ಎಂ. ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರರಾಜಕಾರಣದಲ್ಲಿ ಅನೇಕ ನಾಯಕರಿಗೆ ಸ್ಪರ್ಧಿಸುವ ಕ್ಷೇತ್ರದಿಂದ ಅದೃಷ್ಟ ಖುಲಾಯಿಸಿದರೆ, ಕೆಲವರು ಸ್ಪರ್ಧಿಸಿದ ಕಾರಣದಿಂದಾಗಿ ಕ್ಷೇತ್ರಕ್ಕೆ ಅದೃಷ್ಟ ತಂದುಕೊಟ್ಟ ನಿದರ್ಶನಗಳು ಸಾಕಷ್ಟಿವೆ.
ಇದಕ್ಕೆ ಹಿಂದೆ ಅಸ್ತಿತ್ವದಲ್ಲಿದ್ದ ಕನಕಪುರ ಸಂಸತ್ ಕ್ಷೇತ್ರ ಹಾಗೂ ಈಗಿನ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರ ಸಾಕ್ಷಿಯಾಗಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಸೋತವರು ಮತ್ತು ಸೋತು ಗೆದ್ದವರು ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹ್ಯಾಟ್ರಿಕ್ ಸಂಸದ ಡಿ.ಕೆ. ಸುರೇಶ್ ವಿರುದ್ಧ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್ .ಮಂಜುನಾಥ್ ರವರು ಸ್ಪರ್ಧೆ ಮಾಡಿರುವುದರಿಂದ ಕುತೂಹಲ ಹೆಚ್ಚಿಸಿದೆ. ಇಲ್ಲಿ ಗೆದ್ದವರ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅವರು ಉನ್ನತ ಹುದ್ದೆ ಅಲಂಕರಿಸುವುದರಲ್ಲಿ ಅನುಮಾನವೇ ಇಲ್ಲ.
ಎಂ.ವಿ. ರಾಜಶೇಖರನ್:1967ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ರಚನೆಯಾಯಿತು. ಇಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್‌ನ ಎಂ.ವಿ.ರಾಜಶೇಖರನ್. ಆನಂತರದ ಚುನಾವಣೆಗಳಲ್ಲಿ (1971, 77 ಮತ್ತು 80ರಲ್ಲಿ) ಹ್ಯಾಟ್ರಿಕ್ ಸೋಲು ಅನುಭವಿಸಿದರು.
1978ರಲ್ಲಿ ಉತ್ತರಹಳ್ಳಿ ಶಾಸಕರಾದರು. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕತ್ವವನ್ನು ಎಸ್.ಎಂ. ಕೃಷ್ಣ ವಹಿಸಿಕೊಳ್ಳಲು ಇವರೇ ಕಾರಣರಾದರು. 1999ರಲ್ಲಿ ಕೃಷ್ಣರವರ ನೇತೃತ್ವದ ಸರ್ಕಾರ ಬಂದ ಮೇಲೆ ವಿಧಾನ ಪರಿಷತ್ ಸದಸ್ಯರಾದರು. 2002ರಲ್ಲಿ ರಾಜ್ಯಸಭಾ ಸದಸ್ಯರಾದರು. 2004ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಯೋಜನಾ ಖಾತೆ ಸಚಿವರಾದರು. ರಾಜಕೀಯದಲ್ಲಿದ್ದುಕೊಂಡು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ 120ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದರು.ಸಿ.ಕೆ. ಜಾಫರ್ ಷರೀಫ್ :
ಕನಕಪುರ ಕ್ಷೇತ್ರದಿಂದ ಒಮ್ಮೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದಿಂದ 7 ಬಾರಿ ಆಯ್ಕೆಯಾದವರು. 1971ರಲ್ಲಿ ಕನಕಪುರ ಕ್ಷೇತ್ರದಿಂದ ಆಯ್ಕೆಯಾದ ಜಾಫರ್ ಷರೀಫ್, ಮುಂದಿನ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಹೋದರು. ಅಲ್ಲಿಂದ 1977, 1980, 1984, 1989, 1991, 1998, 1999 ಗೆಲುವು ಸಾಧಿಸಿದರು.1980 - 84 ರಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ, 1984ರಲ್ಲಿ ಕೇಂದ್ರದ ನೀರಾವರಿ ಖಾತೆ ರಾಜ್ಯ ಸಚಿವ, 1988 - 89 ರಲ್ಲಿ ಕೇಂದ್ರದ ಕಲ್ಲಿದ್ದಲು ಖಾತೆ ರಾಜ್ಯ ಸಚಿವ, 1989 - 90ರಲ್ಲಿ ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯ, ಕೇಂದ್ರ ಸರ್ಕಾರದ ಖಾತ್ರಿ ಸಮಿತಿಯ ಸದಸ್ಯ, ವಾಣಿಜ್ಯ ಸಲಹಾ ಸಮಿತಿ ಸದಸ್ಯರಾಗಿದ್ದರು. ಅಲ್ಲದೆ ಆರೋಗ್ಯ, ಇಂಧನ, ಅಣುಶಕ್ತಿ ಮತ್ತು ಮಾಧ್ಯಮ ವ್ಯವಹಾರಗಳ ಖಾತೆ ಸಲಹಾ ಸಮಿತಿ ಸದಸ್ಯರಾಗಿದ್ದರು. 1991 -95ರಲ್ಲಿ ರೈಲ್ವೆ ಖಾತೆ ಸಚಿವ, 1998ರಲ್ಲಿ ಪತ್ರಿಕಾ ವ್ಯವಹಾರ ಮತ್ತು ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ ಸಮಿತಿಗಳ ಸದಸ್ಯರಾಗಿದ್ದರು.
ಎಂ.ವಿ. ಚಂದ್ರಶೇಖರ ಮೂರ್ತಿ :ಕನಕಪುರ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಆಯ್ಕೆಯಾದ ಹಿರಿಮೆ ಕಾಂಗ್ರೆಸ್‌ನ ಎಂ.ವಿ.ಚಂದ್ರಶೇಖರ ಮೂರ್ತಿ ಅವರದ್ದು. 1977ರಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಕಣಕ್ಕೆ ಇಳಿದ ಚಂದ್ರಶೇಖರ ಮೂರ್ತಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದರು. 1977ರಿಂದ 1996ವರೆಗೆ ನಡೆದ ಐದು ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿ ದಾಖಲೆ ಬರೆದರು. 1993ರಿಂದ 96 ವರೆಗೆ ಪಿ.ವಿ.ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುವ ಅವಕಾಶವೂ ಅವರಿಗೆ ಒದಗಿ ಬಂದಿತು. ಆದರೆ, ಸಚಿವರಾದ ಮರು ಚುನಾವಣೆಯಲ್ಲಿಯೇ ಚಂದ್ರಶೇಖರಮೂರ್ತಿ ಮುಖಭಂಗ ಅನುಭವಿಸಬೇಕಾಯಿತು. 1999ರಲ್ಲಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದರು.
ಪಿಜಿಆರ್ ಸಿಂಧ್ಯಾ:ಕನಕಪುರ ಸಂಸತ್ ಕ್ಷೇತ್ರದಲ್ಲಿ 1984 ಮತ್ತು 1991ರಲ್ಲಿ ಜನತಾ ಪರಿವಾರದಿಂದ ಸ್ಪರ್ಧಿಸಿ ಸೋತವರು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದ ಪಿ.ಜಿ.ಆರ್.ಸಿಂಧ್ಯಾ ಕನಕಪುರದಲ್ಲಿ ಜನತಾ ಪರಿವಾರದಿಂದ 1983ರಲ್ಲಿ ಶಾಸಕರಾಗಿದ್ದರು. ನಂತರ ಹೆಗಡೆ ಅವರಿಗೋಸ್ಕರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟಿದ್ದರು. 1985ರಲ್ಲಿ ಮತ್ತೆ ಕನಕಪುರದಲ್ಲಿ ಗೆಲುವು ಸಾಧಿಸಿದ್ದ ಸಿಂಧ್ಯಾ 1994ರಲ್ಲಿ ದೇವೇಗೌಡರ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. 2008ರಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷರಾಗಿದ್ದ ಇವರು ಮತ್ತೆ ಜೆಡಿಎಸ್ ಸೇರ್ಪಡೆಯಾಗಿ ಕನಕಪುರದಿಂದ ಸ್ಪರ್ಧಿಸಿ ಡಿ.ಕೆ. ಶಿವಕುಮಾರ್ ಎದುರು ಸೋಲನುಭವಿಸಿದರು.
ಸಿ.ನಾರಾಯಣಸ್ವಾಮಿ :1989ರಲ್ಲಿ ಸಂಸತ್ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಸಿ. ನಾರಾಯಣಸ್ವಾಮಿ ಕಾಂಗ್ರೆಸ್ ನ ಎಂ.ವಿ. ಚಂದ್ರಶೇಖರ ಮೂರ್ತಿ ಎದುರು ಪರಾಭವಗೊಂಡಿದ್ದರು. ಆನಂತರ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಹೋಗಿ 1996ರಲ್ಲಿ ಗೆಲವು ಸಾಧಿಸಿದರು. 1985 - 86ರಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮಂಡಳಿ ಅಧ್ಯಕ್ಷರಾಗಿ, 1987 - 92 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಪಂಚಾಯತ್ ಪರಿಷತ್ ಅಧ್ಯಕ್ಷರಾಗಿದ್ದರು.
ಎಚ್.ಡಿ.ಕುಮಾರಸ್ವಾಮಿ:1996ರ ಸಂಸತ್ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲವು ಸಾಧಿಸುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. 1998ರಲ್ಲಿ ಸಂಸತ್ ಸೋತ ಬಳಿಕ, 1999ರ ವಿಧಾನಸಭೆ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಎದುರು ಪರಾಭವಗೊಂಡ ನಂತರ ರಾಮನಗರ ಕ್ಷೇತ್ರವನ್ನು ಕರ್ಮಭೂಮಿ ಮಾಡಿಕೊಂಡರು. 2004ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಕುಮಾರಸ್ವಾಮಿ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಬಿಜೆಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿ, 2006 ರ ಫೆ. 3ರಂದು ಕರ್ನಾಟಕದ 18ನೇ ಮುಖ್ಯಮಂತ್ರಿಯಾದರು.
2007ರಲ್ಲಿ ಶಾಸಕರಾಗಿ, 2009ರ ಸಂಸತ್ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾದರು. ಆಗ ಕೇಂದ್ರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಪಾರ್ಲಿಮೆಂಟ ಹೌಸ್ ಕಾಂಪ್ಲೆಕ್ಸ್ ಫುಡ್ ಮ್ಯಾನೇಜ್ ಮೆಂಟ್ ಕಮಿಟಿ ಸದಸ್ಯರಾಗಿದ್ದರು.2013ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಮೂರನೇ ಬಾರಿ ಆಯ್ಕೆ. 2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಸೋಲು 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆ. ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡು 25ನೇ ಮುಖ್ಯಮಂತ್ರಿಯಾದರು.
ಎಚ್.ಡಿ.ದೇವೇಗೌಡ:1962ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾದ ದೇವೇಗೌಡರು, ಹೊಳೆನರಸೀಪುರ ಕ್ಷೇತ್ರದಿಂದ 1967, 1972, 1978ರಲ್ಲಿ ಚುನಾಯಿತರಾದರು. 1972 - 77ರವರೆಗೆ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು.
ಏಳನೇ ಮತ್ತು ಎಂಟನೇ ವಿಧಾನಸಭೆಯ ಸದಸ್ಯರಾಗಿದ್ದ ಗೌಡರು, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದರು. ನೀರಾವರಿಗೆ ಸಾಕಷ್ಟು ಹಣಕಾಸು ಮಂಜೂರಾತಿ ನೀಡದಿದ್ದನ್ನು ಪ್ರತಿಭಟಿಸಿ 1987 ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್ ಗೆ ಆಯ್ಕೆಯಾದರು. 1994ರಂದು ಇವರು ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಕರ್ನಾಟಕದ 14 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆನಂತರ ಇವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಭಾರತದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು 1996ರ ಮೇ 30ರಂದು ಮುಖ್ಯಮಂತ್ರಿ ಹುದ್ದೆಗೆ ದೇವೇಗೌಡರು ರಾಜೀನಾಮೆ ನೀಡಿದರು. 2002ರ ಉಪಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಗೆಲವು ಸಾಧಿಸಿದ ಗೌಡರು, 2004ರ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.ಸಿ.ಪಿ. ಯೋಗೇಶ್ವರ್:
ಚಿತ್ರನಟ ಸಿ.ಪಿ.ಯೋಗೇಶ್ವರ್ 1996ರಲ್ಲಿ ರಾಜಕೀಯ ಪ್ರವೇಶಿಸಿದರು. 1999ರಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷೇತರ ಶಾಸಕ, 2004, 2008ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು. 2009ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. 2009ರ ಸಂಸತ್ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾವಭಗೊಂಡರು. ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆದ 2009ರ ಉಪಚುನಾವಣೆಯಲ್ಲಿ ಸೋತ ನಂತರ 2011ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಅರಣ್ಯ ಸಚಿವರಾದರು.2013ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಜಯ ಸಾಧಿಸಿದರು. 2015ರಲ್ಲಿ ಕಾಂಗ್ರೆಸ್ ಸಂಸದೀಯ ಮಂಡಳಿ ಸಹ ಸದಸ್ಯರಾದರು. 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡರು. 2020ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಯೋಗೇಶ್ವರ್ ಸಚಿವರಾಗಿ ಸಂಪುಟ ಪ್ರವೇಶ ಪಡೆದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸೋಲು ಅನುಭವಿಸಿದರು.