ಉಪ್ಪಾರಹಟ್ಟಿಯಲ್ಲಿ ಶವಸಂಸ್ಕಾರಕ್ಕೆ ತಡೆ: ಸುಮೋಟೋ ಕೇಸ್‌ ದಾಖಲು

KannadaprabhaNewsNetwork | Updated : Jan 20 2024, 05:28 PM IST

ಸಾರಾಂಶ

ಉಪ್ಪಾರಹಟ್ಟಿ ಗ್ರಾಮದ ಗೋಮಾಳ ಜಮೀನಿನಲ್ಲಿ ಒಂದು ಎಕರೆ ಜಾಗವನ್ನು ರುದ್ರಭೂಮಿಗೆಂದು ಸರ್ಕಾರ ಮಂಜೂರು ಮಾಡಿದ್ದರೂ ಅಕ್ಕಪಕ್ಕದ ಜನರು ಶವ ಸಂಸ್ಕಾರಕ್ಕೆ ಜನ ಅನುವು ಮಾಡಿಕೊಡದಿರುವುದು ಹಾಗೂ ಈ ಪ್ರಕರಣದಲ್ಲಿ ತಹಸೀಲ್ದಾರ್, ತಾಪಂ ಇಓ ಹಾಗೂ ಪಿಡಿಓ ಉದಾಸೀನ ತೋರಿರುವುದು ಅವರ ದುರಾಡಳಿತವಾಗಿರುತ್ತದೆ

- ಉಪಲೋಕಾಯುಕ್ತರಿಂದ ಸ್ವಯಂ ದೂರು । ಜ.8ರಂದು ವರದಿ । ತಹಸೀಲ್ದಾರ್, ತಾ.ಪಂ. ಇಓಗೆ ನೋಟಿಸ್‌ । ಸಚಿವ ಡಿ.ಸುಧಾಕರ್, ಡಿಸಿಗೆ ಪತ್ರ ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಉಪ್ಪಾಹರಟ್ಟಿಯಲ್ಲಿ ಶವಸಂಸ್ಕಾರಕ್ಕೆ ಸ್ಮಶಾನದ ಆಸುಪಾಸಿನ ಜನತೆ ಅವಕಾಶ ಮಾಡಿಕೊಡದ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ಉಪಲೋಕಾ ಯುಕ್ತರು ಈ ಸಂಬಂಧ ಸುಮೋಟೋ ಪ್ರಕರಣ ದಾಖಲು ಮಾಡಿಕೊಂಡು ತಹಸೀಲ್ದಾರ್, ತಾಪಂ ಇಓ ಹಾಗೂ ಪಿಡಿಓಗೆ ನೋಟೀಸು ಜಾರಿ ಮಾಡಿ ಫೆಬ್ರವರಿ 20 ರೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಉಪ್ಪಾರಹಟ್ಟಿಯಲ್ಲಿ ಶವ ಸಂಸ್ಕಾರಕ್ಕೆ ಎದುರಾಗಿರುವ ಸಮಸ್ಯೆ ಕುರಿತು ಕನ್ನಡಪ್ರಭ ಜನವರಿ 8ರಂದು ವರದಿ ಮಾಡಿತ್ತು. ತಾಲೂಕು ಕೇಂದ್ರಕ್ಕೆ ತುಂಬಾ ಹತ್ತಿರವೇ ಇರುವ ಉಪ್ಪಾರಹಟ್ಟಿಯಲ್ಲಿ ಯಾರಾದರೂ ಮರಣ ಹೊಂದಿದರೆ ಅವರನ್ನು ಎಲ್ಲಿ ಹೂಳಬೇಕು ಎಂಬುದೇ ಊರಿನವರಿಗೆ ದೊಡ್ಡ ಸಮಸ್ಯೆ, ಸ್ಮಶಾನಕ್ಕೆಂದು ತಾಲೂಕು ಆಡಳಿತ ಕೊಟ್ಟ ಜಾಗವನ್ನು ಅಲ್ಲಿನ ಆಸುಪಾಸಿನ ಜನ ಉಪಯೋಗಿಸಲು ಬಿಟ್ಟಿಲ್ಲ. ಒಂದು ವರ್ಷದಲ್ಲಿ ಮರಣ ಹೊಂದಿದ 5ಕ್ಕೂ ಹೆಚ್ಚು ಜನರ ಮೃತದೇಹಗಳನ್ನು ರಸ್ತೆ ಪಕ್ಕದಲ್ಲಿ ಸಂಸ್ಕಾರ ಮಾಡಲಾಗಿದೆ. ಸರ್ಕಾರ 2023ರಲ್ಲಿ ರುದ್ರಭೂಮಿಗೆಂದು ಯರದಕಟ್ಟೆ ಗೋಮಾಳದಲ್ಲಿ ಸ.ನಂ.19ರಲ್ಲಿ ಒಂದು ಎಕರೆಯನ್ನು ಮಂಜೂರು ಮಾಡಿದೆ. ಆದರೆ,ಅಲ್ಲಿ ಶವಸಂಸ್ಕಾರ ಮಾಡಲು ಆಸುಪಾಸಿನ ಜನ ಬಿಡುತ್ತಿಲ್ಲವೆಂಬ ಸಂಗತಿಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಉಪ್ಪಾರಹಟ್ಟಿ ಗ್ರಾಮದ ಜನತೆಗೆ ಸರ್ವೇ ನಂ.19ರ ಗೋಮಾಳ ಜಮೀನಿನಲ್ಲಿ ಒಂದು ಎಕರೆ ಜಾಗವನ್ನು ರುದ್ರಭೂಮಿಗೆಂದು ಸರ್ಕಾರ ಮಂಜೂರು ಮಾಡಿದ್ದು ಈ ಸಂಬಂಧ ಪಹಣಿ ಇದೆ .ಆದರೆ, ಅಕ್ಕಪಕ್ಕದ ಜನರು ಶವ ಸಂಸ್ಕಾರಕ್ಕೆ ಅನುವು ಮಾಡಿಕೊಡುತ್ತಿಲ್ಲ. ಸಮಸ್ಯೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು ಆಲಿಸಿ ಸರಿಪಡಿಸಬೇಕಾಗಿತ್ತು. ಉದಾಸೀನ ತೋರಿರುವುದು ಅವರ ದುರಾಡಳಿತವಾಗಿರುತ್ತದೆ ಎಂದು ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯವು ಮೊಹಮ್ಮದ್ ಇಕ್ವಾಲ್ ವಿರುದ್ಧ ಕರ್ನಾಟಕ ಸರ್ಕಾರ ಮತ್ತಿತರರು (ಡಬ್ಲ್ಯುಪಿ ಸಂಖ್ಯೆ:15165/2018 (GM-RES-PIL) : 20.08.2019) ರಲ್ಲಿ ರಾಜ್ಯ ಸರ್ಕಾರಕ್ಕೆ ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣದಲ್ಲಿ ಶವ ಸಂಸ್ಕಾರಕ್ಕಾಗಿ ರುದ್ರಭೂಮಿಯನ್ನು ಒದಗಿಸುವಂತೆ ಆದೇಶಿಸಿದೆ. ಉಪ್ಪಾರಹಟ್ಟಿ ಹಳ್ಳಿಯ ಜನರಿಗೆ ಸ್ಮಶಾನಕ್ಕಾಗಿ ಸ್ಥಳವಿದ್ದರೂ ಉಪಯೋಗಿಸಲು ಆಗದೆ ಇದ್ದಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅವರ ಕರ್ತವ್ಯ ಮತ್ತು ಬಾಧ್ಯತೆಯಾಗಿರುತ್ತದೆ. ಅಧಿಕಾರಿಗಳ ಕಡೆಯಿಂದ ವೈಪಲ್ಯವಾದಲ್ಲಿ ಅದು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 2(10)ರ ಅಡಿಯಲ್ಲಿ ದುರಾಡಳಿತ ಎಂದು ಪರಿಗಣಿಸಬೇಕಾಗಿರುತ್ತದೆ ಎಂದು ಉಪ ಲೋಕಾಯುಕ್ತರು ತಮ್ಮ ನೋಟೀಸಿನಲ್ಲಿ ಎಚ್ಚರಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಕಲಂ 7(2) ಮತ್ತು 9(3)(ಎ) ಪ್ರಕಾರ, ಅಧಿಕಾರ ಚಲಾಯಿಸಿ ಸುಮೋಟೋ ಪ್ರಕ್ರಿಯೆ ಪ್ರಾರಂಭಿಸುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳ ಕಡೆಯಿಂದ ನಿಷ್ಕ್ರಿಯತೆ ಅಥವಾ ದುರಾಡಳಿತವಿದೆಯೇ ಎಂದು ಪರಿಶೀಲಿಸಲು ಮತ್ತು ಪ್ರಶ್ನೆಯಲ್ಲಿರುವ ಕುಂದುಕೊರತೆಯ ಸರಿಯಾದ ಪರಿಹಾರಕ್ಕಾಗಿ, ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ತಹಸೀಲ್ದಾರ್ ರಾಜೇಶ್ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಬಬ್ಬೂರು ಗ್ರಾಪಂ ಪಿಡಿಓ ನವ ನೀತಮ್ಮ ಅವರುಗಳ ಎದುರುದಾರರೆಂದು ಪರಿಗಣಿಸಿ ನೋಟೀಸ್ ಜಾರಿ ಮಾಡಲಾಗಿದೆ. ಲೋಪದೋಷಗಳು, ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ವಹಿಸಿ, ಈ ಸಂಬಂಧದ ವರದಿಯನ್ನು ಫೆಬ್ರವರಿ 20ರ ಒಳಗಾಗಿ ಸಲ್ಲಿಸುವಂತೆ ಉಪ ಲೋಕಾಯಕ್ತರು ನಿರ್ದೇಶನ ನೀಡಿದ್ದಾರೆ. ಆದೇಶದ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರಿಗೂ ಕಳಿಸಲು ಸೂಚಿಸಿದ್ದಾರೆ.

Share this article