- 3 ತಿಂಗಳಿಂದ ಗ್ರಾಮದ ಜನರ ಮೇಲೆ ಆಗಾಗ್ಗೆ ದಾಳಿ ನಡೆಸಿ ಕೀಟಲೇ ಮಾಡುತ್ತಿದ್ದ ಕೋತಿ
- ಕೋತಿ ಕಾಟದಿಂದ ಪಾರಾಗಲೆಂದು ಕೈಯಲ್ಲಿ ದೊಣ್ಣೆ, ಕೋಲು ಹಿಡಿದೇ ಸಂಚರಿಸುತ್ತಿದ್ದ ಜನತೆ- ಬಾದಾಮಿಯ ಚೋಳಚಗುಡ್ಡದ ವೀರಯ್ಯ ಮೃತ್ಯುಂಜಯ ಸರಗಣಚಾರಿ ತಂಡಕ್ಕೆ ಅಭಿನಂದನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮೂರ್ನಾಲ್ಕು ತಿಂಗಳಿಂದ ಒಂಟಿಯಾಗಿ ಓಡಾಡುವವರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯವೊಂದನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಕರೆಸಿದ ಬಾಗಲಕೋಟೆ ಜಿಲ್ಲೆ ತಂಡದಿಂದ ಗುರುವಾರ ಸೆರೆಹಿಡಿಯಲಾಗಿದೆ. ಇದರಿಂದ ಮುಷ್ಯನ ದಾಳಿಗೆ ರೋಸಿಹೋಗಿದ್ದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಸೆರೆಹಿಡಿಯಲಾದ ಮುಷ್ಯ ನಡೆದಾಡುವ ಗ್ರಾಮಸ್ಥರಷ್ಟೇ ಅಲ್ಲ, ಟ್ರ್ಯಾಕ್ಟರ್, ಬೈಕ್‌ಗಳಲ್ಲಿ ಸಂಚರಿಸುವವರ ಮೇಲೆಯೂ ಏಕಾಏಕಿ ದಾಳಿ ಮಾಡುತ್ತಿತ್ತು. ಶಾಲೆಗೆ ಮಕ್ಕಳನ್ನು ಒಂಟಿಯಾಗಿ ಕಳಿಸುವುದು ಹಾಗೂ ಶಾಲೆಯಿಂದ ಕರೆತರುವುದು ಸಹ ಕಷ್ಟವಾಗಿತ್ತು. ಇದರಿಂದ ಗ್ರಾಮದಲ್ಲಿ ಒಂಟಿಯಾಗಿ ಓಡಾಡುವ ಜನರು ಕೈಯಲ್ಲಿ ಕೋಲು, ದೊಣ್ಣೆಗಳನ್ನು ಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಕಳೆದ ಮೂರು ನಾಲ್ಕು ತಿಂಗಳಿಂದ ಗ್ರಾಮದ ನಾಲ್ಕು ಜನರ ಮೇಲೆ ಮುಷ್ಯ ದಾಳಿ ಮಾಡಿದೆ. ಈ ಮುಷ್ಯವನ್ನು ಸೆರೆ ಹಿಡಿಯಲು ಸ್ಥಳೀಯವಾಗಿ ಯಾವುದೇ ನುರಿತ ತಂಡಗಳು ಇಲ್ಲ. ಆದಕಾರಣ, ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲೂಕು, ಚೋಳಚಗುಡ್ಡದ ವೀರಯ್ಯ ಮೃತ್ಯುಂಜಯ ಸರಗಣಚಾರಿ ಎಂಬವರ ತಂಡವನ್ನು ಆಶ್ರಯಿಸಲಾಯಿತು. ಮುಷ್ಯ ಹಿಡಿಯುವ ಚತುರತೆ ಬಲ್ಲ ಈ ತಂಡವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯವರು ಸಂಪರ್ಕಿಸಿ, ಗ್ರಾಮಕ್ಕೆ ಕರೆತಂದಿದ್ದರು.ಬುಧವಾರ ಬೆಳಗ್ಗೆ ಮುಷ್ಯ ಹಿಡಿಯುವ ಬೋನ್ ಸಮೇತ ಗ್ರಾಮಕ್ಕೆ ಬಂದ ಮೂರು ಜನರ ತಂಡ ಸುದೀರ್ಘ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಕಡೆಗೂ ದಾಳಿಕೋರ ಮುಷ್ಯವನ್ನು ಗುರುವಾರ ಸೆರೆ ಹಿಡಿದಿದೆ ಎಂದು ಗ್ರಾ.ಪಂ.ನವರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಗ್ರಾ.ಪಂ. ಅಧ್ಯಕ್ಷ ಅಪ್ಪಲ ರಾಜು, ಉಪಾಧ್ಯಕ್ಷೆ ಗೌರಮ್ಮ ತಿಪ್ಪೇಶ್, ಸದಸ್ಯರಾದ ಬಿ.ವೀರೇಶ್, ರೇಣುಕಮ್ಮ ರಾಮಪ್ಪ, ಆಫ್ರಿನ್ ತಾಜ್ ಮಹಮ್ಮದ್ ಅಲಿ, ಹಸೀನಾ ಜಾನ್ ಮಹಮ್ಮದ್ ರಸೂಲ್, ನೀಲಮ್ಮ, ಕಲ್ಪನಾ ಗಣೇಶ್, ಕೆ.ಎಸ್.ಚಂದ್ರಪ್ಪ, ಎಚ್.ಬಿ. ನಾಗರಾಜ್, ರಮೇಶ್, ಪಿಡಿಒ ಎಚ್.ಎಸ್. ಶಿವಕುಮಾರ್, ಕಾರ್ಯದರ್ಶಿ ಪಾಲಾಕ್ಷಪ್ಪ, ಸಿಬ್ಬಂದಿ ರೇಣುಕಮ್ಮ, ವೆಂಕಟೇಶ್, ರುದ್ರೇಶ್, ಜೊತೆಯಲ್ಲಿದ್ದು ಅಭಿನಂದಿಸಿದರು.ಸೆರೆಹಿಡಿಯಲಾದ ಮುಷ್ಯವನ್ನು ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯವರು ಸೂಚಿಸಲಾದ ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಮುಷ್ಯ ಹಿಡಿಯುವ ತಂಡದ ಮುಖ್ಯಸ್ಥ ವೀರಯ್ಯ ಮೃತ್ಯುಂಜಯ ಸರಗಣಾಚಾರಿ ಹೇಳಿದರು.
- - - -22ಎಚ್.ಎಲ್.ಐ2:ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಮುಷ್ಯನನ್ನು ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಬಾಗಲಕೋಟೆ ಜಿಲ್ಲೆ ನುರಿತ ತಂಡದ ನೆರವಿನಿಂದ ಸೆರೆಹಿಡಿಯಲಾಯಿತು. -22ಎಚ್.ಎಲ್.ಐ2ಎಃ:
ಕೆಲ ತಿಂಗಳಿಂದ ಗ್ರಾಮಸ್ಥರಿಗೆ ದಾಳಿ ನಡೆಸುತ್ತಿದ್ದ ಮುಷ್ಯವನ್ನು ಬಾಗಲಕೋಟೆ ಜಿಲ್ಲಾ ಬಾದಾಮಿ ತಾಲೂಕು ಚೋಳಚಗುಡ್ಡದ ಮುಷ್ಯ ಹಿಡಿಯುವ ತಂಡದಿಂದ ಸೆರೆಹಿಡಿಯಲಾಯಿತು. ಮುಷ್ಯವನ್ನು ವಾಹನದಲ್ಲಿ ಸಾಗಿಸುವ ವೇಳೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.