ಬಡಾವಣೆ ಮಾಲೀಕರಿಂದ ಗ್ರಾಪಂ ಸಿಬ್ಬಂದಿ ಮೇಲೆ ಹಲ್ಲೆ

KannadaprabhaNewsNetwork | Published : Aug 25, 2024 1:58 AM

ಸಾರಾಂಶ

ಹಲ್ಲೆಗೊಳಗಾಗಿರುವ ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿರುವ ಇಒ ಲಕ್ಷ್ಮೀ ನಾರಾಯಣಸ್ವಾಮಿ, ಪಿಡಿಒ ಸುಮಿತ್ರ ಸಿಬ್ಬಂದಿಗೆ ಧೈರ್ಯ ತುಂಬಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಗೋಮಾಳ ಜಾಗ ಒತ್ತುವರಿ ಬಗ್ಗೆ ದೂರು ನೀಡಿದ ಗ್ರಾಪಂ ಸದಸ್ಯರ ಮನೆಗೆ ಪುಂಡರ ಗುಂಪು ನುಗ್ಗಿ, ಬೆದರಿಕೆ ಹಾಕಿರುವ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಶ್ರೀನಿವಾಸಪುರ ಗ್ರಾಮದ ವಸತಿ ಯೋಜನೆಗೆ ಮೀಸಲಾಗಿರುವ ಗೋಮಾಳ ಜಾಗವನ್ನು ಎಸ್‌ಎಲ್‌ವಿ ಗ್ರೀನ್ ಸಿಟಿ ಬಡಾವಣೆಯ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆ ಕಂದಾಯ ಇಲಾಖೆ, ಸರ್ವೇ ಇಲಾಖೆ ಹಾಗೂ ಆರ್‌ಡಿಪಿಆರ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಅಳತೆ ಮಾಡಿ ಗಡಿ ಗುರುತಿಸಲು ಗುರುವಾರ ಆಗಮಿಸಿದ್ದರು.

ಈ ವೇಳೆ ಬಡಾವಣೆ ಪರ ಬಂದ ಡಿವೈಎಸ್‌ಪಿ ನಂಜುಂಡಸ್ವಾಮಿ ಹಾಗೂ ಜುಟ್ಟುಮಂಜ ಎಂಬುವವರು ಪಂಚಾಯಿತಿ ಅಧಿಕಾರಿಗಳು, ಸದಸ್ಯರ ಜೊತೆ ಗಲಾಟೆ ಮಾಡಿದ್ದಾರೆ, ಸ್ಥಳದಿಂದ ಪೊಲೀಸರು ತೆರಳಿದ ನಂತರ ಗ್ರಾಪಂ ಸಿಬ್ಬಂದಿ ಮೇಲೆ ನಂಜುಂಡಸ್ವಾಮಿ ಹಾಗೂ ಜುಟ್ಟುಮಂಜು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ನವೀನ್ ಹಾಗೂ ಯಂಜಪ್ಪ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮನೆಗೆ ನುಗ್ಗಿದ ಪುಂಡರು:

ಗುರುವಾರ ಹಲ್ಲೆ ನಡೆದರೆ ಶುಕ್ರವಾರ ಮಧ್ಯಾಹ್ನ 12 ಗಂಟೆ ವೇಳೆ ಗ್ರಾಪಂ ಸದಸ್ಯ ಸುನಿಲ್ ಮನೆಗೆ ಬಂದ ಪುಂಡರ ಗುಂಪು, ಮನೆಗೆ ನುಗ್ಗಿ ಬಡಾವಣೆ ವಿಚಾರವಾಗಿ ಸುನಿಲ್ ಪತ್ನಿಗೆ ಬೆದರಿಕೆ ಹಾಕಿದ್ದಾರೆ, ಮತ್ತೊಂದು ಗುಂಪು ಶ್ರೀನಿವಾಸಪುರ ಗ್ರಾಮ ಸದಸ್ಯ ಮಹದೇವ್ ಮನೆಯ ಬಳಿಯೂ ಸಹ ಹೋಗಿದ್ದು, ಗ್ರಾಮಸ್ಥರು, ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ, ಈ ವಿಚಾರವಾಗಿ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸಿಬ್ಬಂದಿಗೆ ಧೈರ್ಯ ತುಂಬಿದ ಇಒ:

ಹಲ್ಲೆಗೊಳಗಾಗಿರುವ ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿರುವ ಇಒ ಲಕ್ಷ್ಮೀ ನಾರಾಯಣಸ್ವಾಮಿ, ಪಿಡಿಒ ಸುಮಿತ್ರ ಸಿಬ್ಬಂದಿಗೆ ಧೈರ್ಯ ತುಂಬಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಡಿವೈಎಸ್‌ಪಿ ವಿರುದ್ಧ ಆರೋಪ:

ಶ್ರೀನಿವಾಸಪುರ ಬಡಾವಣೆ ಮಾಲೀಕ ಜುಟ್ಟುಮಂಜುರವರ ಹೆಸರಿನಲ್ಲಿ ರಾಮನಗರ ಡಿವೈಎಸ್‌ಪಿ ಆಗಿದ್ದ ವೆಂಕಟಸ್ವಾಮಿ ಪ್ರಭಾವ ಬೆಳೆಸಿ, ಗೋಮಾಳ ಜಾಗದಲ್ಲಿಯೂ ಕೂಡ ಬಡವಾಣೆ ನಿರ್ಮಾಣ ಮಾಡಿದ್ದರು. ಇದರ ವಿರುದ್ಧ ದೂರು ನೀಡಿದವರ ಮೇಲೆ ಡಿವೈಎಸ್‌ಪಿ ವೆಂಕಟಸ್ವಾಮಿ ಪ್ರಭಾವ ಬೆಳೆಸಿ ಗೋಮಾಳ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಎ1 ಆರೋಪಿ ವೆಂಕಟಸ್ವಾಮಿ ಆಗಿದ್ದು ಈತ ಅಮಾನತ್ತಿನಲ್ಲಿ ಇದ್ದಾನೆ ಎಂಬ ಮಾಹಿತಿಗಳು ಕೇಳಿಬಂದಿದೆ.

‘ಶ್ರೀನಿವಾಸಪುರ ಗೋಮಾಳ ಜಾಗ ಒತ್ತುವರಿ ವಿಚಾರದಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬಂದಿದ್ದ ಆರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ, ಇನ್ನಿಬ್ಬರನ್ನು ಶೀಘ್ರದಲ್ಲಿ ವಶಕ್ಕೆ ಪಡೆಯಲಿದ್ದೇವೆ, ಈ ವಿಷಯಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯಲಿದೆ.’

-ಜಗದೀಶ್ , ಡಿವೈಎಸ್‌ಪಿ ನೆಲಮಂಗಲ

Share this article