ಸರ್ಕಾರಿ ಯೋಜನೆಗಳಿಗೆ ಆರ್ಥಿಕ ಸೌಲಭ್ಯ ಒದಗಿಸುವಲ್ಲಿ ಬ್ಯಾಂಕ್ ಪಾತ್ರ ಪ್ರಮುಖ-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Feb 22, 2025, 12:46 AM IST
ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಕೈಪಿಡಿ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವಲ್ಲಿ ಬ್ಯಾಂಕ್ ನೌಕರರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕನವರು ಸಾರ್ವಜನಿಕರೊಂದಿಗೆ ಸಹಕರಿಸಿ ಸೌಲಭ್ಯ ಒದಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ: ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವಲ್ಲಿ ಬ್ಯಾಂಕ್ ನೌಕರರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕನವರು ಸಾರ್ವಜನಿಕರೊಂದಿಗೆ ಸಹಕರಿಸಿ ಸೌಲಭ್ಯ ಒದಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಲೀಡ್‌ ಬ್ಯಾಂಕ್‌ನ ಡಿಎಲ್‌ಆರ್‌ಸಿ, ಡಿಸಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡಜನರು ಆರ್ಥಿಕವಾಗಿ ಸ್ವಾವಲಂಬಿ ಬದುಕು ನಡೆಸಲು ಬ್ಯಾಂಕ್‌ಗಳು ಸಹಕಾರಿಯಾಗಬೇಕು. ಯೋಜನೆಗಳ ಆರ್ಥಿಕ ಸೌಲಭ್ಯ ಒದಗಿಸುವಾಗ ವಿನಾಕಾರಣ ವಿಳಂಬ ಧೋರಣೆ ಮಾಡಬಾರದು ಎಂದರು.

ಒಂದು ವೇಳೆ ಫಲಾನುಭವಿಗಳು ಅನಕ್ಷರಸ್ಥರಾಗಿದ್ದಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸೌಲಭ್ಯ ಒದಗಿಸಲು ಸಹಕರಿಸಬೇಕು. ಲೀಡ್‌ ಬ್ಯಾಂಕ್‌ನ ಸಭೆಗೆ ಸಂಬಂಧಿತ ಎಲ್ಲ ಬ್ಯಾಂಕ್‌ನ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಬ್ಯಾಂಕ್‌ನವರು ಸಾಲ ಠೇವಣಿ ಅನುಪಾತವನ್ನು ಹೆಚ್ಚಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಆರ್ಥಿಕ ಗುರಿ 100 % ರಷ್ಟು ಸಾಧಿಸಿದ ಬ್ಯಾಂಕಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಗುವುದು ಎಂದರು. ವಿವಿಧ ಯೋಜನೆಗಳ ಆರ್ಥಿಕ ಸೌಲಭ್ಯಕ್ಕಾಗಿ ಸ್ವೀಕರಿಸಲಾದ ಅರ್ಜಿಗಳನ್ನು ಆದಷ್ಟು ಶೀಘ್ರ ವಿಲೇವಾರಿಗೆ ಕ್ರಮ ವಹಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಯ ಯಶಸ್ವಿಗೆ ಒತ್ತು ನೀಡಬೇಕೆಂದು ತಿಳಿಸಿದ ಅವರು, ಬ್ಯಾಂಕ್‌ಗಳ ವಿಶ್ವಾಸಾರ್ಹತೆ ಹೆಚ್ಚಾಗುವ ರೀತಿಯಲ್ಲಿ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಡೆದುಕೊಳ್ಳಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸರಕಾರ ಜಾರಿಗೆ ತಂದಿರುವ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕು ಹಾಗೂ ಸಾಲ ವಸೂಲಾತಿ ಮಾಡುವಾಗ ಮಾನವೀಯತೆಯಿಂದ ವರ್ತಿಸಬೇಕು ಎಂದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ. ಮಾತನಾಡಿ ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್‌ನ 182 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಡಿಸೆಂಬರ್ 2024ರ ವರೆಗೆ ಜಿಲ್ಲೆಯ ಸಾಲ ಠೇವಣಿ ಅನುಪಾತ 95.94 % ಆಗಿರುತ್ತದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲ ಯೋಜನೆಯಡಿ 2024ರ ಡಿಸೆಂಬರ್ ವರೆಗೆ ಕೃಷಿ ಸೇರಿದಂತೆ ಆದ್ಯತಾ ವಲಯಕ್ಕೆ ₹ 355753.07 ಲಕ್ಷ ಸಾಲ ನೀಡಿಕೆಯಾಗಿದೆ. ತಾಲೂಕಾವಾರು ಗದಗ ₹ 139477.48, ಗಜೇಂದ್ರಗಡ ₹ 19644.04, ಲಕ್ಷ್ಮೇಶ್ವರ ₹ 18247.06, ಮುಂಡರಗಿ ₹ 35779.63, ನರಗುಂದ ₹ 41351.17, ರೋಣ ₹ 68664.84, ಶಿರಹಟ್ಟಿ ₹ 32588.85 ಸಾಲ ನೀಡಿಕೆಯಾಗಿದೆ ಎಂದು ಸಭೆಗೆ ತಿಳಿಸಿದರು. ಇದೇ ಸಂದರ್ಭದಲಿ ಪೊಟೆನ್ಷಿಯಲ್ ಲಿಂಕಡ್ ಕ್ರೆಡಿಟ್ ಪ್ಲಾನ್ ಕೈಪಿಡಿ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಎಪಿವೈ, (ಅಟಲ್ ಪೆನ್ಷನ್ ಯೋಜನೆ), ಪಿಎಂಎಸ್‌ಬಿವೈ ( ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪಿಎಂಜೆಜೆಬಿವೈ, ಎಸ್‌ಎಸ್‌ಎ, ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿ.ಪಂ. ಸಿಇಓ ಭರತ್ ಎಸ್., ನಬಾರ್ಡದ ಎಜಿಎಂ ಮಹಾದೇವ ಕೀರ್ತಿ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್., ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲೂರ ಬಸವರಾಜ, ವಿವಿಧ ಬ್ಯಾಂಕ್ ನ ಅಧಿಕಾರಿಗಳು, ಇತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ