- ಜಿಲ್ಲಾಡಳಿತವು ಶುಕ್ರವಾರ ಆಯೋಜಿಸಿದ್ದ ಗಣರಾಜ್ಯೋತ್ಸವ
----ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತವು ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ವಿವಿಧ ಪೊಲೀಸ್ ತುಕಡಿಗಳ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ತಂಡವು ಶಿಸ್ತುಬದ್ಧ ಪಥಸಂಚಲನವು ಗಮನ ಸೆಳೆಯಿತು.ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ತೆರೆದ ಜೀಪಿನಲ್ಲಿ ತೆರಳಿ ಪಥಸಂಚಲನ ವೀಕ್ಷಿಸಿದರು. ನಂತರ ಆರಂಭವಾದ ಶಿಸ್ತುಬದ್ಧ ಪಥಸಂಚಲನದಲ್ಲಿ ವಿವಿಧ ಪೊಲೀಸ್ ತುಕಡಿಗಳು ಹಾಗೂ ಶಾಲಾ ಕಾಲೇಜು ತಂಡದ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಪ್ರಧಾನ ದಳಪತಿ ಅಶ್ವರೋಹಿದಳದ ಎಸಿಪಿ ಕೆ.ಎನ್. ಸುರೇಶ್ ನೇತೃತ್ವದಲ್ಲಿ ಆರಂಭವಾದ ಪಥಸಂಚಲನದಲ್ಲಿ ಅಶ್ವರೋಹಿ ದಳ, ಕೆ.ಎಸ್.ಆರ್.ಪಿ, ಸಿಎಆರ್, ಡಿಎಆರ್, ಮೈಸೂರು ನಗರದ ದೇವರಾಜ, ಕೃಷ್ಣರಾಜ, ನರಸಿಂಹರಾಜ, ವಿಜಯನಗರ ಉಪ ವಿಭಾಗ, ಸಂಚಾರ ಪೊಲೀಸ್, ಮಹಿಳಾ ಪೊಲೀಸರು, ಗೃಹರಕ್ಷಕ ದಳ, ಅಬಕಾರಿ ಸಿಬ್ಬಂದಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಸಮವಸ್ತ್ರದಲ್ಲಿ ಶಿಸ್ತುಬದ್ಧವಾಗಿ ಸಾಗಿದರು.ಇವರೊಂದಿಗೆ ಎನ್.ಸಿ.ಸಿ. ಭೂಸೇನೆ, ನೌಕದಳ, ವಾಯುದಳ, ಪೊಲೀಸ್ ಪಬ್ಲಿಕ್ ಶಾಲೆ, ನವೋದಯ ಶಾಲೆ, ಕ್ಯಾಪಿಟಲ್ ಪಬ್ಲಿಕ್ ಶಾಲೆ, ಭಾರತೀಯ ಸೇವಾದಳ ಹಾಗೂ ಸರ್ಕಾರಿ ಪಾಠಶಾಲೆಯ ವಿಶೇಷಚೇತನ ಮಕ್ಕಳು ಪಥಸಂಚಲನದಲ್ಲಿ ಗಮನ ಸೆಳೆದರು. ಈ ಪಥಸಂಚಲನಕ್ಕೆ ಕೆ.ಎಸ್.ಆರ್.ಪಿ, ಸಿಎಆರ್, ಡಿಎಆರ್ಪೊಲೀಸ್ ಬ್ಯಾಂಡ್ ಗಳು ಸಾಥ್ ನೀಡಿದವು.
ಬಹುಮಾನ ವಿತರಣೆಇದೇ ವೇಳೆ ಪಥಸಂಚಲನದಲ್ಲಿ ಭಾಗವಹಿಸಿದ್ದ ತಂಡಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಬಹುಮಾನ ವಿತರಿಸಿದರು.
ಸಶಸ್ತ್ರಪಡೆ ವಿಭಾಗ- ಕೆ.ಎಸ್.ಆರ್.ಪಿ ತಂಡ(ಪ್ರಥಮ), ಕೃಷ್ಣರಾಜ ಉಪ ವಿಭಾಗ(ದ್ವಿತೀಯ) ಹಾಗೂ ಸಿಎಆರ್(ತೃತೀಯ). ಸಶಸ್ತ್ರರಹಿತ ವಿಭಾಗ- ಎನ್.ಸಿ.ಸಿ ಭೂಸೇನೆ(ಪ್ರಥಮ), ಅಶ್ವರೋಹಿ ದಳ(ದ್ವಿತೀಯ) ಹಾಗೂ ಎನ್ಸಿಸಿ ನೌಕ ದಳ (ತೃತೀಯ). ಶಾಲಾ ವಿಭಾಗ- ಪೊಲೀಸ್ ಪಬ್ಲಿಕ್ ಶಾಲೆ ಬಾಲಕರ ತಂಡ(ಪ್ರಥಮ), ಪೊಲೀಸ್ ಪಬ್ಲಿಕ್ ಬಾಲಕಿಯರ ತಂಡ(ದ್ವಿತೀಯ) ಹಾಗೂ ಜವಹಾರ್ ನವೋದರ ಬಾಲಕರ ತಂಡ (ತೃತೀಯ). ಅಲ್ಲದೆ, ಡಿಎಆರ್, ಕೆ.ಎಸ್.ಆರ್.ಪಿ ಮತ್ತು ಸಿಎಆರ್ ಪೊಲೀಸ್ ಬ್ಯಾಂಡ್ ಗಳಿಗೆ ನೆನಪಿಣಿ ಕಾಣಿಕೆ ಹಾಗೂ ಪ್ರಧಾನ ದಳಪತಿ ಕೆ.ಎನ್. ಸುರೇಶ್ ಅವರನ್ನು ಸಚಿವರು ಗೌರವಿಸಿದರು.