ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ರೈತ, ದಲಿತ, ಪ್ರಗತಿಪರ, ಕನ್ನಡ ಪರ ಸಂಘಟನೆಗಳು ಆಯೋಜಿಸಿದ್ದ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ವಿರುದ್ಧ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾವೇರಿ ನದಿ ಕೈಗಾರಿಕಾ ತ್ಯಾಜ್ಯ, ಚರಂಡಿ ನೀರಿನಿಂದ ಸಂಪೂರ್ಣ ಕಲುಷಿತಗೊಂಡಿವೆ. ಕುಡಿಯುವುದಕ್ಕೂ ಯೋಗ್ಯವಾಗಿಲ್ಲದಷ್ಟು ಕೊಳಕಾಗಿದೆ. ಅದನ್ನು ಸ್ವಚ್ಛಗೊಳಿಸದೆ ಕೊಳಕು ನೀರಿಗೆ ಆರತಿ ಮಾಡುವುದರಿಂದ ಪುಣ್ಯ ಸಿಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಖರ್ಚು ಮಾಡುವ ೨೬೬೩ ಕೋಟಿ ರು. ಹಣವನ್ನು ನದಿ ನೀರಿನ ಸ್ವಚ್ಛತೆಗೆ ಬಳಸಿದ್ದರೆ ಜನೋಪಕಾರಿಯಾಗುತ್ತಿತ್ತು. ಆದರೆ, ಸರ್ಕಾರಕ್ಕೆ ಮನರಂಜನಾ ಪಾರ್ಕ್ ಬೇಕು. ರೈತರಿಗೆ ಕೃಷಿ ಬೇಕಿದೆ. ಅದಕ್ಕಾಗಿ ಜಿಲ್ಲೆಯ ಜನರನ್ನು ಮೊದಲು ಜಾಗೃತಿಗೊಳಿಸಬೇಕು. ಅವರೆಲ್ಲರಿಂದಲೂ ಯೋಜನೆಯ ವಿರುದ್ಧ ಸಹಿ ಸಂಗ್ರಹಿಸಬೇಕು. ಕಾವೇರಿ ನೀರಿಗೆ ಎಷ್ಟು ಕಲುಷಿತಗೊಂಡಿದೆ, ಕುಡಿಯಲು ಯೋಗ್ಯವಿಲ್ಲದಿರುವ ಪರಿಸ್ಥಿತಿ, ಕೃಷಿಯ ಮೇಲೆ ಯೋಜನೆಯಿಂದ ಉಂಟಾಗುವ ಪರಿಣಾಮ, ಅಣೆಕಟ್ಟು ಸುರಕ್ಷತೆಗೆ ಆಗುವ ಅಪಾಯ, ಅಣೆಕಟ್ಟೆಗೆ ಆಗಿರುವ ಆಯಸ್ಸು ಸೇರಿದಂತೆ ಹಲವಾರು ಅಂಶಗಳ ಮೂಲಕ ನ್ಯಾಯಾಲಯದ ಗಮನ ಸೆಳೆಯಬೇಕು. ನಮ್ಮ ವಕೀಲರಿಗೆ ಇದೆಲ್ಲದರ ದಾಖಲೆಗಳನ್ನು ನೀಡಿ ನ್ಯಾಯಾಧೀಶರಿಗೆ ಮನವರಿಗೆ ಮಾಡಿಕೊಡಬೇಕು. ಆಗ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ವಿರುದ್ಧದ ಹೋರಾಟ ಯಶಸ್ಸು ಕಾಣಲು ಸಾಧ್ಯ ಎಂದರು.ಮೈಸೂರಿನ ಪುರಾತತ್ವ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ರಂಗರಾಜು ಮಾತನಾಡಿ, ಕೃಷ್ಣರಾಜಸಾಗರ ಜಲಾಶಯ ಪಾರಂಪರಿಕ ಪ್ರದೇಶದಲ್ಲಿದೆ, ಅಣೆಕಟ್ಟೆಯನ್ನು ಚುರುಕಿಗಾರೆಯಿಂದ ನಿರ್ಮಿಸಲಾಗಿದೆಯೇ ವಿನಃ ಕಬ್ಬಿಣ, ಸಿಮೆಂಟ್, ಇಟ್ಟಿಗೆಯನ್ನು ಬಳಸಿಲ್ಲ. ಭೂಮಿಯಿಂದ ೮೦ ರಿಂದ ೧೦೦ ಅಡಿ ಆಳದ ಶಿಲಾಪದರದ ಮೇಲೆ ೫೦ ಅಡಿ ಅಗಲ, ೧೨೫ ಅಡಿ ಎತ್ತರಕ್ಕೆ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಯಾವುದೇ ಒಂದು ಕಟ್ಟಡ, ಅಣೆಕಟ್ಟೆಗೆ ೬೦ ರಿಂದ ೭೦ ವರ್ಷವಾದರೆ ಅದು ತನ್ನಿಂತಾನೇ ಪಾರಂಪರಿಕ ಪ್ರದೇಶವಾಗಿ ಘೋಷಣೆಯಾಗುತ್ತದೆ ಎಂದರು.
ಕಾವೇರಿ ವಿಚಾರವಾಗಿ ಸಂಶೋಧನಾ ವರದಿಯೊಂದನ್ನು ತಯಾರಿಸಿದ್ದು, ಕಾವೇರಿ ಹರಿಯುವ ಹಾದಿಯಲ್ಲಿ ೧೩೦ ಸ್ಥಳಗಳನ್ನು ಗುರುತಿಸಲಾಗಿದೆ.ಕೆರೆತೊಣ್ಣೂರು, ಭೂವರಾಹನಾಥ, ಶಿವನಸಸಮುದ್ರ ಸೇರಿದಂತೆ ಇತರೆ ಕಡೆಗಳಲ್ಲಿ ಕಾವೇರಿ ಆರತಿ ಮಾಡಲಿ. ಆದರೆ, ಕೆಆರ್‌ಎಸ್‌ನಲ್ಲಿ ಮಾಡುವುದು ಮಾತ್ರ ಬೇಡ. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಧಾರ್ಮಿಕವಾಗಿ ಸೆಳೆಯುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ರೈತನಾಯಕಿ ಸುನಂದಾ ಜಯರಾಂ, ರೈತ ಮುಖಂಡರಾದ ಕೆ.ಬೋರಯ್ಯ, ಕೆಂಪೂಗೌಡ, ಇಂಡುವಾಳು ಚಂದ್ರಶೇಖರ್, ಕನ್ನಡಸೇನೆ ಎಚ್.ಸಿ.ಮಂಜುನಾಥ್, ಮೈಸೂರಿನ ಕುಸುಮಾ, ದಸಂಸದ ಎಂ.ವಿ.ಕೃಷ್ಣ, ಕೆ.ವಿ.ಯಶೋದಾ ರಾಜಣ್ಣ, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಅಂಬುಜಮ್ಮ ಮತ್ತಿತರರಿದ್ದರು.ಮೊದಲು ಕಲುಷಿತ ಕಾವೇರಿಯನ್ನು ಶುದ್ಧೀಕರಿಸಿ: ಎ.ಟಿ.ರಾಮಸ್ವಾಮಿ
ಕಲುಷಿತಗೊಂಡಿರುವ ಕಾವೇರಿ ನದಿಯನ್ನು ಮೊದಲು ಶುದ್ಧೀಕರಣ ಮಾಡಿ. ಕುಡಿಯಲು ಯೋಗ್ಯವಲ್ಲದಂತೆ ಮಲಿನಗೊಂಡಿರುವ ಕಾವೇರಿಗೆ ಆರತಿ ಬೆಳಗಲು ಹೊರಟಿರುವ ಕಾಂಗ್ರೆಸ್‌ನ ನಡೆ ನಾಟಕೀಯವಲ್ಲದೆ ಮತ್ತೇನು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.
ದೇವಸ್ಥಾನವನ್ನು ಸ್ವಚ್ಛಗೊಳಿಸಿ ತಾನೇ ದೇವರನ್ನು ನಾವು ಪೂಜಿಸುವುದು. ಅದೇ ರೀತಿ ಕಲುಷಿತಗೊಂಡಿರುವ ಕಾವೇರಿಯನ್ನು ಮೊದಲು ಶುದ್ಧೀಕರಣ ಮಾಡಬೇಕು. ಆನಂತರ ಅದಕ್ಕೆ ಪೂಜೆ ಸಲ್ಲಿಸಿದರೆ ಅದಕ್ಕೊಂದು ಮಹತ್ವ ಬರುತ್ತದೆ. ತ್ಯಾಜ್ಯದಿಂದ ತುಂಬಿರುವ ಕೊಳಕು ನೀರಿಗೆ ಪೂಜೆ ಸಲ್ಲಿಸುವುದರಿಂದ ಕಾಂಗ್ರೆಸ್ ನಾಯಕರ ಭಕ್ತಿಯ ಪರಾಕಾಷ್ಠೆಯೋ ಅಥವಾ ಇದರ ಹಿಂದೆ ಹಣ ಮಾಡುವ ಹುನ್ನಾರವಿದೆಯೋ ಎಂದು ಅನುಮಾನ ವ್ಯಕ್ತಪಡಿಸಿದರು.