ಜನ, ಜಾನುವಾರುಗಳ ಸುರಕ್ಷತೆಗಾಗಿ ರಾಜ್ಯದ ರೈಲು ಮಾರ್ಗಗಳ ಇಕ್ಕೆಲ್ಲಗಳಲ್ಲಿ ತಡೆ ಬೇಲಿ

KannadaprabhaNewsNetwork | Updated : Mar 01 2025, 11:41 AM IST

ಸಾರಾಂಶ

ವಂದೇ ಭಾರತ್‌ನಂಥ ವೇಗದ ರೈಲು ಸಂಚರಿಸುವ ಮಾರ್ಗದಲ್ಲಿ ಜನ, ಜಾನುವಾರುಗಳ ಸುರಕ್ಷತೆಗಾಗಿ ನೈಋತ್ಯ ರೈಲ್ವೆಯು ಇದೀಗ ರಾಜ್ಯದಲ್ಲಿ 793 ಕಿ.ಮೀ. ಉದ್ದದ ಹಳಿಯ ಇಕ್ಕೆಲಗಳಲ್ಲಿ ಕಬ್ಬಿಣದ ತಡೆ ಬೇಲಿ (ಫೆನ್ಸಿಂಗ್) ನಿರ್ಮಿಸುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಕಾಮಗಾರಿ ಆರಂಭಗೊಂಡಿದೆ.

ಮಯೂರ್‌ ಹೆಗಡೆ

 ಬೆಂಗಳೂರು :   ವಂದೇ ಭಾರತ್‌ನಂಥ ವೇಗದ ರೈಲು ಸಂಚರಿಸುವ ಮಾರ್ಗದಲ್ಲಿ ಜನ, ಜಾನುವಾರುಗಳ ಸುರಕ್ಷತೆಗಾಗಿ ನೈಋತ್ಯ ರೈಲ್ವೆಯು ಇದೀಗ ರಾಜ್ಯದಲ್ಲಿ 793 ಕಿ.ಮೀ. ಉದ್ದದ ಹಳಿಯ ಇಕ್ಕೆಲಗಳಲ್ಲಿ ಕಬ್ಬಿಣದ ತಡೆ ಬೇಲಿ (ಫೆನ್ಸಿಂಗ್) ನಿರ್ಮಿಸುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಕಾಮಗಾರಿ ಆರಂಭಗೊಂಡಿದೆ.

ವೇಗದ ರೈಲುಗಳ ಸಂಚಾರ ವೇಳೆ ಹಳಿಗೆ ಸಿಲುಕಿ ಜಾನುವಾರುಗಳ ಸಾವು, ಆಕಸ್ಮಿಕ ಅಪಘಾತ, ಆತ್ಮಹತ್ಯೆಯಂಥ ಘಟನೆಗಳು ಹೆಚ್ಚುತ್ತಿರುವ ಪರಿಣಾಮ ರೈಲು ಸಂಚಾರದಲ್ಲಿ ವಿಳಂಬವಾಗುವ ಜೊತೆಗೆ ಅದೇ ಮಾರ್ಗದಲ್ಲಿ ಸಂಚರಿಸುವ ಇತರೆ ರೈಲುಗಳ ಓಡಾಟಕ್ಕೂ ತೊಂದರೆಯಾಗುವುದನ್ನು ತಪ್ಪಿಸಲು ತಡೆ ಬೇಲಿ ಹಾಕಲು ನಿರ್ಧರಿಸಲಾಗಿದೆ.

ಬೇಲಿಗೆ 420 ಕೋಟಿ ರು.: ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗ ಸೇರಿ ರಾಜ್ಯದಲ್ಲಿ ಒಟ್ಟಾರೆ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ 793.52 ಕಿ.ಮೀ. ಉದ್ದದ ಮಾರ್ಗದಲ್ಲಿ ತಡೆ ಬೇಲಿ ಹಾಕಲಾಗುತ್ತಿದೆ. ಜೊತೆಗೆ ಅಗತ್ಯವಿರುವಲ್ಲಿ ಜನರ ಓಡಾಟಕ್ಕೆ ಸಬ್ ವೇ ಹಾಗೂ ಅಂಡರ್ ಪಾಸ್ ನಿರ್ಮಿಸಲಾಗುತ್ತಿದೆ. ಬೇಲಿಗೆ ₹420 ಕೋಟಿ, ಸಬ್‌ ವೇ ನಿರ್ಮಾಣಕ್ಕೆ ₹304 ಕೋಟಿ ಸೇರಿ ಒಟ್ಟಾರೆ ₹724 ಕೋಟಿ ಮಂಜೂರಾಗಿದೆ. ಈ ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದು, ಸದ್ಯ ಬೆಂಗಳೂರು ವಿಭಾಗದಲ್ಲಿ 3 ಕಿ.ಮೀ. ಕಾಮಗಾರಿ ಮುಗಿದಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಫೆನ್ಸಿಂಗ್ ಮಾರ್ಗಗಳು:

ಬೆಂಗಳೂರು ವಿಭಾಗದಲ್ಲಿ ಬೆಂಗಳೂರು-ಧರ್ಮಾವರಂ (174 ಕಿ.ಮೀ.), ಬೆಂಗಳೂರು- ಜೋಲಾರಪೇಟೈ (145 ಕಿ.ಮೀ.) ಹಾಗೂ ಬೆಂಗಳೂರು-ಸಂಪಿಗೆ ರೋಡ್ (109 ಕಿ.ಮೀ.), ಬೆಂಗಳೂರು-ಮೈಸೂರು (139 ಕಿ.ಮೀ.) ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕಾರ್ಯಾದೇಶ ನೀಡಲಾಗಿದೆ. ಈಗಾಗಲೇ ಜೋಲಾರಪೇಟ್ಟೈ ಮಾರ್ಗದಲ್ಲಿ 3 ಕಿ.ಮೀ. ನಷ್ಟು ಬೇಲಿ ನಿರ್ಮಿಸಲಾಗಿದೆ.

ಹುಬ್ಬಳ್ಳಿ ವಿಭಾಗದ ಸೌತ್ ಹುಬ್ಬಳ್ಳಿ-ಕರ್ಜಗಿ, ಸೌತ್ ಹುಬ್ಬಳ್ಳಿ-ಧಾರವಾಡ ಮೊದಲ ಹಂತದಲ್ಲಿ ತಗೆದುಕೊಳ್ಳಲಾಗುತ್ತಿದೆ. ಮೈಸೂರು ವಿಭಾಗದಲ್ಲಿ ಮೈಸೂರು-ಯಲಿಯೂರು ಮತ್ತು ಸಂಪಿಗೆ ರೋಡ್, ಕರ್ಜಗಿ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ಧಾರವಾಡ-ಬೆಂಗಳೂರು ಮಾರ್ಗ ಪೂರ್ಣಗೊಂಡಂತಾಗುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಡಬ್ಲ್ಯು ಮಾದರಿ: ಈ ಬೇಲಿ 5 ಅಡಿ ಎತ್ತರ ಇರಲಿದ್ದು, ಆಂಗ್ಲ ಅಕ್ಷರಮಾಲೆಯ ‘ಡಬ್ಲ್ಯು’ ಆಕಾರದಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ವಂದೇ ಭಾರತ್‌ ರೈಲು ಗಂಟೆಗೆ 110-130 ಕಿ.ಮೀ. ವೇಗದಲ್ಲಿ ಸಂಚರಿಸುವ ಮಾರ್ಗಗಳು ಕಡಿಮೆ ಇದೆ. ಬೇಲಿ ನಿರ್ಮಾಣವಾದರೆ ವೇಗ ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಲಿದೆ. ಜೊತೆಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ರೈಲುಗಳು ಸಂಚರಿಸಿದರೂ ಬೇಲಿಯ ರಕ್ಷಣೆಯಿಂದಾಗಿ ಸಮಸ್ಯೆ ಆಗಲಾರದು ಎಂದು ತಿಳಿಸಿದರು.

‘ಕನ್ನಡಪ್ರಭ’ ಜೊತೆ ಮಾತನಾಡಿದ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.‌ಮಂಜುನಾಥ ಕನಮಡಿ, ‘ಫೆನ್ಸಿಂಗ್‌ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ₹724 ಕೋಟಿ ಮೀಸಲಾಗಿದೆ. ಜಾನುವಾರು ಡಿಕ್ಕಿಯಾಗಿ ರೈಲಿನ ಗಾಲಿಗೆ ಸಿಲುಕಿದರೆ ಸಂಚಾರ ಕನಿಷ್ಠ ಅರ್ಧ ಗಂಟೆ ವಿಳಂಬವಾಗುವಂಥ ಸಂದರ್ಭಗಳನ್ನು ಇದರಿಂದ ತಡೆಯಬಹುದು. ಇದರಲ್ಲಿ 2024-25ಕ್ಕೆ ₹30 ಕೋಟಿ ಬಿಡುಗಡೆಯಾಗಿದ್ದು, ಈಗಾಗಲೇ ‌ಟೆಂಡರ್ ಕರೆದು, ಕಾಮಗಾರಿ‌ ಕೂಡ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೈಲು ಸಂಚಾರ ಶುರುವಾದ ಮೊದಲ ವಾರದಲ್ಲೇ ಹಸು ಡಿಕ್ಕಿ:

2022ರಲ್ಲಿ ದಕ್ಷಿಣ ಭಾರತದ ಮೊದಲ ಚೆನ್ನೈ-ಮೈಸೂರು ವಂದೇ ಭಾರತ್‌ ರೈಲು ಆರಂಭವಾದ ಒಂದೇ ವಾರದಲ್ಲಿ ತಮಿಳುನಾಡಿದ ಆರಕ್ಕೋಣಂ ಬಳಿ ರೈಲು ಹಸುವೊಂದು ಅಡ್ಡಬಂದಿತ್ತು. ಘಟನೆಯಲ್ಲಿ ಹಸು ಮೃತಪಟ್ಟಿದ್ದರೆ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಇನ್ನು ಬೆಂಗಳೂರಿಂದ ಧಾರವಾಡಕ್ಕೆ ಹೊರಟಿದ್ದ ವಂದೇ ಭಾರತ್‌ ಅಡ್ಡಬಂದ ಪರಿಣಾಮ ಚಿತ್ರದುರ್ಗದ ರಾಮಗಿರಿ ಸಮೀಪ ಎರಡು ಎಮ್ಮೆ ಸತ್ತಿದ್ದವು. ಇಂಥ ಸಾಕಷ್ಟು ಪ್ರಕರಣಗಳು ನಡೆದಿದ್ದು, ಹೀಗಾಗಿ ವಂದೇ ಭಾರತ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳಿಗೆ ಆಗುತ್ತಿರುವ ಸಮಸ್ಯೆ ಮತ್ತು ಅಪಾಯ ತಡೆಗೆ ರೈಲ್ವೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಭವಿಷ್ಯದಲ್ಲಿ ವಂದೇಭಾರತ್, ಎಕ್ಸ್‌ಪ್ರೆಸ್‌ ರೈಲುಗಳ ವೇಗ ಹೆಚ್ಚಾಗಲಿದ್ದು, ಜನ ಜಾನುವಾರುಗಳಿಗೆ ತೊಂದರೆ ಆಗದಿರಲು, ರೈಲಿನ ಸಮಯ ಪರಿಪಾಲನೆಗೆ ಅನುಕೂಲವಾಗಲು ಫೆನ್ಸಿಂಗ್‌ ಮಾಡಲಾಗುತ್ತಿದೆ.

- ಡಾ.‌ಮಂಜುನಾಥ ಕನಮಡಿ, ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

Share this article