ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವರ್ಗರಹಿತ ಸಮಾಜ ಸೃಷ್ಟಿಗೆ ಬಸವಾದಿ ಶರಣರ ಚಿಂತನೆ ಹಾಗೂ ಆಲೋಚನಾ ಕ್ರಮಗಳು ಕಾರಣವೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಮುರುಘಾಮಠ ಅನುಭವ ಮಂಟಪದಲ್ಲಿ ಆಯೋಜಿಸಲಾದ ಬಸವ ಜಯಂತಿ ಮುನ್ನಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 12ನೇ ಶತಮಾನದಲ್ಲಿ ಆಗಿಹೋದ ವಿಶ್ವಗುರು ಬಸವಣ್ಣ ಮತ್ತು ವಚನಕಾರರು ನಡೆದಂತಹ ದಾರಿಯಲ್ಲಿ ಮುರುಘಾ ಮಠದ ಪರಂಪರೆ ಸಾಗಿದೆ. ಅಕ್ಷರ ಅನ್ನದಾಸೋಹ, ಅನ್ನದಾಹ ದಂತಹ ಕೈಂಕರ್ಯದಲ್ಲಿ ನಿರತವಾಗಿವೆ. ಅನೇಕ ವಿದ್ಯಾರ್ಥಿ ನಿಲಯ, ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವುದರಿಂದ ನಮ್ಮಂತಹವರು ಬೆಳಕು ಕಾಣುತ್ತಿದ್ದೇವೆ ಎಂದರು.
ಚಿತ್ರದುರ್ಗ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಬಸವಣ್ಣನವರನ್ನು ವೃತ್ತಗಳಲ್ಲಿ ಕೇವಲ ಪ್ರತಿಮೆ ಮತ್ತು ಮನೆಗಳಲ್ಲಿ ಪೂಜಿಸುವುದು ಇಂದಿನ ದಿನಗಳಲ್ಲಿ ನಡೆಯುತ್ತಿದೆ. ಅನುಭವ ಮಂಟಪದ ಮುಖಾಂತರ ಬಸವಣ್ಣ, ಸಮಾತನೆ, ಏಕತೆ ತಂದರು. ಆದರೆ ಇಂದು ಪಂಗಡಗಳನ್ನಾಗಿ ವಿಂಗಡಿಸಿಕೊಂಡು ಏಕತೆತೆ ಧಕ್ಕೆ ತರುತ್ತಿದ್ದೇವೆ. ಇಂದಿನ ದಿನಮಾನಗಳಲ್ಲಿ ಬಸವಣ್ಣನವರ ಜೀವನ ಮತ್ತು ವಚನ ಸಾರಗಳನ್ನು ಮಕ್ಕಳಿಗೆ ತಿಳಿಸಬೇಕಿದೆ. ಸರ್ವರೂ ಸಮಾನತೆಯಿಂದ ಬಾಳುವುದರಿಂದ ಬಸವಣ್ಣನವರ ಆಶಯ ಈಡೇರಿಸಿದಂತಾಗುತ್ತದೆ ಎಂದು ಹೇಳಿದರು.ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಯಾವುದೇ ಪರಂಪರೆಯನ್ನು ನೈಜವಾಗಿ ಅರ್ಥೈಸುವ ಪ್ರಕ್ರಿಯೆ ನಮ್ಮದಾಗಬೇಕು. ಪರಮ ಪೂಜ್ಯ ಡಾ.ಶರಶ್ಚಂದ್ರ ಸ್ವಾಮಿಗಳ ಗುರುಗಳು ಆ ಕೆಲಸವನ್ನು ಮಾಡಿದ್ದಾರೆ. ಡಾ.ಇಮ್ಮಡಿ ಶಿವಬಸವ ಮಹಾಸ್ವಾಮೀಜಿ ಒಬ್ಬ ಸಂಶೋಧನಾ ವಿದ್ಯಾರ್ಥಿಯಾಗಿ ಸಿದ್ಧಾಂತ ಶಿಖಾಮಣಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರ ನೈಜತೆಯನ್ನು ಕುರಿತ ನಿಜದ ನಿಲುವು ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಕೃತಿಯು 2003ರಲ್ಲಿ ಪ್ರಕಟಗೊಂಡಿದೆ. ಎಂ.ಎಂ ಕಲಬುರ್ಗಿಯವರೇ ಆ ಕೃತಿಯನ್ನು ಪ್ರತಿಯೊಬ್ಬ ಲಿಂಗಾಯತರು ಓದಲೇ ಬೇಕೆಂದು ತಿಳಿಸಿದ್ದರು ಎಂದರು.
ಮೈಸೂರು ಕುಂದೂರು ಮಠದ ಡಾ.ಶರಶ್ಚಂದ್ರ ಸ್ವಾಮಿಗಳು ಮಾತನಾಡಿ, ಸಮಾಜವು ಕಾಲಕಾಲಕ್ಕೆ ಬದಲಾಗುತ್ತ ಹೋಗುತ್ತೆ. ಬಸವಣ್ಣನಂತವರು ಹುಟ್ಟಿ ಸರಿ ಪಡಿಸುತ್ತಾರೆ. ಇದು ಸಮಾಜದ ನಿರಂತರ ಪರಿವರ್ತನೆ. ಸಮಾಜ ಸೇವೆ ಮಾಡುವ ಭಾವನೆ ಆತ್ಮದಿಂದ ಮೂಡಿದರೆ ಮಾತ್ರ ಸಾಧ್ಯ. ಚನ್ನ ಬಸವಣ್ಣನವರ ಪ್ರಕಾರ ಜಂಗಮ ಸಾಧಕ ಬಸವಣ್ಣ ಎಂದಿದ್ದಾರೆ. ಬಸವಣ್ಣನವರು ಇಷ್ಟಲಿಂಗ ಕೊಟ್ಟು ಭಗವಂತನನ್ನು ನಮ್ಮ ಬಳಿ ತಂದವರಾಗಿದ್ದಾರೆ. ಎಲ್ಲಾ ಧರ್ಮಗಳನ್ನು ಪ್ರಚಾರ ಮಾಡಲು ಮಿಷನರಿಗಳನ್ನು ಹುಟ್ಟಿಕೊಂಡವು, ಆದರೆ ಈ ಧರ್ಮವನ್ನು ಪ್ರಚರಿಸಲು ಯಾವುದೇ ಮಿಷನರಿಗಳು ಇಲ್ಲ ಎಂದರು.ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಬಿ.ಡಿ.ಜತ್ತಿಯವರು ಅಧಿಕಾರ ಸ್ವೀಕರಿಸುವಾಗ ಶರಣ ಸಂಸ್ಕೃತಿಯಂತೆ ನಿಜಾಚರಣೆಯೊಂದಿಗೆ ಆಗಮಿಸಿದ್ದರು. ವಿಭೂತಿಧಾರಿಯಾಗಿ ಸಂಸ್ಕೃತಿಯನ್ನು ಎತ್ತಿ ಹಿಡಿದವರಾಗಿದ್ದಾರೆ. ನಾವುಗಳು ನುಡಿದಂತೆ ನಡೆಯಬೇಕು. ಅಂಗ ಜೀವಿಯಾಗಿರದೇ ಲಿಂಗದ ಸಾಕ್ಷಿಯಾಗಿ ಬದುಕಬೇಕು. ಲಿಂಗಾಯತ ಎಂದರೆ ಆಯತ ಮಾಡುವುದು ಮತ್ತು ಸ್ವೀಕರಿಸುವುದು. ನಾನು ದೇವಾಲಯಗಳನ್ನು ನಂಬುವುದಿಲ್ಲ.ನಮ್ಮ ತತ್ವಗಳು ಎಲ್ಲಿಯವರೆಗೆ ಆಚರಣೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಬಸವಣ್ಣನವರು ವಿಶ್ವಗುರುವಾಗಲು ಸಾದ್ಯವಿಲ್ಲ ಎಂದರು. ಜಮುರಾ ಕಲಾವಿದರಾದ ಉಮೇಶ್ ಪತ್ತಾರ್ ವಚನ ಸಂಗೀತ ನಡೆಸಿಕೊಟ್ಟರು. ಷಡಾಕ್ಷರಯ್ಯನವರು ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿ, ಸಿದ್ದೇಶ್ ಶರಣು ಸಮರ್ಪಣೆ ಮಾಡಿದರು.