ಬಾಲಗಂಗಾಧರನಾಥ ಸ್ವಾಮೀಜಿಗೆ ‘ಭಾರತ ರತ್ನ’ ಸಿಗಬೇಕಿತ್ತು: ಎಚ್‌.ಡಿ.ದೇವೇಗೌಡ

KannadaprabhaNewsNetwork | Published : Oct 26, 2024 12:46 AM

ಸಾರಾಂಶ

ನಾನು ರಾಜಕಾರಣದಲ್ಲಿದ್ದರೂ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿಸುವಷ್ಟು ಪ್ರಭಾವಿಯಾಗಿರಲಿಲ್ಲ. ಇವತ್ತಿನ ಸಂದರ್ಭದಲ್ಲೇನಾದರೂ ಇದ್ದಿದ್ದರೆ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಭಾರತರತ್ನ ದೊರಕಿಸಿಕೊಡುತ್ತಿದ್ದೆ. ಅದೊಂದು ನೋವು ನನ್ನನ್ನು ಈಗಲೂ ಕಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗೆ ಭಾರತ ರತ್ನ ಅಥವಾ ಪದ್ಮ ವಿಭೂಷಣ ಪ್ರಶಸ್ತಿ ದೊರಕಬೇಕಿತ್ತು. ಆದರೆ, ಪದ್ಮ ಭೂಷಣ ಪ್ರಶಸ್ತಿ ಮಟ್ಟಕ್ಕಷ್ಟೇ ಅವರನ್ನು ಗುರುತಿಸುವಂತಾಗಿದ್ದು ನನಗೆ ಬೇಸರ ಮೂಡಿಸಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿಷಾದಿಸಿದರು.

ನಾನು ರಾಜಕಾರಣದಲ್ಲಿದ್ದರೂ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿಸುವಷ್ಟು ಪ್ರಭಾವಿಯಾಗಿರಲಿಲ್ಲ. ಇವತ್ತಿನ ಸಂದರ್ಭದಲ್ಲೇನಾದರೂ ಇದ್ದಿದ್ದರೆ ಅವರಿಗೆ ಭಾರತರತ್ನ ದೊರಕಿಸಿಕೊಡುತ್ತಿದ್ದೆ. ಅದೊಂದು ನೋವು ನನ್ನನ್ನು ಈಗಲೂ ಕಾಡುತ್ತಿದೆ ಎಂದರು.

ನಾಗಮಂಗಲ ತಾಲೂಕು ಬಿಜಿಎಸ್ ನಗರದಲ್ಲಿರುವ ಆದಿ ಚುಂಚನಗಿರಿ ವಿಶ್ವ ವಿದ್ಯಾಲಯದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

೫೦ ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆ ಇರುವ ಜಾಗ ಬರಡು ಭೂಮಿಯಾಗಿತ್ತು. ಕುಡಿಯುವ ನೀರಿಗೂ ಹಾಹಾಕಾರವಿತ್ತು. ಅಂತಹ ಬರಡು ಭೂಮಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸಮರ್ಥವಾಗಿ ಬೆಳೆಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವುದರೊಂದಿಗೆ ಗ್ರಾಮೀಣ ಅಭಿವೃದ್ಧಿಗೂ ನೆರವಾದರು. ಅವರಿಗೆ ಹಳ್ಳಿಗಾಡಿನ ಜನರು, ವಿದ್ಯಾರ್ಥಿಗಳ ಬಗ್ಗೆ ಅಪಾರವಾದ ಕಾಳಜಿ, ಕಳಕಳಿ ಇತ್ತು. ಅದಕ್ಕಾಗಿಯೇ ಗ್ರಾಮಾಂತರ ಪ್ರದೇಶದಲ್ಲಿ ಉನ್ನತ ಶಿಕ್ಷಣ ಆರಂಭಿಸುವ ಸಂಕಲ್ಪ ಮಾಡಿ ಯಶಸ್ಸು ಗಳಿಸಿದರು ಎಂದು ನುಡಿದರು.

ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಕೇವಲ ಒಕ್ಕಲಿಗ ಜನಾಂಗಕ್ಕಷ್ಟೇ ಸೀಮಿತರಾಗಿಲ್ಲ. ಅವರು ಎಲ್ಲಾ ಸಮುದಾಯದ ಧಾರ್ಮಿಕ ನಾಯಕರಾಗಿದ್ದರು. ಎಲ್ಲಾ ಜಾತಿ-ಜನಾಂಗದವರೂ ಅವರನ್ನು ಪ್ರೀತಿಸುತ್ತಿದ್ದರು. ಅವರು ಎಲ್ಲ ವರ್ಗದವರಿಗೂ ಸಹಾಯ ಮಾಡಿದ್ದಾರೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಹೊರ ಜಿಲ್ಲೆ, ಹೊರರಾಜ್ಯ, ವಿದೇಶಗಳಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.

ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿರುವಂತೆ ರಾಜಸ್ಥಾನದಲ್ಲಿ ಜಾಟ್ ಸಮುದಾಯ ಪ್ರಭಾವಶಾಲಿಯಾಗಿದೆ. ನಾನು ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಜಾಟ್ ಸಮುದಾಯ ಮತ್ತು ಉತ್ತರ ಪ್ರದೇಶದ ಪ್ರಬಲ ಸಮುದಾಯದವರನ್ನು ನೇಮಿಸುವುದಕ್ಕೆ ಒತ್ತಡವಿತ್ತು. ಆದರೆ, ಆ ಸ್ಥಾನಕ್ಕೆ ಕನ್ನಡ ನಾಡಿನ ನಿವೃತ್ತ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿದ್ದೆ. ಅಂದು ಆ ಸಮುದಾಯದವರನ್ನು ಪರಿಗಣಿಸುವುದಕ್ಕೆ ಸಾಧ್ಯವಾಗದಿರುವುದನ್ನು ಉಪರಾಷ್ಟ್ರಪತಿಯವರ ಗಮನಕ್ಕೆ ತಂದರು.

ಮಹಾತ್ಮ ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಲೋಕಸಭೆ-ರಾಜ್ಯಸಭೆಯಲ್ಲಿ ಶಿಸ್ತು, ಗೌರವ, ಘನತೆ, ಮರ್ಯಾದೆಗಳು ಮಾಯವಾಗಿವೆ. ಗಲಾಟೆ-ಗದ್ದಲಗಳು ಮೇಳೈಸಿವೆ. ಇಂತಹ ರಾಜಕಾರಣಿಗಳನ್ನು ಸಹಿಸಿಕೊಂಡು ನಿಭಾಯಿಸುತ್ತಿರುವ ಉಪರಾಷ್ಟ್ರಪತಿಗಳ ಸಹನೆ, ಸಂಯಮ, ತಾಳ್ಮೆಗೆ ಕೃತಜ್ಞತೆ ಸಲ್ಲಿಸಿ ಮಾತು ಮುಗಿಸಿದರು.

ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಡಿಜಿ ಮೆಡ್ ಎಂಬ ಹೊಸ ಕೋರ್ಸ್‌ಗೆ ಚಾಲನೆ ನೀಡಲಾಯಿತು.

Share this article