ಗಜೇಂದ್ರಗಡ: ಆಧುನಿಕತೆ ಹಾಗೂ ತಂತ್ರಜ್ಞಾನದಿಂದ ಜಗತ್ತು ಸಣ್ಣದಾಗುತ್ತಿದೆ. ಜತೆಗೆ ದೊಡ್ಡವರಲ್ಲಿ ಸಣ್ಣತನ ಹೆಚ್ಚಾಗುತ್ತಿದ್ದು, ಬಸವ ಪುರಾಣ ಇದಕ್ಕೆ ಮದ್ದಾಗಲಿದೆ ಎಂದು ಹಾಲಕೆರೆ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಪುರ್ತಗೇರಿ ಕ್ರಾಸ್‌ನಲ್ಲಿರುವ ಅನ್ನದಾನೇಶ್ವರ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಸಮಾಜದ ಎಲ್ಲ ಓರೆ-ಕೊರೆ ತಿದ್ದಿ ಎಲ್ಲರನ್ನು ಮೇಲೆತ್ತುವ ಹಾಗೂ ಪರಸ್ಪರ ಎಲ್ಲರೂ ಗೌರವಿಸುವಂತ ಕಾರ್ಯಕ್ರಮ ಬಸವ ಪುರಾಣದಿಂದ ಆಗಲಿದೆ ಎಂಬ ಇತಿಹಾಸವಿದೆ. ಗಜೇಂದ್ರಗಡದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನ. ೨೫ ರಿಂದ ಡಿ.೨೬ರ ವರೆಗೆ ಬಸವ ಮಹಾ ಪುರಾಣ ನಡೆಯಲಿದೆ. ಇಳಕಲ್-ಗುಡೂರಿನ ಅನ್ನದಾನ ಶಾಸ್ತ್ರೀಗಳು ಪ್ರವಚನಕಾರರಾಗಿ ಆಗಮಿಸಲಿದ್ದಾರೆ. ಬಸವ ಪುರಾಣಕ್ಕೆ ಪ್ರತಿದಿನ ೫ ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗುತ್ತದೆ ಎಂದರು.ಬಸವ ಪುರಾಣದಲ್ಲಿ ಕೇವಲ ಬಸವಣ್ಣನವರ ಕುರಿತಾದ ಪುರಾಣ ಇರುವುದಿಲ್ಲ. ೭೮೦ ಅಮರಂಗಣಗಳ ಚರಿತ್ರೆ ಬರುವಂತ ವಿಶೇಷ ಪುರಾಣವಾಗಿದ್ದು, ಸರ್ವ ಧರ್ಮದ, ಸರ್ವ ಸಮಾಜದ ಜನರು ಈ ಬಸವ ಪುರಾಣಕ್ಕೆ ಬರುತ್ತಾರೆ. ಪುರಾಣದಲ್ಲಿ ೮ ಕಾಂಡಗಳು ಬರುತ್ತವೆ. ಪ್ರತಿಯೊಂದು ಕಾಂಡದಲ್ಲಿ ಮೂರ್ನಾಲ್ಕು ಹಳ್ಳಿಗಳ ಜನರನ್ನು ಬರಮಾಡಿಕೊಳ್ಳುವ ಹಾಗೂ ಸಾಧ್ಯವಾದರೆ ಬಸವ ಬುತ್ತಿ ತರವು ವ್ಯವಸ್ಥೆ ಮಾಡಬೇಕಿದೆ. ಬಸವ ಪುರಾಣದಲ್ಲಿ ನಾಡಿನ ಹಲವಾರು ಮಠಾಧೀಶರು, ಅನ್ಯ ಧರ್ಮಗಳ ಗುರುಗಳು ಭಾಗವಹಿಸಲಿದ್ದಾರೆ. ಈ ಪುರಾಣದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಗಜೇಂದ್ರಗಡದ ಅನ್ನದಾನೇಶ್ವರ ಸಂಸ್ಥಾನಮಠ, ವೀರಶೈವ ಲಿಂಗಾಯತ ಸಮಾಜ ಮತ್ತು ಸರ್ವ ಧರ್ಮದ ಗುರು ಹಿರಿಯರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಯಕ ನಿರತ ಸೇವಾರ್ಥಿಗಳಿಗೆ ಸನ್ಮಾನ ನಡೆಯಲಿದ್ದು, ಲಿಂಗ ಸಮಾನತೆ, ನೈತಿಕ ಮೌಲ್ಯಗಳ ಪ್ರತಿಪಾದನೆ, ಯುವ ಪೀಳಿಗೆಗೆ ಗುರು ಹಿರಿಯರ ಬಗ್ಗೆ ಗೌರವ ಕಾಳಜಿ ನೈತಿಕತೆ ರೂಢಿಸಿಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಮಹಿಳೆಯರಿಗಾಗಿ ಬೆಳ್ಳಿಯ ರಥೋತ್ಸವ ಮಹಿಳೆಯರನ್ನು ಗೌರವದಿಂದ ಕಂಡಂತ ಶ್ರೇಷ್ಠ ಮಠವಾಗಿದೆ. ಬಸವ ಪುರಾಣಕ್ಕೆ ಪ್ರತಿನಿತ್ಯ ೫ ಸಾವಿರಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷಿಯಿದೆ ಎಂದರು.
ಪ್ರವಚನಕಾರ ಅನ್ನದಾನ ಶಾಸ್ತ್ರಿಗಳು ಮಾತನಾಡಿದರು. ಈ ವೇಳೆ ಶರಣಪ್ಪ ರೇವಡಿ, ಡಾ. ಬಿ.ವಿ.ಕಂಬಳ್ಯಾಳ, ಅಮರೇಶ ಗಾಣಿಗೇರ, ಟಿ.ಎಸ್. ರಾಜೂರ, ಅಪ್ಪು ಮತ್ತಿಕಟ್ಟಿ, ವಸಂತರಾವ್ ಗಾರಗಿ, ಶಿವಯ್ಯ ಚಕ್ಕಡಿಮಠ, ರವಿ ಹಲಗಿ, ಬಸಯ್ಯ ಹಿರೇಮಠ ಇದ್ದರು.