5ನೇ ಬಾರಿ ಗೆದ್ದ ಬಾಲಕೃಷ್ಣ ಕೆಆರ್‌ಡಿಸಿಎಲ್ ಅಧ್ಯಕ್ಷ

KannadaprabhaNewsNetwork | Published : Jan 27, 2024 1:19 AM

ಸಾರಾಂಶ

ರಾಮನಗರ: ಜಿಲ್ಲೆಯ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾದ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಸಚಿವ ಸ್ಥಾನದ ಬದಲು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್ ಡಿಸಿಎಲ್) ಅಧ್ಯಕ್ಷ ಸ್ಥಾನ ಲಭಿಸಿದೆ.

ರಾಮನಗರ: ಜಿಲ್ಲೆಯ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾದ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಸಚಿವ ಸ್ಥಾನದ ಬದಲು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್ ಡಿಸಿಎಲ್) ಅಧ್ಯಕ್ಷ ಸ್ಥಾನ ಲಭಿಸಿದೆ.

ನಾಡಪ್ರಭು ಕೆಂಪೇಗೌಡರ ನೆಲವಾದ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಬಾಲಕೃಷ್ಣರವರು 5ನೇ ಬಾರಿ ವಿಧಾನಸೌಧ ಪ್ರವೇಶಿಸಿದವರು. ಜಿಲ್ಲೆಯವರೇ ಆದ ಕನಕಪುರ ಕ್ಷೇತ್ರದಿಂದ ಗೆದ್ದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿದ್ದರೂ ಹಿರಿತನದ ಆಧಾರದ ಮೇಲೆ ಬಾಲಕೃಷ್ಣ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು.

ಈ ಮೊದಲು ಬಿಜೆಪಿ ಪಕ್ಷದಿಂದ ಒಂದು ಬಾರಿ ಹಾಗೂ ಜೆಡಿಎಸ್ ಪಕ್ಷದಿಂದ ನಾಲ್ಕು ಬಾರಿ ಗೆದ್ದಿದ್ದ ಬಾಲಕೃಷ್ಣರವರು 2023ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾದವರು. ಈಗ ಅವರಿಗೆ ಕೆಆರ್ ಡಿಸಿಎಲ್ ಅಧ್ಯಕ್ಷ ಸ್ಥಾನದ ಮೂಲಕ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸಮಾಧಾನ ಪಡಿಸಲಾಗಿದೆ.

ಲೋಕಸಭಾ ಚುನಾವಣೆ ಸನಿಹದಲ್ಲಿರುವ ಕಾರಣ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ನಡೆಸಿದೆ. ಸರ್ಕಾರ ಬಂದು ಎಂಟು ತಿಂಗಳು ಕಳೆದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಹುದ್ದೆಗಳನ್ನು ಕೊಟ್ಟಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್‌ ಪಾಳಯದಲ್ಲಿ ಭುಗಿಲೆದ್ದಿತ್ತು.

ಬೆಂಬಲಿಗರಲ್ಲಿ ಅಸಮಾಧಾನ:

ಪಕ್ಷದ ಪ್ರಮುಖ ಮುಖಂಡರಾದ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ.ರೇವಣ್ಣ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ , ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಯಲ್ ಲಿಮಿಟೆಡ್ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿರವರು ಮೇಲ್ಮನೆ ಪ್ರವೇಶಿಸುವ ಉಮೇದಿನಲ್ಲಿದ್ದರು. ಇದು ಸಾಧ್ಯವಾಗದಿದ್ದರೆ ಯಾವುದಾದರು ನಿಗಮ ಮಂಡಳಿ ಗ್ಯಾರಂಟಿ ಎಂದು ಕನಸು ಕಾಣುತ್ತಿದ್ದರು. ಇವರ ಜೊತೆಗೆ ಮಾಜಿ ಶಾಸಕ ಕೆ.ರಾಜು ಹಾಗೂ ತೆಂಗಿನ ನಾರಿನ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಡಿ.ಎಂ.ವಿಶ್ವನಾಥ್ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದರು. ಇಷ್ಟೇ ಅಲ್ಲದೆ, ಸ್ವತಃ ಶಾಸಕ ಬಾಲಕೃಷ್ಣರವರೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು.

ಮೇಲ್ಮನೆ ಸದಸ್ಯರಾಗಲು ಬಯಸಿದ ಅಹಿಂದ ವರ್ಗಕ್ಕೆ ಸೇರಿದ ಮೂವರು ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಆದರೂ ಅವರನ್ನು ನಿಗಮ ಮಂಡಳಿಗೆ ಪರಿಗಣಿಸಲಾಗಿಲ್ಲ. ಇದು ಸಹಜವಾಗಿಯೇ ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಶಾಸಕ ಬಾಲಕೃಷ್ಣರವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಿಡಿಎ ಅನ್ನು ಶಾಂತಿನಗರ ಕ್ಷೇತ್ರ ಎನ್ .ಎ.ಹ್ಯಾರಿಸ್ ಹೆಗಲಿಗೆ ವಹಿಸಿದ್ದು, ಬಾಲಕೃಷ್ಣರವರಿಗೆ ಕೆಆರ್ ಡಿಸಿಎಲ್ ಜವಾಬ್ದಾರಿ ವಹಿಸಿದ್ದಾರೆ.

ಶಾಸಕರಿಗಾದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು, ಅಧಿಕಾರವೂ ದೊರಕಿದೆ. ಕಾರ್ಯಕರ್ತರು ಚುನಾವಣೆಯಲ್ಲಿ ದುಡಿದಿದ್ದು, ಅವರ ಶ್ರಮದಿಂದಲೂ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ. ಈಗ ಕಾರ್ಯಕರ್ತರನ್ನು ಕಡೆಗಣಿಸಿದರೆ ಬೇರೆಯದೇ ಸಂದೇಶ ಹೋಗುತ್ತದೆ ಎಂಬ ಕೂಗು ಪಕ್ಷದೊಳಗೆ ಬಲವಾಗಿ ಕೇಳಿ ಬರುತ್ತಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ, ಬೆಂಗಳೂರು ಪದವೀಧರ ಕ್ಷೇತ್ರ, ಲೋಕಸಸಭಾ, ತಾಪಂ - ಜಿಪಂ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳು, ಪಕ್ಷ ಸಂಘಟನೆ ಹಾಗೂ ಜಾತಿ ಲೆಕ್ಕಾಚಾರ ಹಾಕಿ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಾಂಗ್ರೆಸ್ ವರಿಷ್ಠರು ಸೂಕ್ತ ಸ್ಥಾನಮಾನ ನೀಡುವ ಸಾಧ್ಯತೆಗಳಿವೆ.ಬಾಕ್ಸ್ ..............

ಬಾಲಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ:

ಕಾಂಗ್ರೆಸ್ ಮತ್ತು ಜನತಾ ಪರಿವಾರದ ಭದ್ರಕೋಟೆಯಾಗಿದ್ದ ಮಾಗಡಿಯಲ್ಲಿ 1994ರ ಚುನಾವಣೆಯಲ್ಲಿಯೇ ಬಾಲಕೃಷ್ಣರವರು ಬಿಜೆಪಿಯಿಂದ ಗೆಲುವು ಸಾಧಿಸಿ ಕಮಲ ಅರಳಿಸಿದ್ದರು. 1999ರಲ್ಲಿ ಬಿಜೆಪಿಯಿಂದ ಸೋತ ಬಳಿಕ ಜೆಡಿಎಸ್ ಸೇರಿದ ಅವರು 2004, 2008, 2013ರಲ್ಲಿ ಕ್ರಮವಾಗಿ ವಿಜಯ ಪತಾಕೆ ಹಾರಿಸಿದರು.

ಜೆಡಿಎಸ್ ವರಿಷ್ಠರ ನಡವಳಿಕೆಯಿಂದ ಬಾಲಕೃಷ್ಣ ಮತ್ತು ಸ್ನೇಹಿತರು ಬೇಸರಗೊಂಡಿದ್ದರು. ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ, ಬಾಲಕೃಷ್ಣ ಸೇರಿದಂತೆ 8 ಶಾಸಕರು ಬಂಡಾಯದ ಕಹಳೆ ಮೊಳಗಿಸಿದರು.

2018ರ ವಿಧಾನಸಭಾ ಚುನಾವಣೆ ವೇಳೆಗೆ ಬಾಲಕೃಷ್ಣರವರು ಸ್ನೇಹಿತರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೆಡಿಎಸ್ ನ ಎ.ಮಂಜುನಾಥ್ ವಿರುದ್ಧ ಪರಾಭವಗೊಂಡರು. 2023ರ ಚುನಾವಣೆಯಲ್ಲಿ ಬಾಲಕೃಷ್ಣರವರು ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದರು.

ಕೋಟ್ ..............

ಶಾಸಕ ಬಾಲಕೃಷ್ಣ ಅವರಿಗೆ ಕೆಆರ್ಡಿಸಿಎಲ್ ಅಧ್ಯಕ್ಷ ಸ್ಥಾನ ದೊರೆತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ನೆರವಾಗಲಿದೆ.

-ಯರೇಹಳ್ಳಿ ಮಂಜು, ಉಪಾಧ್ಯಕ್ಷರು, ಬಿಡಿಸಿಸಿ ಬ್ಯಾಂಕ್ ಕೋಟ್ ...........

ಬಾಲಕೃಷ್ಣರವರು ಕ್ರಿಯಾಶೀಲ ಶಾಸಕರು. ಕ್ಷೇತ್ರದ ಅಭಿವೃದ್ಧಿಗೆ ಸದಾ ತುಡಿತವುಳ್ಳವರು. ತಾವು ಶಾಸಕರಾಗಿರುವ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬ ಕೊರಗು ಅವರಿಗೆ ಸದಾ ಕಾಡುತ್ತಿತ್ತು. ಈಗ ಅವರು ಶಾಸಕರಾಗಿದ್ದು, ಅವರದೇ ಪಕ್ಷ ಅಧಿಕಾರದಲ್ಲಿದೆ. ಕ್ಷೇತ್ರದ ಅಭಿವೃದ್ಧಿ ಜೊತೆಗೆ ನಾಡಿನ ರಸ್ತೆಗಳಿಗೆ ಕಾಯಕಲ್ಪ ನೀಡುವ ಅವಕಾಶ ಸಿಕ್ಕಿದೆ. ಪಕ್ಷ ಸಂಘಟನೆಗೂ ಸಹಕಾರಿಯಾಗಲಿದೆ.

-ಸಿ.ಉಮೇಶ್, ಸದಸ್ಯರು, ಪುರಸಭೆ, ಬಿಡದಿ26ಕೆಆರ್ ಎಂಎನ್ 11.ಜೆಪಿಜಿ

ಎಚ್ .ಸಿ.ಬಾಲಕೃಷ್ಣ.

Share this article