ಹಳಿಯಾಳ: ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು. ಇದು ಡಾ. ಬಾಬು ಜಗಜೀವನ ರಾಂ ಅವರ ಉದಾತ್ತ ವಿಚಾರವಾಗಿತ್ತು ಎಂದು ಹಳಿಯಾಳ ತಾಪಂ ಇಒ ಪರಶುರಾಮ ಘಸ್ತೆ ಹೇಳಿದರು.
ಪಟ್ಟಣದ ಆಡಳಿತ ಸೌಧದಲ್ಲಿ ತಾಲೂಕಾಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ. ಬಾಬು ಜಗಜೀವಜರಾಂ 117ನೇ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.ಕಾರ್ಮಿಕರು ಮತ್ತು ದೀನದಲಿತರ ಉದ್ಧಾರ ಹಾಗೂ ಸಾಮಾಜಿಕ ನ್ಯಾಯ, ಸಾಮಾಜಿಕ ಸಮಾನತೆಗಾಗಿ ಬಾಬೂಜಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಹಾಗೂ ಮಾದರಿಯಾಗಿದೆ ಎಂದರು.
ಡಾ. ಜಗಜೀವನ ರಾಂ ಅವರ ಬಗ್ಗೆ ಉಪನ್ಯಾಸ ನೀಡಿದ ಮೌನೇಶ್ವರ ಬಾರೀಕರ ದೇಶದ ಇತಿಹಾಸದಲ್ಲಿ ಹಸಿರು ಕ್ರಾಂತಿಯ ಹರಿಕಾರರೆಂದೇ ಅಚ್ಚಳಿಯದ ಮಾದರಿ ಸೇವೆ ಸಲ್ಲಿಸಿದ ಡಾ. ಜಗಜೀವನ ರಾಂ ಅವರು ದೇಶದ ಆರ್ಥಿಕತೆ ಕೃಷಿರಂಗವೂ ಮೂಲ ಆಧಾರವಾಗಿದೆ ಎಂದು ತೋರಿಸಿದ ಮಹಾನುಭಾವರಾಗಿದ್ದಾರೆ ಎಂದರು.ಸ್ವಾತಂತ್ರ ಹೋರಾಟಗಾರರಾಗಿದ್ದ ಬಾಬೂಜಿ ದಲಿತರ ಹಾಗೂ ಹಿಂದುಳಿದ ಮತ್ತು ಶೋಷಿತರ ನೋವನ್ನು ಸಮೀಪದಿಂದ ಕಂಡವರಾಗಿದ್ದರಿಂದ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಾಮಾಣಿಕ ಸೇವೆ ಸಲ್ಲಿಸಿದರು. ತಮ್ಮ ಜೀವನವನ್ನು ಬಡವರ ಮತ್ತು ದಲಿತರ ಅಭಿವೃದ್ಧಿಗಾಗಿ ಮುಡಿಪಾಗಿಟ್ಟರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಆರ್.ಎಚ್. ಭಾಗವಾನ ವಹಿಸಿದ್ದರು, ಗ್ರೇಡ್-2 ತಹಸೀಲ್ದಾರ್ ಜಿ.ಕೆ. ರತ್ನಾಕರ, ಶಿರಸ್ತೇದಾರರಾದ ಅನಂತ ಚಿಪ್ಪಲಗಟ್ಟಿ, ಹನುಮಂತ ಪಾರೋಡಕರ, ಮಹಾಂತೇಶ ದೊಡ್ಮಣಿ, ಲೋಕೋಪಯೋಗಿ ಇಲಾಖೆಯ ಜೆಇ ಸಂಜು ನಾಯ್ಕ, ಮುಖಂಡರಾದ ಮಂಜುನಾಥ ಗಜಾಕೋಶ, ಎಲ್.ಡಿ. ಗಜಾಜೋಶ, ಸಾಮಾಜಿಕ ಹೋರಾಟಗಾರ ಮಂಜುನಾಥ ಶೇರಖಾನೆ ಹಾಗೂ ಸಮಾಜ ಕಲ್ಯಾಣ ಇಲಾಖೆ ದರ್ಶನ ನಾಯ್ಕ ಇದ್ದರು. ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ ಕಾರ್ಯಕ್ರಮ ನಿರ್ವಹಿಸಿದರು.ಬಾಬೂಜಿ ಆದರ್ಶ ಎಲ್ಲರಿಗೂ ಪ್ರೇರಣೆ
ಕಾರವಾರ: ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಡಾ. ಬಾಬು ಜಗಜೀವನರಾಮ್ ಅವರ 117ನೇ ಜಯಂತಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ ಆದರ್ಶ ಮೌಲ್ಯಗಳು ಎಲ್ಲರಿಗೂ ಪ್ರೇರಣೆಯಾಗಿದೆ. ಅವರು ಹಾಕಿಕೊಟ್ಟ ಅಭಿವೃದ್ಧಿ ಮಾರ್ಗದಲ್ಲಿ ನಡೆಯಬೇಕು ಎಂದರು.ಗೋಖಲೆ ಸೆಂಟೆನರಿ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಸ್ವಾಮಿ ವಸ್ತ್ರದ ಉಪನ್ಯಾಸ ನೀಡಿ, ಕೃಷಿ, ರೈಲ್ವೆ, ರಕ್ಷಣಾ ಮಂತ್ರಿ ಸೇರಿದಂತೆ ದೇಶದ ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಡಾ. ಬಾಬು ಜಗಜೀವನರಾಮ್ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿಸುವ ಮೂಲಕ ಹಸಿರು ಕ್ರಾಂತಿಗೆ ಚಾಲನೆ ನೀಡಿದರು. ಅವರ ನಾಯಕತ್ವದ ಮೌಲ್ಯಗಳು, ದೇಶಕ್ಕೋಸ್ಕರ ಅವರ ಹೊಂದಿದ್ದ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಹೆಚ್ಚುವರಿ ಜಿಲ್ಲಾ ವರಿಷ್ಠ ಸಿ.ಟಿ. ಜಯಕುಮಾರ, ಜಿಪಂ ಉಪಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ, ತಾಪಂ ಆಡಳಿತಾಧಿಕಾರಿ ಸೋಮಶೇಖರ ಮೆಸ್ತಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ. ಸತೀಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಉಮೇಶ ವೈ. ಕೆ. ಇದ್ದರು.