ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ

KannadaprabhaNewsNetwork |  
Published : Jul 17, 2025, 01:45 AM IST
Venugopaal | Kannada Prabha

ಸಾರಾಂಶ

ನೆಲಮಂಗಲ ಟೋಲ್‌ನ ಬೂದಿಹಾಳ್‌ ಗೇಟ್‌ನಲ್ಲಿ ಕಾಮಗಾರಿ ಕುಂಟುತ್ತಾ ಸಾಗಿರುವುದು.

ಸಿದ್ದು ಚಿಕ್ಕಬಳ್ಳೇಕೆರೆಕನ್ನಡಪ್ರಭ ವಾರ್ತೆ ಬೆಂಗಳೂರು

ತುಮಕೂರು-ಬೆಂಗಳೂರು ನಡುವಿನ ದಶಪಥ ರಸ್ತೆ ನಿರ್ಮಾಣ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದ್ದು, ಪ್ರತಿನಿತ್ಯವೂ ಲಕ್ಷಾಂತರ ವಾಹನ ಸವಾರರು ಸಂಚಾರ ದಟ್ಟಣೆಯಿಂದಾಗಿ ಹೈರಾಣಾಗುತ್ತಿದ್ದಾರೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ವು ಬೆಂಗಳೂರು ತುಮಕೂರು ಹೆದ್ದಾರಿ ವಿಸ್ತರಣೆಯನ್ನು ‘ಭಾರತ್‌ಮಾಲಾ’ ಯೋಜನೆಯಡಿ ದಶಪಥವಾಗಿ ಪರಿವರ್ತಿಸಲು ಕೈಗೆತ್ತಿಕೊಂಡಿದ್ದು, ಕಾಮಗಾರಿ ಮಾತ್ರಾ ಕುಂಟುತ್ತಾ ಸಾಗಿದೆ. ನೆಲಮಂಗಲ-ತುಮಕೂರು ರಾಷ್ಟ್ರೀಯ ಹೆದ್ದಾರಿ-48ರ ನಾಲ್ಕು ಪಥದ 44.04 ಕಿ.ಮೀ. ರಸ್ತೆಯನ್ನು ಒಟ್ಟಾರೆ 2,200 ಕೋಟಿ ರು. ವೆಚ್ಚದಲ್ಲಿ ಹತ್ತು ಪಥಕ್ಕೆ ವಿಸ್ತರಿಸುವ ಈ ಯೋಜನೆ ವಿಳಂಬಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೆಲಮಂಗಲದಿಂದ ತುಮಕೂರಿನವರೆಗೆ ಇದ್ದ ನಾಲ್ಕು ಪಥದ ರಸ್ತೆಯನ್ನು ಹತ್ತು ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಈ ಯೋಜನೆಯನ್ನು ಎರಡು ಹಂತವಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಎರಡೂ ಕಡೆ ದ್ವಿಪಥದ ಸರ್ವೀಸ್‌ ರಸ್ತೆ, ಬಳಿಕ ಎರಡೂ ಭಾಗದಲ್ಲಿ ತಲಾ ಮೂರು ಪಥದ ಮುಖ್ಯ ರಸ್ತೆ ನಿರ್ಮಾಣವಾಗಲಿದೆ.

ಕಾಮಗಾರಿ ಆರಂಭವೇ ವಿಳಂಬ:

2021ರಲ್ಲೇ ಯೋಜನೆಯ ರೂಪುರೇಷೆ ಅಂತಿಮಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್‌ 2025 ರಲ್ಲಿ ಎರಡೂ ಕಡೆ ದ್ವಿಪಥದ ಸರ್ವೀಸ್‌ ರಸ್ತೆ ನಿರ್ಮಾಣವಾಗಬೇಕಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದ್ದರಿಂದ ಯೋಜನೆಗೆ ಗ್ರಹಣ ಹಿಡಿದಿದೆ. 30ಕ್ಕೂ ಅಧಿಕ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿ ಗುರುತಿಸುವಿಕೆ, ಪರಿಹಾರ ನೀಡಿಕೆ. ಭೂಮಿ ವಶಪಡಿಸಿಕೊಳ್ಳುವುದು ಮತ್ತಿತರ ಕಾರ್ಯಗಳು ವಿಳಂಬವಾಗಿದ್ದು, ಯೋಜನೆ ಕುಂಟಿತವಾಗಲು ಪ್ರಮುಖ ಕಾರಣವಾಗಿದೆ.

44 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಯಲ್ಲಿ ಪ್ರಸ್ತುತ ಬೆರಳೆಣಿಕೆಯಷ್ಟು ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಅಲ್ಲಲ್ಲಿ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಂತಹ ಸ್ಥಳಗಳ ಒಂದಷ್ಟು ದೂರದವರೆಗೂ ಮಾತ್ರ ಸರ್ವೀಸ್‌ ರಸ್ತೆ ನಿರ್ಮಿಸಿ ವಾಹನಗಳು ಈ ಸರ್ವೀಸ್‌ ರಸ್ತೆ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು-ತುಮಕೂರು ಮಾರ್ಗದ ನೆಲಮಂಗಲ ಟೋಲ್‌ ಬಳಿ ಸಿಗುವ ಬೊಮ್ಮನಹಳ್ಳಿಯಿಂದ ಎಡಭಾಗದಲ್ಲಿ ಮಾತ್ರ ಸರ್ವೀಸ್‌ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಭೂಮಿಯನ್ನು ಸಮತಟ್ಟು ಮಾಡಿ ತಿಂಗಳಾದ ಬಳಿಕ ಇದೀಗ ಜಲ್ಲಿ, ಕಾಂಕ್ರೀಟ್‌ ಹಾಕಿದ್ದು ಇನ್ನೂ ಡಾಂಬರು ಭಾಗ್ಯ ಕಂಡಿಲ್ಲ. ಎರಡೂ ಕಡೆ ಬಾಕ್ಸ್‌ ಚರಂಡಿ ನಿರ್ಮಾಣವೂ ಪೂರ್ಣಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಬೂದಿಹಾಳ್‌ ಗೇಟ್‌ನಲ್ಲಿ ಕೆಳ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಕಾಮಗಾರಿ ತೆವಳುತ್ತಾ ಸಾಗಿದೆ. ಕುಲುವನಹಳ್ಳಿ, ಕೆಂಗಲ್‌ ಕೆಂಪೋಹಳ್ಳಿ ಬಳಿಯೂ ಒಂದಷ್ಟು ಸರ್ವೀಸ್‌ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನುಳಿದಂತೆ ಯಾವುದೇ ಪ್ರಗತಿ ಕಂಡಿಲ್ಲ. ಡಾಬಸ್‌ಪೇಟೆಯ ನಂತರವಂತೂ ರಸ್ತೆ ವಿಸ್ತರಣೆ ಕಾಮಗಾರಿಯ ಯಾವುದೇ ಕುರುಹು ಕಾಣಿಸುವುದಿಲ್ಲ. ಆದ್ದರಿಂದ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇಬ್ಬರು ಕೈಮುರಿದುಕೊಂಡಿದ್ದಾರೆ

ಬೊಮ್ಮನಹಳ್ಳಿಯಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಲು ಮಣ್ಣು ಹೇರಿದ್ದಾಗ ಬಿದ್ದು ಇಬ್ಬರು ಮಹಿಳೆಯರು ಕೈಮುರಿದುಕೊಂಡಿದ್ದಾರೆ. ಕಾಮಗಾರಿ ಯಾವಾಗ ಪೂರ್ಣಗೊಳಿಸುತ್ತಾರೋ ಎಂದು ಸ್ಥಳೀಯರಾದ ವೇಣಿಗೋಪಾಲ್‌ ಪ್ರಶ್ನಿಸಿದ್ದಾರೆ.‘ಕನ್ನಡ ಪ್ರಭ’ದೊಂದಿಗೆ ಮಾತನಾಡಿ, ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಮಣ್ಣು ಹೇರಿ, ಸಮತಟ್ಟು ಮಾಡಿ ತಿಂಗಳಾದ ಬಳಿಕ ನಾಲ್ಕು ದಿನದ ಹಿಂದೆ ಕಾಂಕ್ರೀಟ್‌ ಹಾಕಿದ್ದಾರೆ. ಇನ್ನು ಡಾಂಬರ್‌ ಹಾಕುವುದು ಯಾವ ಕಾಲಕ್ಕೋ? ಎರಡೂವರೆ ವರ್ಷವಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ