ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬದೇಶದ ಕೆಲವೇ ಪುಣ್ಯಸಂಗಮ ಸ್ಥಳಗಳಲ್ಲಿ ತಾಲೂಕಿನ ಬಂಕಸಾಣ ಗ್ರಾಮ ಬಳಿ ವರದಾ ಮತ್ತು ದಂಡಾವತಿ ನದಿಗಳ ಸಂಗಮವೂ ಒಂದಾಗಿದೆ. ನದಿಗಳ ಸಂಗಮ ಕ್ಷೇತ್ರದಲ್ಲಿ ನೆಲೆಸಿರುವ ಗ್ರಾಮ ದೇವತೆ ಶ್ರೀ ಹೊಳೆಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಜ.15 ಮತ್ತು 16ರಂದು ನಡೆಯಲಿದೆ. ತಾಲೂಕಿನ ಮಳಲಗದ್ದೆ ಬಳಿ ಹುಟ್ಟುವ ದಂಡಾವತಿ ನದಿ ಹಾಗೂ ಸಾಗರ ತಾಲೂಕಿನಿಂದ ವಿಸ್ತಾರಗೊಂಡು ಸೊರಬ ತಾಲೂಕಿಗೆ ಹರಿದು ಬರುವ ವರದಾ ನದಿ ಬಂಕಸಾಣಲ್ಲಿ ಸಂಗಮವಾಗುತ್ತವೆ. ಅನಂತರ ವರದಾನದಿಯಾಗಿ ಬಯಲುಸೀಮೆ ತಾಲೂಕುಗಳಿಗೆ ನೀರಿನ ಬರ ನೀಗಿಸುತ್ತವೆ. ಇಂಥ ಪವಿತ್ರ ಸ್ಥಳದಲ್ಲಿ ನೆಲೆಸಿರುವ ಶಿವನಿಗೆ ಹೊಳೆಲಿಂಗೇಶ್ವರ ಎಂದು ಹೇಳಲಾಗುತ್ತದೆ.
ಉತ್ತರಾಭಿಮುಖ ಹರಿವು:ಮಕರ ಸಂಕ್ರಾಂತಿ ಸಂದರ್ಭ ಶ್ರೀಕ್ಷೇತ್ರದ ಸಂಗಮ ಸ್ಥಳದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ದೇಶಾದ್ಯಂತ ಪೂರ್ವ ಅಥವಾ ಪಶ್ಚಿಮಾಭಿಮುಖವಾಗಿ ನದಿಗಳು ಹರಿಯುತ್ತವೆ. ಆದರೆ, ಬಂಕಸಾಣದಲ್ಲಿ ವರದಾ-ದಂಡಾವತಿ ಸಂಗಮ ನಂತರ ಉತ್ತರಾಭಿಮುಖವಾಗಿ ಹರಿಯುತ್ತದೆ. ಇದರಿಂದಾಗಿ ಉತ್ತರ ಪುಣ್ಯಕಾಲದಲ್ಲಿ ಮಕರ ಸಂಕ್ರಮಣದಂದು ಸ್ನಾನ ಮಾಡಿ, ಪೂಜೆ ಸಲ್ಲಿಸಿದರೆ ಪುಣ್ಯ ಸಿಗುತ್ತದೆ ಎಂಬುದು ನಂಬಿಕೆ.
ಜ.15ರಂದು ಮಕರ ಸಂಕ್ರಮಣದಂದು ಉತ್ತರಾಯಣ ಪುಣ್ಯಕಾಲ ಮತ್ತು ಪುಣ್ಯಸ್ನಾನ, ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮದ ನಂತರ 11 ಗಂಟೆಗೆ ಹೊಳೆಲಿಂಗೇಶ್ವರಸ್ವಾಮಿ ರಥೋತ್ಸವ ನಡೆಯಲಿದೆ. ಸಂಸದ ಬಿ.ವೈ. ರಾಘವೇಂದ್ರ ಧ್ವಜಾರೋಹಣ, ಲಿಂಗಪೂಜೆ ಮತ್ತು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವರು. ಜ.16ರಂದು ಸಚಿವ ಮಧು ಬಂಗಾರಪ್ಪ ರಥೋತ್ಸವಕ್ಕೆ ಚಾಲನೆ ನೀಡುವರು.ಜಡೆ ಗ್ರಾಪಂ ಪಿಡಿಒ ಚಿದಾನಂದ ಅವರು ಬಂಕಸಾಣ ಜಾತ್ರೆಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ತಯಾರಿ ನಡೆಸಲಾಗಿದೆ ಎಂದಿದ್ದಾರೆ. ಗ್ರಾಮದಲ್ಲಿ ಮನಿ ವಾಟರ್ ಟ್ಯಾಂಕ್ ಇದೆ. ಆದರೆ ಬರುವ ಭಕ್ತಾದಿಗಳಿಗೆ ಟ್ಯಾಂಕ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಪಂ ಅನುದಾನದಲ್ಲಿ ₹2 ಲಕ್ಷ ವೆಚ್ಚದಲ್ಲಿ ಸಮುದಾಯ ಶೌಚಾಲಯ ಕಟ್ಟಡ ನಿರ್ಮಾಣವಾಗಿದೆ. ಹೈಟೆಕ್ ಶೌಚಗೃಹ ನಿರ್ಮಿಸಲು ದೇವಸ್ಥಾನ ಕಮಿಟಿ ತಾವೇ ಹೆಚ್ಚುವರಿ ಹಣ ವಿನಿಯೋಗಿಸಿ ಪೂರ್ಣಗೊಳಿಸುತ್ತೇವೆ ಎಂದಿದ್ದರಿಂದ ಸಾರ್ವಜನಿಕರ ಬಳಕೆಗೆ ವಿಳಂಬವಾಗಿದೆ ಎಂದಿದ್ದಾರೆ.
ಬಂಕಸಾಣದ ಸುತ್ತಮುತ್ತಲಿನ ಪ್ರದೇಶ ಬಂಜರು. ಇಲ್ಲಿನ ಗ್ರಾಮಸ್ಥರು ಕಡುಬಡತನದಲ್ಲಿ ಬದುಕುವಂಥವರು. ಇದನ್ನು ಅರಿತು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಚಂದ್ರಹಾಸ ಟ್ರಸ್ಟ್ ಹುಟ್ಟುಹಾಕಿ, ಜಾತ್ರಾ ಸಮಯದಲ್ಲಿ ಸಾಮೂಹಿಕ ವಿವಾಹ ನಡೆಸುತ್ತಿದ್ದರು. ವಿವಾಹಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುತ್ತಿದ್ದರು. ಈವರೆಗೂ 18 ಸಾವಿರಕ್ಕೂ ಅಧಿಕ ಜೋಡಿ ಸತಿ-ಪತಿ ಆಗಿದ್ದಾರೆ. ಬಂಗಾರಪ್ಪ ಸಿಎಂ ಆಗಿದ್ದ ಸಂದರ್ಭ 500 ಜೋಡಿಗಳ ವಿವಾಹ ನಡೆದಿತ್ತು. ಈ ಸಂದರ್ಭದಲ್ಲಿ ಡಾ. ರಾಜ್‌ಕುಮಾರ ಪಾಲ್ಗೊಂಡು ನವಜೋಡಿಗಳಿಗೆ ಶುಭಕೋರಿದ್ದರು. ಇಂಥ ಪುಣ್ಯಕ್ಷೇತ್ರದಲ್ಲಿ ಮೂಲಸೌಲಭ್ಯಗಳು ಬೇಕಿವೆ.- - - ಕೋಟ್ಸ್
ಬ್ರಿಟಿಷ್ ಆಳ್ವಿಕೆಯ 1935ರ ಹಿಂದಿನಿಂದಲೂ ಸಂಗಮ ಸ್ಥಳದಲ್ಲಿ ನೆಲೆಸಿರುವ ಶ್ರೀ ಹೊಳೆಲಿಂಗೇಶ್ವರಸ್ವಾಮಿ ರಥೋತ್ಸವ ನಡೆಯುತ್ತಿದೆ ಎನ್ನುವ ಪುರಾವೆ ಇದೆ. ಈಗ ಮುಜರಾಯಿ ಇಲಾಖೆಗೆ ಒಳಪಟ್ಟು ಸಿ-ಗ್ರೇಡ್ ದೇವಸ್ಥಾನವಾಗಿದೆ. 1 ತಿಂಗಳು ನಡೆಯುವ ಜಾತ್ರೆಯಲ್ಲಿ ಲಕ್ಷದಷ್ಟು ಭಕ್ತರು ಆಗಮಿಸುತ್ತಾರೆ. ಭಕ್ತರು, ವರ್ತಕರಿಗೆ ಶೌಚಾಲಯ, ಯಾತ್ರಿ ನಿವಾಸ, ರಂಗಮಂದಿರ ಯಾವುದೂ ಇಲ್ಲದಿರುವುದು ದುರಂತ– ರಾಜಪ್ಪಗೌಡ ಪಾಟೀಲ್, ಅಧ್ಯಕ್ಷ, ಹೊಳೆಲಿಂಗೇಶ್ವರ ದೇವಸ್ಥಾನ ಸಮಿತಿ ಸೊರಬ ತಾಲೂಕಿನ ಮೂಗೂರು ಬಳಿ ಚೆಕ್ ಡ್ಯಾಂ ನಿರ್ಮಿಸಿದ್ದರಿಂದ ಕಳೆದ 3 ವರ್ಷಗಳಿಂದ ಸಂಗಮ ಸ್ಥಳದಲ್ಲಿನ ಶಿವಲಿಂಗದ ದರ್ಶನ ಭಾಗ್ಯ ಭಕ್ತರಿಗೆ ಲಭಿಸುತ್ತಿಲ್ಲ. ನದಿಯಲ್ಲಿ 17 ಅಡಿ ನೀರು ನಿಂತಿದೆ. ಭಕ್ತರಿಗೆ ವರ್ಷಪೂರ್ತಿ ಶಿವಲಿಂಗದ ದರ್ಶನ ದೊರೆಯುವಂತೆ ಕೂಡಲಸಂಗಮ ಮಾದರಿಯಲ್ಲಿ ನದಿಯಲ್ಲಿ ರಿಂಗ್ ರೂಂ, ಜಾಕ್‌ವೆಲ್ ಸೇತುವೆ ನಿರ್ಮಿಸುವ ಅವಶ್ಯಕತೆ ಇದೆ. ಇದರಿಂದ ಪ್ರವಾಸಿ ಸ್ಥಳವಾಗಿಯೂ ಮತ್ತು ಧಾರ್ಮಿಕ ಕ್ಷೇತ್ರವಾಗಿಯೂ ಬಂಕಸಾಣ ಮತ್ತಷ್ಟು ಪ್ರಸಿದ್ಧವಾಗಲಿದೆ
- ನಾಗರಾಜಗೌಡ, ಸದಸ್ಯ, ಬಂಕಸಾಣ ಗ್ರಾಪಂ- - - -13ಕೆಪಿಸೊರಬ01: ಸೊರಬ ತಾಲೂಕಿನ ಬಂಕಸಾಣ ಗ್ರಾಮದ ದಂಡಾವತಿ-ವರದಾ ನದಿಗಳ ಸಂಗಮ ಸ್ಥಳ. -13ಕೆಪಿಸೊರಬ02: ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ ದೇವರ ಮೂರ್ತಿ.