ಬಸವನಬಾಗೇವಾಡಿ : ಇತ್ತೀಚೆಗೆ ಕಳ್ಳತನಕ್ಕೆ ಒಳಗಾಗಿದ್ದ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಮುಂದೆ ಬಂಗಾರ ಇಟ್ಟಿದ್ದ ನೂರಾರು ಗ್ರಾಹಕರು ಗುರುವಾರ ತಮ್ಮ ಬಂಗಾರ ಮರಳಿಸುವಂತೆ ಒತ್ತಾಯಿಸಿ ಬ್ಯಾಂಕ್ ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಿದರು.
ಕಳೆದ ಮೇ ತಿಂಗಳಲ್ಲಿ ಕೆನರಾ ಬ್ಯಾಂಕ್ ಕಳ್ಳತನ ವೇಳೆ ಬ್ಯಾಂಕ್‌ನಲ್ಲಿ ಗ್ರಾಹಕರು ಇಟ್ಟಿದ್ದ ೫೮ ಕೆಜಿ ಅಧಿಕ ಬಂಗಾರ ಹಾಗೂ ₹ ೫ ಲಕ್ಷ ನಗದನ್ನು ಕಳ್ಳತನ ಮಾಡಿದ್ದರು. ಇತ್ತೀಚೆಗೆ ಪೊಲೀಸರು ತೀವ್ರ ತನಿಖೆ ಮಾಡಿ ಕಳ್ಳರನ್ನು ಪತ್ತೆ ಮಾಡಿದ್ದು, ಅವರಿಂದ ೩೯ ಕೆಜಿ ಬಂಗಾರ, ₹ ೧.೧೬ ಕೋಟಿ ನಗದು ಸೇರಿದಂತೆ ಕೆಲವು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಬ್ಯಾಂಕ್ ಎಜಿಎಂ ಜಮೀರ್, ಬ್ಯಾಂಕ್‌ನಿಂದ 22 ಕ್ಯಾರೆಟ್ ಚಿನ್ನದ ದರದ ₹92,050 ಮೊತ್ತದಂತೆ ಆಯಾ ಗ್ರಾಹಕರ ಖಾತೆಗಳಿಗೆ ಹಣ ಹಾಕಿ ಹೋಲ್ಡ್‌ನಲ್ಲಿ ಇಡಲಾಗಿದೆ. ಸೆ.1ರಿಂದ ಎಲ್ಲರಿಗೂ ನೋಟಿಸ್ ಬರಲಿದ್ದು, ಗ್ರಾಹಕರನ್ನು ಕರೆದು ಒಪ್ಪಿಗೆ ಇದ್ದರೆ ಸಹಿಪಡೆದು ಹಣ ಬಿಡುಗಡೆ ಮಾಡಲಾಗುವುದು. ಸಮ್ಮತಿ ಇಲ್ಲದಿದ್ದರೆ ತಕರಾರು ಅರ್ಜಿ ಪಡೆದು ಮತ್ತೆ ಮರುಪರಿಶೀಲನೆಗೆ ಕಳುಹಿಸಲಾಗುವುದು. ನಾವು 24 ಕ್ಯಾರೆಟ್ ದರ ನೀಡುವುದಾಗಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳಿಕ ಎಜಿಎಂ ಜಮೀರ್ ಮಾತನಾಡಿ, 3-4 ದಿನಗಳಲ್ಲಿ ಬೆಂಗಳೂರಿನಿಂದ ಬ್ಯಾಂಕ್ ಮೇಲಾಧಿಕಾರಿಗಳು ಆಗಮಿಸಲಿದ್ದು, ಅವರೊಂದಿಗೆ ಪ್ರಮುಖರು ಮತ್ತೆ ಸಭೆ ಸೇರಿ ಗ್ರಾಹಕರ ಎಲ್ಲಾ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುವುದು. ಸರಿಪಡಿಸಲು 15 ದಿನಗಳ ಕಾಲಾವಕಾಶ ಕೋರಿದರು. ಈ ವೇಳೆ ಧರಣಿನಿರತ ಪ್ರಮುಖರು, 15 ದಿನ ಬದಲು ತಿಂಗಳು ಸಮಯ ತೆಗೆದುಕೊಳ್ಳಿ. ಒಂದು ತಿಂಗಳಲ್ಲಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಿ, ಬ್ಯಾಂಕ್‌ನ್ನು ಶಾಶ್ವತವಾಗಿ ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಈ ವೇಳೆ ಮುಖಂಡರಾದ ಶಿವನಗೌಡ ಗುಜಗೊಂಡ, ರಾಜೇಂದ್ರ ಪಾಟೀಲ, ವಿಶ್ವನಾಥಗೌಡ ಪಾಟೀಲ, ಭಾಗ್ಯರಾಜ್ ಸೊನ್ನದ, ಯಲ್ಲಪ್ಪ ರೊಳ್ಳಿ, ಸಲೀಂ ಒಂಟಿ, ಜಿ.ಜಿ.ಸಜ್ಜನ, ಪರಶು ಬಿದರಿ, ರೇವಣಸಿದ್ದ ಮಣ್ಣೂರ, ಶ್ರೀಕಾಂತ ಸಾರವಾಡ, ಆರ್.ಕೆ.ಪತ್ತಾರ, ಪ್ರದೀಪ ಜಾನಕರ, ಬಸವರಾಜ ಸಜ್ಜನ ಸೇರಿ ನೂರಾರು ಗ್ರಾಹಕರು ಇದ್ದರು. ಡಿವೈಎಸ್ಪಿ ಟಿ.ಎಸ್.ಸುಲ್ಪಿ, ಪಿಎಸ್ಐಗಳಾದ ರಮೇಶ ಅವಜಿ, ಶ್ರೀಕಾಂತ ಕಾಂಬಳೆ ಸೇರಿ ಒಂದು ಡಿಎಆರ್ ತುಕಡಿಯನ್ನ ಭದ್ರತೆಗೆ ನಿಯೋಜಿಸಲಾಗಿತ್ತು.
ಬಾಕ್ಸ್‌ನಮ್ಮ ಬಂಗಾರ ನಮಗೆ ಕೊಡಿಬ್ಯಾಂಕ್ ಅಧಿಕಾರಿಗಳು ನೀಡುವ ದರಕ್ಕೆ ಗ್ರಾಹಕರು ಒಪ್ಪುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ನಮಗೆ 22 ಕ್ಯಾರೆಟ್ ದರ ಎಂದು ಹೇಳಿಲ್ಲ. ಟಂಕವು ಸೇರಿ ಬಂಗಾರದ ಒಟ್ಟು ತೂಕಕ್ಕೆ ಈಗಿನ ಮಾರುಕಟ್ಟೆಯ ದರದ ಹಣ ನೀಡಲಾಗುವುದು ಎಂದಿದ್ದಕ್ಕೆ ನಾವು ಒಪ್ಪಿ ಹೋಗಿದ್ದೇವೆ. ನಮಗೆ ಹಣ ಬೇಡ, ನಮ್ಮ ಬಂಗಾರ ನಮಗೆ ಕೊಡಿ ಎಂದು ಒತ್ತಾಯಿಸಿದರು.
ನಾವು ಮೂರ್ನಾಲ್ಕು ತಿಂಗಳಿಂದ ಸಹಕಾರ ನೀಡಿದ್ದೇವೆ. ಜಿಎಂ ಸ್ಥಳಕ್ಕೆ ಬರಬೇಕು. ಅಲ್ಲಿವರೆಗೂ ಬ್ಯಾಂಕ್ ಕಾರ್ಯನಿರ್ವಹಿಸಲು ಬಿಡುವುದಿಲ್ಲ. ನಮಗೆ 24 ಕ್ಯಾರೆಟ್ ಚಿನ್ನದ ಪ್ರಸಕ್ತ ದರದಲ್ಲೇ ಹಣ ನೀಡಬೇಕು ಎಂದು ಪಟ್ಟು ಹಿಡಿದರು. ಮುಖಂಡ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಬ್ಯಾಂಕ್‌ನಲ್ಲಿ ನನ್ನದು 24 ಕ್ಯಾರೆಟ್‌ನ 17 ತೊಲಿ ಬಂಗಾರ ಅಡವಿಟ್ಟಿದ್ದೇವೆ. ಸದ್ಯ ಬ್ಯಾಂಕ್‌ನವರು 22 ಕ್ಯಾರೆಟ್ ಬೆಲೆ ನೀಡುತ್ತಿದ್ದಾರೆ. ಇದರಿಂದ ಒಂದು ಲಕ್ಷಕ್ಕೂ ಅಧಿಕ ನಷ್ಟವಾಗುತ್ತದೆ. ನನಗೆ 24 ಕ್ಯಾರೆಟ್ ಬಂಗಾರದ ಬೆಲೆ ನೀಡಿ ಇಲ್ಲವಾದರೆ ನಮ್ಮ ಬಂಗಾರ ನಮಗೆ ನೀಡಬೇಕು ಎಂದು ಒತ್ತಾಯಿಸಿದರು.