ಬಸವ, ಅಂಬೇಡ್ಕರ್ ಅವರಲ್ಲಿ ವಿಚಾರ, ಪ್ರಸ್ತುತತೆಯಲ್ಲಿ ಸಾಮ್ಯತೆ ಇದೆ

KannadaprabhaNewsNetwork | Published : May 1, 2025 1:50 AM

ಸಾರಾಂಶ

12ನೇ ಶತಮಾನದ ಬಸವಣ್ಣನವರು ಸಮಾನತೆ, ಲಿಂಗಸಮಾನತೆ, ಮಹಿಳಾ ಸ್ವಾತಂತ್ರ್ಯ ಸೇರಿದಂತೆ ಅನೇಕ ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸಿದ್ದರು. ಡಾ. ಅಂಬೇಡ್ಕರ್ ಅವರು ಈ ಎಲ್ಲ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ. ಆದ್ದರಿಂದ ಇಬ್ಬರ ವಿಚಾರಗಳಲ್ಲೂ ಸಾಮ್ಯತೆ ಇದೆ.

ಧಾರವಾಡ: ಡಾ. ಬಿ.ಆರ್‌. ಅಂಬೇಡ್ಕರ್‌ ಹಾಗೂ ಬಸವಣ್ಣನವರ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಲಿಂಗಸಮಾನತೆಯಂತಹ ಕ್ರಾಂತಿಕಾರ ವಿಚಾರಗಳನ್ನು ಅವಲೋಕಿಸಿದಾಗ ಇಬ್ಬರು ಮಹಾತ್ಮರಲ್ಲಿ ಸಾಮ್ಯತೆ ಕಾಣುತ್ತದೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತವು ಮಂಗಳವಾರ ಆಯೋಜಿಸಿದ್ದ ಬಸವೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದ ಬಸವಣ್ಣನವರು ಸಮಾನತೆ, ಲಿಂಗಸಮಾನತೆ, ಮಹಿಳಾ ಸ್ವಾತಂತ್ರ್ಯ ಸೇರಿದಂತೆ ಅನೇಕ ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸಿದ್ದರು. ಡಾ. ಅಂಬೇಡ್ಕರ್ ಅವರು ಈ ಎಲ್ಲ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ. ಆದ್ದರಿಂದ ಇಬ್ಬರ ವಿಚಾರಗಳಲ್ಲೂ ಸಾಮ್ಯತೆ ಇದೆ ಎಂದರು.

ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಅನುಭವ ಮಂಟಪದ ಮೂಲಕ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ಕರ್ನಾಟಕದ ಇಂದಿನ ಪ್ರಗತಿ, ಅಭಿವೃದ್ಧಿಗೆ ಬಸವಣ್ಣನವರ ಕೊಡುಗೆ ಅಧಿಕವಾಗಿದೆ ಎಂದರು.

ಕನ್ನಡ ನಾಡಿನ ಇತಿಹಾಸವನ್ನು ನಾವು ಅವಲೋಕಿಸಿದಾಗ ಬಸವ ಪ್ರಣೀತವಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ನಾಡಿನ ಅಭಿವೃದ್ಧಿಗೆ ಅನ್ನ ಮತ್ತು ಅಕ್ಷರ ದಾಸೋಹ ಎರಡನ್ನು ನೀಡಿದೆ. ಈ ಪರಂಪರೆಯನ್ನು ನಾವು ಬೇರೆ ರಾಜ್ಯದಲ್ಲಿ ಕಾಣಲು ಸಾಧ್ಯವಾಗುವುದಿಲ್ಲ. ಬಸವಣ್ಣನವರ ಉದಾರ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳಬೇಕು. ಅವರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಢಾನದ ಅಧ್ಯಕ್ಷ ಪ್ರೊ. ವೀರಣ್ಣ ರಾಜೂರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಕನ್ನಡ ಸಹಪ್ರಾಧ್ಯಾಪಕ ಡಾ.ಗಿರೀಶ ದೇಸೂರ ಬಸವೇಶ್ವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ, ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಧಾರವಾಡ ತಹಸೀಲ್ದಾರ್‌ ಡಿ.ಎಚ್. ಹೂಗಾರ, ಸಮಾಜದ ಮುಖಂಡರಾದ ಸಿದ್ರಾಮಣ್ಣ ನಡಕಟ್ಟಿ, ಎನ್.ಬಿ‌. ಗೊಲ್ಲನ್ನವರ ಇದ್ದರು. ಸಂಗೀತ ವಿದ್ವಾಂಸ ಡಾ. ಕೈವಲ್ಯಕುಮಾರ ಗುರುವ ಅವರು ಸುಮುಧರ ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ರವಿ ಕುಲಕರ್ಣಿ ನಿರೂಪಿಸಿ, ವಂದಿಸಿದರು.

Share this article