ಧರ್ಮ ಮೀರಿ ಪ್ರಯತ್ನವಾದದ ಮೇಲೆ ಬದುಕು ಕಟ್ಟಿಕೊಟ್ಟ ಬಸವಣ್ಣ

KannadaprabhaNewsNetwork | Published : May 14, 2024 1:10 AM

ಸಾರಾಂಶ

ಸಮಾಜದ ಕುರಿತಾಗಿ ಬಸವಣ್ಣನರ ಆಶಯ ಏನಿತ್ತು? ಅವರ ಕಂಡ ಕನಸೇನು? ಅವರೇಕೆ ನಮ್ಮ ಸಾಂಸ್ಕೃತಿಕ ನಾಯಕ? ಆಗಬೇಕು ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕಿದೆ. ಬಸವಣ್ಣನವರನ್ನು ನಾವೆಲ್ಲರೂ ಒಂದು ಜಾತಿ-ಧರ್ಮಕ್ಕೆ ಸೀಮಿತ ಮಾಡಿದ್ದೇವೆ.

ಧಾರವಾಡ:

ಡಾ. ಬಿ.ಆರ್. ಅಂಬೇಡ್ಕರ್‌ ಅವರ ಸಂವಿಧಾನವನ್ನು ಕಾನೂನಿನ ಭಯಕ್ಕೆ ಒಪ್ಪುತ್ತಿದ್ದೇವೆಯೇ ಹೊರತು ಹೃದಯ ಪೂರ್ವಕವಾಗಿ ಅಲ್ಲ. ಹಾಗೆಯೇ, ಬಸವಣ್ಣನವರ ಚಿಂತನೆಗಳನ್ನು ಸಾಮಾಜಿಕ ವ್ಯವಸ್ಥೆಯ ಚಿಂತನೆಯಲ್ಲಿ ಬಳಸಿಕೊಳ್ಳುತ್ತಿದ್ದೇವೆಯೇ ಹೊರತು ಹೃದಯಪೂರ್ವಕವಾಗಿ ಅಲ್ಲ. ಬಸವಣ್ಣ ನಮ್ಮವ ಎಂಬ ಭಾವ ಇವತ್ತಿನ ವರೆಗೂ ನಮ್ಮಲ್ಲಿ ಬರದೇ ಇರುವುದು ಸಮಾಜದ ದುರ್ದೈವದ ಸಂಗತಿ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ಸ್ವಾಮೀಜಿ ವಿಷಾಧಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠವು ತನ್ನ ಸುವರ್ಣ ಮಹೋತ್ಸವ ಮತ್ತು ಬಸವ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ "ಬಸವಣ್ಣ-ಸಾಂಸ್ಕೃತಿಕ ನಾಯಕ ರಾಷ್ಟ್ರೀಯ ವಿಚಾರ ಗೋಷ್ಠಿ "ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದ ಕುರಿತಾಗಿ ಬಸವಣ್ಣನರ ಆಶಯ ಏನಿತ್ತು? ಅವರ ಕಂಡ ಕನಸೇನು? ಅವರೇಕೆ ನಮ್ಮ ಸಾಂಸ್ಕೃತಿಕ ನಾಯಕ? ಆಗಬೇಕು ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕಿದೆ. ಬಸವಣ್ಣನವರನ್ನು ನಾವೆಲ್ಲರೂ ಒಂದು ಜಾತಿ-ಧರ್ಮಕ್ಕೆ ಸೀಮಿತ ಮಾಡಿದ್ದೇವೆ. ಅವರೊಬ್ಬ ಜಾತಿಗೆ ಸೀಮಿತ ಮಹಾಪುರುಷ ಅಲ್ಲ, ಅವರೊಬ್ಬ ಸಾಂಸ್ಕೃತಿಕ ನಾಯಕ ಎನ್ನಬೇಕಾದರೆ ಹಣೆಗೆ ಬರೀ ವಿಭೂತಿ ಹಚ್ಚಿ, ಕೊರಳಲ್ಲಿ ಲಿಂಗ ಧರಿಸಿದರೆ ಸಾಧ್ಯವಿಲ್ಲ. ಮನಸ್ಸಿನ ಒಳಗಿನಿಂದ ಬಸವಣ್ಣನವರ ಚಿಂತನೆಗಳನ್ನು ಪಾಲಿಸಬೇಕೆಂದು ಪ್ರತಿಪಾದಿಸಿದರು.

ಪ್ರಯತ್ನ ವಾದದ ಮೇಲೆ ಬದುಕು:

ಕರ್ಮವಾದದ ಮೇಲಿರುವ ಧರ್ಮ ಮೀರಿ ಪ್ರಯತ್ನವಾದದ ಮೇಲೆ ಬದುಕು ಕಟ್ಟಿಕೊಟ್ಟಿರುವುದಕ್ಕೆ ಬಸವಣ್ಣನವರು ಸಾಂಸ್ಕೃತಿಕ ನಾಯಕರಾದರು. ಜನತೆಯಲ್ಲಿರುವ ಕರ್ಮವಾದವನ್ನು ತೆಗೆದು ಒಗೆದರು. ಜ್ಞಾನದ ಬಲದೊಂದಿಗೆ ಮಾತ್ರ ಬಸವಣ್ಣನವರು ಸಾಂಸ್ಕೃತಿಕ ನಾಯಕರಾಗಿಲ್ಲ. ದೇಶದಲ್ಲಿ ಎಲ್ಲ ಜ್ಞಾನ ಮೀರಿ ಸಾಂಸ್ಕೃತಿಕ ನಾಯಕ ಆಗಿದ್ದು, ನೆಲಮೂಲ ಚಿಂತನೆಯಿಂದ ಎಂದು ನೆಲನೊಂದೇ ಹೊಲಗೇರಿ ಶಿವಾಲಯಕ್ಕೆ ಜಲವೊಂದೇ ಶೌಚಾ ಚಮನಕ್ಕೆ! ಕುಲವೊಂದೇ ತನ್ನ ತಾನರಿದವಂಗೆ ! ಫಲವೊಂದೇ ಷಡುದರ್ಶನ ಮುಕ್ತಿಗೆ.. ಎಂಬ ವಚನವನ್ನು ಸ್ವಾಮೀಜಿ ಪ್ರಸ್ತುತಪಡಿಸಿದರು.

ಮನುಷ್ಯತ್ವದ ಕಡೆ ಮಾತು:

ಜಗತ್ತಿನಲ್ಲಿ ಬಹಳ ಜನ ಮಹಾತ್ಮರು ಬಂದು ಹೋಗಿದ್ದಾರೆ. ಅವರೆಲ್ಲರೂ ತಮ್ಮ ತಿಳಿದ ಜ್ಞಾನ, ಪ್ರತಿಪಾದನೆ ಹಾಗೂ ಅನುಭಾವ ಎಡೆಮಾಡಿ ಇಟ್ಟು ಹೋಗಿದ್ದಾರೆ. ಅವರು ದೇವರು, ಧರ್ಮ, ಆತ್ಮ-ಪರಮಾತ್ಮ ಹಾಗೂ ಕರ್ಮವಾದಗಳ ಬಗ್ಗೆ ಚಿಂತನೆ ಮಾಡಿದರೆ, ಬಸವಣ್ಣ ಮನುಷ್ಯರ ಮನುಷ್ಯತ್ವದೆಡೆಗೆ ಮಾತನಾಡಿದರು. ಅದಕ್ಕಾಗಿ ಸಾಂಸ್ಕೃತಿಕ ನಾಯಕರಾದರು ಎಂದ ನಿಜಗುಣ ಸ್ವಾಮೀಜಿ, ಬಸವಣ್ಣ ಕಾಣದೇ ಇರುವ ಕಲ್ಪನೆ ಬಗ್ಗೆ ಮಾತನಾಡಿಲ್ಲ. ಕಾಣದೇ ಇರುವ ದೇವಲೋಕದ ಬಗ್ಗೆ ಮಾತನಾಡಿಲ್ಲ. ಇಲ್ಲದೇ ಇರುವ ಊಹಾಪೋಹ ಕಲ್ಪನೆ ಮಾಡಿದವರಲ್ಲ. ಹೀಗಾಗಿ ಬಸವಣ್ಣ ಸಾಂಸ್ಕೃತಿಕ ನಾಯಕನಾಗಿ ನಿಲ್ಲುತ್ತಾರೆ ಎಂದರು.

21ನೇ ಶತಮಾನದಲ್ಲಿ ಮೇಲ್ವರ್ಗ, ಕೆಳವರ್ಗ ಇದ್ದವು. ಇವುಗಳ ಮಧ್ಯೆ ನಡೆದ ಸಂಘರ್ಷಕ್ಕೆ ಬಸವಣ್ಣ ದಿವ್ಯ ಔಷಧಿ ನೀಡಿದರು. ಆದರೆ, ಔಷಧಿ ಬಳಸಿಕೊಂಡು ಬಂದವರು ಕೇವಲ ತಮ್ಮ ಬದುಕಿಗಾಗಿ ಬಳಸಿಕೊಂಡರೆ ಹೊರತು, ಸಮ ಸಮಾಜದ ವ್ಯವಸ್ಥೆ ಪೂರಕವಾಗಿ ಬಳಸಲಿಲ್ಲ ಎಂಬ ಬೇಸರವಿದೆ ಎಂದು ಸ್ವಾಮೀಜಿ ಹೇಳಿದರು. ಸಂಗ್ರಹ ಯೋಗ್ಯ ಸಂಚಿಕೆ

ಕನ್ನಡಪ್ರಭ ಹೊರ ತಂದ ಬಸವಪ್ರಭ ವಿಶೇಷ ಸಂಚಿಕೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ ನಿಜಗುಣ ಪ್ರಭು ಸ್ವಾಮೀಜಿ, ಬಸವ ಪ್ರಭ ಮುನ್ನುಡಿಯಲ್ಲಿ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಸಾಂಸ್ಕೃತಿಕ ನಾಯಕ ಎನ್ನುವುದಕ್ಕಿಂತ ವಿಶ್ವ ಸಾಂಸ್ಕೃತಿಕ ನಾಯಕ ಎಂದಿದ್ದಾರೆ. ಬಸವಣ್ಣನವರ ಕುರಿತಾದ ಲೇಖನಗಳು ಸಂಗ್ರಹಯೋಗ್ಯ ಎಂದರು.

Share this article