ಕೊಳಚೆ ನೀರಿನಿಂದ ಬೈರಮಂಗಲ ಕೆರೆಗೆ ಮುಕ್ತಿ!

KannadaprabhaNewsNetwork | Published : Mar 21, 2025 12:35 AM

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ)ದಿಂದ ಟೌನ್ ಶಿಪ್ (ಸಮಗ್ರ ಉಪನಗರ ಯೋಜನೆ ) ಅನುಷ್ಠಾನಗೊಳ್ಳುವುದರಿಂದ ಕೊಳಚೆ ನೀರಿನಿಂದ ಬೈರಮಂಗಲ ಕೆರೆ ಮುಕ್ತಿ ಹೊಂದಿ ಹತ್ತಾರು ಗ್ರಾಮಗಳು ಶಾಪ ವಿಮೋಚನೆಗೊಳ್ಳಲಿವೆಯೇ ಎಂಬ ಪ್ರಶ್ನೆ ಮೂಡಿದೆ.

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ)ದಿಂದ ಟೌನ್ ಶಿಪ್ (ಸಮಗ್ರ ಉಪನಗರ ಯೋಜನೆ ) ಅನುಷ್ಠಾನಗೊಳ್ಳುವುದರಿಂದ ಕೊಳಚೆ ನೀರಿನಿಂದ ಬೈರಮಂಗಲ ಕೆರೆ ಮುಕ್ತಿ ಹೊಂದಿ ಹತ್ತಾರು ಗ್ರಾಮಗಳು ಶಾಪ ವಿಮೋಚನೆಗೊಳ್ಳಲಿವೆಯೇ ಎಂಬ ಪ್ರಶ್ನೆ ಮೂಡಿದೆ.

ಹೌದು ಇದಕ್ಕೆ ಕಾರಣ. ಪ್ರಾಧಿಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ಟೌನ್ ಶಿಪ್ ವ್ಯಾಪ್ತಿಗೆ ಬೈರಮಂಗಲ ಕೆರೆಯೂ ಸೇರಿಕೊಂಡಿದೆ. ಕಲ್ಮಶ ನೀರನ್ನು ಪರಿಪೂರ್ಣವಾಗಿ ಶುದ್ಧೀಕರಿಸಿ ಹರಿಸಿದಲ್ಲಿ ಬೈರಮಂಗಲ ಕೆರೆ ಜಲ ಮತ್ತು ವಾಯು ಮಾಲಿನ್ಯದಿಂದ ಮುಕ್ತವಾಗುವ ಸಾಧ್ಯತೆಗಳೇ ಹೆಚ್ಚಾಗಿದೆ.

ಶುದ್ಧೀಕರಣಗೊಂಡ ನೀರು ಕೆರೆಯಿಂದ ಕೆಳಭಾಗಕ್ಕೆ ಹರಿದಲ್ಲಿ ಉಪನಗರ ಯೋಜನೆ ವ್ಯಾಪ್ತಿಗೆ ಬರುವ ತಾಯಪ್ಪನದೊಡ್ಡಿ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ, ಕೆಂಪಶೆಟ್ಟಿದೊಡ್ಡಿ, ಕೋಡಿಹಳ್ಳಿ, ಬೈರಮಂಗಲ ಬನ್ನಿಗಿರಿ ಗ್ರಾಮಗಳ ರೈತರ ಬದುಕು ಹಸನಾಗಲಿದೆ.

ಈ ಬೈರಮಂಗಲ ಕೆರೆ 600 ಎಕರೆಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿದ್ದು, ಈಗಾಗಲೇ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವು ಮಾಡಲಾಗಿದೆ. ಇದೀಗ ಕೊಳಚೆ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಸೇರಿದಂತೆ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಸಂಬಂಧ ಪ್ರಾಧಿಕಾರ ಪ್ರತ್ಯೇಕ ಯೋಜನೆಯೊಂದನ್ನು ಸಿದ್ಧ ಪಡಿಸಲಾಗುತ್ತಿದೆ.

ಕೆರೆ ಸ್ಥಿತಿ ಏನಾಗಿದೆ ? :

ವೃಷಭಾವತಿ ನದಿಗೆ ಅಡ್ಡಲಾಗಿ ಬೈರಮಂಗಲದಲ್ಲಿ ಕೆರೆ ಕಟ್ಟಲಾಗಿದೆ. ಒಂದು ಕಾಲದಲ್ಲಿ ಬೈರಮಂಗಲವು ಹೆಚ್ಚು ಕಬ್ಬನ್ನು ಬೆಳೆಯುವ ಪ್ರದೇಶವಾಗಿತ್ತು. ಇಲ್ಲಿ ಬೆಳೆದ ಬೆಲ್ಲಕ್ಕೆ ಉತ್ತಮ ಹೆಸರಿತ್ತು. ಇಂದಿಗೂ ಈ ಪ್ರದೇಶದಲ್ಲಿ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಇಡೀ ವರ್ಷ ಪೂರ್ತಿಯಾಗಿ ವೃಷಭಾವತಿ ಹರಿಯುತ್ತಿದ್ದು, ಕೃಷಿಗೆ ಆಧಾರವಾಗಿದೆ ಎನ್ನುವುದಕ್ಕಿಂತ ಅನೇಕ ತೊಡಕುಗಳಿಗೂ ಕಾರಣವಾಗಿದೆ.

ಬೆಂಗಳೂರು ನಗರದ ಕೊಳಚೆ ನೀರು ಮಾತ್ರವಲ್ಲದೆ ಅದರ ಸುತ್ತಮುತ್ತಲಿನ ವಿಷಪೂರಿತ ತ್ಯಾಜ್ಯ ಕೂಡ ವೃಷಭಾವತಿ ಕಣಿವೆಯ ಮೂಲಕ ಬೈರಮಂಗಲ ಕೆರೆಯ ಒಡಲು ಸೇರುತ್ತಿದೆ. ಪ್ರತಿನಿತ್ಯ 350 ಎಂಎಲ್ ಡಿಯಷ್ಟು ಕಲ್ಮಶ ನೀರು ಕೆರೆಯ ಒಡಲು ಸೇರುತ್ತಿದೆ. ಈ ಕೆರೆ ನೀರು ಬಳಸುತ್ತಿರುವ ಜನರು ಚರ್ಮ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಸೊಳ್ಳೆಗಳು ಹೆಚ್ಚಾಗುವ ಜೊತೆಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಟ್ಟ ವಾಸನೆ ಬರುತ್ತಿದೆ.

ನದಿಗೆ ರಾಸಾಯನಿಕ ಮಿಶ್ರಿತ ನೀರಿನಿಂದ ವೃಷಭಾವತಿ ವಿಷದ ಒಡಲಾಗಿದ್ದು, ಕೃಷಿ ಚಟುವಟಿಕೆಗಳು ರೈತನ ಕೈ ಹಿಡಿಯುತ್ತಿಲ್ಲ. ಇಲ್ಲಿ ಹೈನುಗಾರಿಕೆ ಅವಲಂಬಿಸಿರುವ ಕುಟುಂಬಗಳು ಹೆಚ್ಚಿದ್ದು, ನಿತ್ಯ ಒಂದು ಸಾವಿರ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹ ಆಗುತ್ತಿದೆ. ಜೊತೆಗೆ, ರೇಷ್ಮೆ ಕೃಷಿ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ.

ಕೆರೆ ವ್ಯಾಪ್ತಿಯ ಹಳ್ಳಿಗಳು ಜಲಮಾಲಿನ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಸಾಕ್ಷಿಯಾಗಿ ಬೈರಮಂಗಲ ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆದ ಕೃಷಿ, ತೋಟಗಾರಿಕಾ ಬೆಳೆಗಳನ್ನು ಕೊಳ್ಳಲು ದಲ್ಲಾಳಿಗಳು ಮಾತ್ರವಲ್ಲ ಜನಸಾಮಾನ್ಯರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಈ ಭಾಗದ ತರಕಾರಿಗಳಲ್ಲಿ ಆಮ್ಲೀಯ ಮತ್ತು ಆಸಿಡ್‌ ಗುಣಗಳು ಪತ್ತೆಯಾಗಿರುವುದು.

ಬೆಂಗಳೂರಿನ ಕೊಳಚೆ ನೀರಿನ ಜೊತೆಗೆ ಕೈಗಾರಿಕಾ ತ್ಯಾಜ್ಯ ಕೆರೆ ಪಾಲಾಗುತ್ತಿರುವುದರಿಂದಲೇ ಕೃಷಿ ಉತ್ಪನ್ನಗಳು ವಿಷಮಯವಾಗುತ್ತಿವೆ. ಇದೇ ವಿಷಪೂರಿತ ನೀರನ್ನು ಆ ಕೆರೆಯ ಸುತ್ತ-ಮುತ್ತಲಿರುವ ಸುಮಾರು 20 ಹಳ್ಳಿಗಳು ಕುಡಿಯಲು ಹಾಗೂ ಕೃಷಿ ಚಟುವಟಿಕೆಗೆ ಬಳಸುತ್ತಿವೆ.

ಆ ನೀರಿನಿಂದ ಭತ್ತ, ಬೇಬಿ ಕಾರ್ನ್‌, ಜೋಳ, ರಾಗಿ, ಬಾಳೆ, ಕ್ಯಾಬೇಜ್‌, ತೆಂಗು ಹೀಗೆ ಅನೇಕ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಲ್ಲಿನ ಬೆಳೆ ನೋಡಲಿಕ್ಕೆ ತಾಜಾವಾಗಿ ಕಂಡರೂ, ದೇಹಕ್ಕೆ ಸೇರಿದರೆ ಸ್ಲೋ ಪಾಯಿಸನ್‌ ಆಗಿ ಪರಿವರ್ತನೆಯಾಗಲಿದೆ ಎಂದು ಸಂಶೋಧಕರು ದೃಢಪಡಿಸಿದ್ದಾರೆ.

ಹುಸಿಯಾಗಿಯೇ ಉಳಿದ ಭರವಸೆಗಳು :

ಈವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೆಲ್ಲರು ಬೈರಮಂಗಲ ಕೆರೆ ಶುದ್ಧೀಕರಿಸಿ ಅಭಿವೃದ್ಧಿ ಪಡಿಸುವುದಾಗಿ ನೀಡಿದ್ದ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ. ಈ ಹಿಂದೆ ಸರ್ಕಾರ ವೃಷಭಾವತಿ ಕಣಿವೆ ಹಾಗೂ ಬೈರಮಂಗಲ ಕೆರೆ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ಸಮಗ್ರ ಯೋಜನೆ ಸಿದ್ಧಪಡಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗಡುವು ನೀಡಿತ್ತು. ಅದ್ಯಾವುದು ಕಾರ್ಯಗತಕ್ಕೆ ಬರಲೇ ಇಲ್ಲ. ಆದರೆ, ಕೆರೆಯ ಎಡ ಮತ್ತು ಬಲ ದಂಡೆ ನಾಲೆಗಳ ಕಾಮಗಾರಿ ಮಾತ್ರ ನಡೆದಿದೆ.

ಆದರೀಗ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಬೈರಮಂಗಲ ಕೆರೆಯನ್ನು ಒಳಗೊಂಡಂತೆ ಟೌನ್ ಶಿಪ್ ನಿರ್ಮಾಣಕ್ಕೆ ಮುಂದಾಗಿದೆ. ಬೆಂಗಳೂರಿನ ಕೈಗಾರಿಕೆಗಳಿಂದ ಹೊರಬೀಳುವ ತ್ಯಾಜ್ಯ ರಾಸಾಯನಿಕಗಳು ನದಿಯಲ್ಲಿ ಸೇರದಂತೆ ತಡೆಯುವುದು. ದೊಡ್ಡಬೆಲೆ ಬಳಿ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕ ಸ್ಥಾಪಿಸಿ, ಅಲ್ಲಿಂದ ಶುದ್ಧಿಕರಿಸಿದ ನೀರನ್ನು ವೃಷಭಾವತಿ ನಾಲೆ ಮೂಲಕ ಬೈರಮಂಗಲ ಕೆರೆಗೆ ಹರಿಸಲು ಉದ್ದೇಶಿಸಲಾಗಿದೆ.

ಪ್ರಾಧಿಕಾರ ವೃಷಭಾವತಿ ನದಿಯನ್ನು ಜಲ, ವಾಯು ಮಾಲಿನ್ಯದಿಂದ ಮುಕ್ತಗೊಳಿಸಿದಲ್ಲಿ ಬೈರಮಂಗಲ ಕೆರೆ ಪರಿಶುದ್ಧಗೊಳ್ಳುವ ಜೊತೆಗೆ ಸುತ್ತಮುತ್ತಲ ಗ್ರಾಮಗಳು ಶಾಪ ವಿಮೋಚನೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಕೋಟ್ ..........

ಟೌನ್ ಶಿಪ್ ಯೋಜನೆಯಲ್ಲಿ ಬೈರಮಂಗಲ ಕೆರೆಯ ಶುದ್ಧೀಕರಣವೂ ಸೇರಿದೆ. ಕೆರೆಗೆ ಹರಿದು ಬರುತ್ತಿರುವ ಕಲ್ಮಶ ನೀರನ್ನು ಶುದ್ಧಿಕರಿಸದಿದ್ದರೆ ಈ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಟೌನ್ ಶಿಪ್ ಯೋಜನೆ ಹಾಗೂ ಜನರ ಆರೋಗ್ಯದ ಹಿತದೃಷ್ಟಿಯೂ ಮುಖ್ಯವಾಗಿದೆ. ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದು ಮಾತ್ರವಲ್ಲದೆ ಆ ನೀರನ್ನು ದಿನನಿತ್ಯದ ಬಳಕೆಗೆ ಯೋಗ್ಯವಾಗುವಂತೆ ಮಾಡುವುದು ಯೋಜನೆ ಉದ್ದೇಶವಾಗಿದೆ.

- ಗಾಣಕಲ್ ನಟರಾಜ್, ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬಾಕ್ಸ್ ............

ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನಕ್ಕೊಳಪಡುವ ವಿಸ್ತೀರ್ಣ (ಎ-ಗುಂಟೆಗಳಲ್ಲಿ)

ಅರಳಾಳುಸಂದ್ರ - 1494-10

ಬನ್ನಿಗಿರಿ - 714 - 7

ಬೈರಮಂಗಲ - 1131-15

ಹೊಸೂರು - 2544-34

ಕೆಂಪಯ್ಯನಪಾಳ್ಯ - 359 - 15

ಮಂಡಲಹಳ್ಳಿ - 71 - 34

ಕೆ.ಜಿ.ಗೊಲ್ಲರಪಾಳ್ಯ - 314- 35

ವಡೇರಹಳ್ಳಿ - 65-32

ಕಂಚುಗಾರನಹಳ್ಳಿ - 784 - 37

-----------------------------------

ಒಟ್ಟು - 7481-21

----------------------------------

20ಕೆಆರ್ ಎಂಎನ್ 1,2.ಜೆಪಿಜಿ

1.ಗಾಣಕಲ್ ನಟರಾಜ್

2.ಟೌನ್ ಶಿಪ್ ನಕ್ಷೆ

Share this article