ಸಿದ್ದಾಪುರ: ಹೆರಿಗೆಯ ನಂತರ ಅಧಿಕ ರಕ್ತಸ್ರಾವದಿಂದ ತಾಲೂಕಿನ ಹಾರ್ಸಿಕಟ್ಟಾ ಕೋಣೆಗದ್ದೆಯ ಮಹಿಳೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಸಾವಿರಾರು ಸಾರ್ವಜನಿಕರು ಪಟ್ಟಣದ ತಾಲೂಕು ಆಸ್ಪತ್ರೆಯ ಎದುರು ಮೃತಪಟ್ಟ ಮಹಿಳೆಯ ಶವ ಇಟ್ಟು ರಾತ್ರಿ ೮.೧೫ರ ತನಕ ಪ್ರತಿಭಟನೆ ನಡೆಸಿದರು.ಹಾರ್ಸಿಕಟ್ಟಾ ಸಮೀಪದ ಕೊಣೆಗದ್ದೆಯ ಜ್ಯೋತಿ ರವಿ ನಾಯ್ಕ (೩೬) ಮೃತಪಟ್ಟ ಮಹಿಳೆ.
ನ. ೫ರಂದು ತಾಲೂಕು ಆಸ್ಪತ್ರೆಯ ವೈದ್ಯರು ಜ್ಯೋತಿ ಅವರಿಗೆ ಸಿಜೆರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ನಂತರ ರಕ್ತಸ್ರಾವ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಜ್ಯೋತಿ ಮೃತಪಟ್ಟಿದ್ದಾರೆ.ತಾಲೂಕು ಆಸ್ಪತ್ರೆಯಲ್ಲಿ ಕಳೆದ ೮ ದಿನಗಳಲ್ಲಿ ಹೆರಿಗೆಯಾದ ಮಹಿಳೆಯರು ಮೃತಪಟ್ಟ ಎರಡನೇ ಪ್ರಕರಣವಾಗಿದ್ದು, ಆಕ್ರೋಶಗೊಂಡ ಸಾರ್ವಜನಿಕರು ಹೆರಿಗೆ ಮಾಡಿಸಿದ ವೈದ್ಯರು ನಿರ್ಲಕ್ಷ್ಯದಿಂದ ಈ ಎರಡೂ ಸಾವುಗಳು ಸಂಭವಿಸಿದೆ. ಸ್ಥಳಕ್ಕೆ ಆ ವೈದ್ಯರನ್ನು ಕರೆಸಬೇಕು. ಅವರನ್ನು ಅಮಾನತುಗೊಳಿಸಬೇಕು. ಅಲ್ಲದೇ ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು. ಆವರೆಗೂ ಶವವನ್ನು ಇಲ್ಲಿಂದ ತೆಗೆಯುವದಿಲ್ಲ ಎಂದು ಆಗ್ರಹಿಸಿದರು.ತಾಲೂಕು ಆಸ್ಪತ್ರೆಯ ಮುಖ್ಯಾಧಿಕಾರಿ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮುಂತಾದ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡರೂ ಅವರು ಒಪ್ಪಲಿಲ್ಲ. ನಂತರ ಬಂದ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅವರು ಕೂಡ ಮಾತನಾಡಿ, ನಡೆದಿರುವ ಘಟನೆಗೆ ನಮಗೆಲ್ಲ ಬೇಸರವಿದೆ. ಮುಂದಿನ ಕ್ರಮಕ್ಕೆ ಅನುವು ಮಾಡಿಕೊಡಿ. ವೈದ್ಯರ ವಿರುದ್ಧ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರೂ ಅವರಿಗೆ ಮಾತನಾಡದಷ್ಟು ಗದ್ದಲ ನಡೆಯಿತು.
ಕಾರವಾರದಿಂದ ಡಿಎಚ್‌ಒ ನೀರಜ್ ಬಿ.ವಿ. ಅವರು ಆಸ್ಪತ್ರೆಗೆ ಬಂದು ಉಪವಿಭಾಗಾಧಿಕಾರಿ, ತಹಸೀಲ್ದಾರ್, ಡಿವೈಎಸ್‌ಪಿ ತಾಲೂಕು ವೈದ್ಯಾಧಿಕಾರಿಗಳ ಜತೆಗೆ ಮೃತಪಟ್ಟ ಮಹಿಳೆಯ ಪತಿ, ಅವರ ಕುಟುಂಬದವರ ಜತೆ ಮಾತನಾಡಿದರು.ನಂತರ ಡಿಎಚ್‌ಒ ಹಾಗೂ ಉಪವಿಭಾಗಾಧಿಕಾರಿಗಳು ನಾಳೆಯೇ ಹೆರಿಗೆ ವೈದ್ಯರ ಅಮಾನತಿಗೆ ಶಿಫಾರಸು ಮಾಡುತ್ತೇವೆ ಹಾಗೂ ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡುತ್ತೇವೆ ಎಂದು ಪ್ರತಿಭಟನಾಕಾರರ ಎದುರು ಘೋಷಿಸಿದರು. ಮೃತಪಟ್ಟ ಮಹಿಳೆಯ ಪತಿ ರವಿನಾಯ್ಕ ಹಾಗೂ ಅವರ ತಂದೆ ಕೂಡ ಪ್ರತಿಭಟನಾಕಾರರಲ್ಲಿ ಪ್ರತಿಭಟನೆ ನಿಲ್ಲಿಸಲು ಮನವಿ ಮಾಡಿಕೊಂಡರು. ಆದರೂ ಪ್ರತಿಭಟನಾಕಾರರು ಒಪ್ಪದಿದ್ದಾಗ ನಂತರ ಮೃತದೇಹವನ್ನು ಪೊಲೀಸ್ ಬಂದೋಬಸ್ತನಲ್ಲಿ ಮಹಿಳೆಯ ಮೃತದೇಹವನ್ನು ಅವರ ಊರಿಗೆ ಒಯ್ಯಲಾಯಿತು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರಿದ್ದರು.