, ಅವಮಾನಗಳನ್ನು ಅನುಭವಿಸಿ ಮೆಟ್ಟಿ ನಿಂತು ಬೆಳೆದು ತೋರಿಸುವುದು ನಿಜವಾದ ಸಾಧನೆ. ನೀರು ಕುಡಿಯುವಲ್ಲಿ ಜಗಜೀವನರಾಮ ಅವರಿಗೆ ಸಮಾನತೆ ಇರಲಿಲ್ಲ. ತಮಗೆ ಆಗುತ್ತಿರುವ ದೌರ್ಜನ್ಯ, ಕಷ್ಟಗಳು ಮುಂದಿನ ಜನಾಂಗಕ್ಕೆ ಆಗಬಾರದೆಂಬ ದೃಢ ನಿರ್ಧಾರವಿಟ್ಟುಕೊಂಡು ಅವರ ನೈತಿಕ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರು ಸಾಗಿ ಬಂದ ದಾರಿ ಇಂದಿನ ಯುವಜನತೆಗೆ ಆದರ್ಶವಾದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ.ಜಾನಕಿ.ಕೆ.ಎಂ, ಜಿಲ್ಲಾಧಿಕಾರಿ.