ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆಯಲ್ಲಿ ಒಂಟಿ ಮಹಿಳೆಯನ್ನು ಗುರಿಯಾಗಿಸಿ ಬೈಕ್‌ನಲ್ಲಿ ಹಿಂಬಾಲಿಸಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಸರಗಳ್ಳರನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಅವಲಹಳ್ಳಿ ನಿವಾಸಿ ಸೈಯದ್ ರಿಯಾಜ್ ಅಲಿಯಾಸ್ ಬಾಬಾ(28) ಮತ್ತು ಇಸ್ಲಾಂಪುರ ನಿವಾಸಿ ಸಮೀರ್ ಪಾಷಾ(27) ಬಂಧಿತರು. ಆರೋಪಿಗಳಿಂದ 5.50 ಲಕ್ಷ ರು. ಮೌಲ್ಯದ 86 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ಅನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬಸವನಗುಡಿ ಎಂ.ಎನ್.ರಸ್ತೆಯಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುವಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಆ ಮಹಿಳೆಯ ಕುತ್ತಿಗೆಗೆ ಕೈ ಹಾಕಿ 36 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಸೀದಿ ಬಳಿ ವಶಕ್ಕೆ:ಪ್ರಕರಣದ ದಾಖಲಾದ ಬೆನ್ನಲ್ಲೇ ವಿವಿಧ ಆಯಾಮಗಳಲ್ಲಿ ತನಿಖೆಗೆ ಮುಂದಾದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ವೇಳೆ ಇಬ್ಬರು ಆರೋಪಿಗಳ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ಪತ್ತೆ ಕಾರ್ಯ ಮುಂದುವರೆಸಿದ್ದಾಗ ಎಚ್‌ಎಎಲ್ ಅನ್ನಸಂದ್ರಪಾಳ್ಯದ ಮಸೀದಿ ಬಳಿ ಇಬ್ಬರು ಆರೋಪಿಗಳನ್ನು ಬೈಕ್ ಸಮೇತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ತಾವೇ ಸರಗಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.ಹೆಂಡತಿಗೆ ನೀಡಿದ್ದ ಸರವೂ ಜಪ್ತಿ:
ಬಳಿಕ ಮುಂದುವರೆದ ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮೈಸೂರು ನಗರದ ಜುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 30 ಗ್ರಾಂ ತೂಕದ ಚಿನ್ನದ ಸರ ಹಾಗೂ ಎಚ್‌ಎಎಲ್‌ನ ಜುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 21 ಗ್ರಾಂ ತೂಕದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಅಂತೆಯೆ ಆರೋಪಿ ಸಮೀರ್ ಪಾಷಾ ತನ್ನ ಹೆಂಡತಿಗೆ ನೀಡಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ.ವೃತ್ತಿಪರ ಕಳ್ಳರು:
ಆರೋಪಿಗಳಿಬ್ಬರು ವೃತ್ತಿಪರ ಕಳ್ಳರಾಗಿದ್ದು, ಈ ಹಿಂದೆ ಬೆಂಗಳೂರು, ಮೈಸೂರು ಸೇರಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮನೆಗಳವು, ಸರಗಳವು ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕೆಲ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಗಳು, ಜಾಮೀನು ಪಡೆದು ಹೊರಗೆ ಬಂದು ಬಳಿಕವೂ ತನ್ನ ಕಳವು ಚಾಳಿ ಮುಂದುವರೆಸಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.