ಸಮಾಜ ದೂರವಿಟ್ಟರಿಗೆ ಅನುಭವ ಮಂಟಪದಲ್ಲಿ ಜಾಗ ಕಲ್ಪಿಸಿದ್ದ ಬಸವಣ್ಣ

KannadaprabhaNewsNetwork |  
Published : Oct 29, 2025, 01:15 AM IST
ಚಿತ್ರ 2 | Kannada Prabha

ಸಾರಾಂಶ

ಮುರಿಗೆಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಏರ್ಪಡಿಸಿರುವ ವಚನ ಕಾರ್ತೀಕದ 5ನೇ ದಿನದ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾವಿರ ವರ್ಷಗಳು ಕಳೆದರೂ ಬಸವಣ್ಣನವರಂತೆ ಸಾಮಾಜಿಕ ಸುಧಾರಣೆ ತಂದ ಮಹನೀಯರನ್ನು ಯಾಕೆ ನೆನಪು ಮಾಡಿಕೊಳ್ಳುತ್ತೇವೆಂದರೆ ಅವರುಗಳು ತ್ಯಾಗ ಮಾಡಿ ಸಮಾಜದ ಅಭಿವೃದ್ಧಿ ಮಾಡಿದರು. ಯಾರನ್ನು ಸಮಾಜದಿಂದ ದೂರವಿಟ್ಟಿದ್ದರೋ ಅಂತಹವರನ್ನು ಹತ್ತಿರಕ್ಕೆ ಕರೆದು ಅನುಭವ ಮಂಟಪದಲ್ಲಿ ಸಮಾನ ಅವಕಾಶ ಕಲ್ಪಿಸಿದ ಬಸವಣ್ಣನವರ ಕಾರ್ಯ ಶ್ಲಾಘನೀಯ. ಅದಕ್ಕೂ ಮುನ್ನ ಮಹಿಳೆಯರಿಗೆ ಯಾವ ಸ್ಥಾನವಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಮುರುಘಾಮಠದ ಬಸವ ಮುರುಘೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಏರ್ಪಡಿಸಿರುವ ವಚನ ಕಾರ್ತೀಕದ 5ನೇ ದಿನದ ಕಾರ್ಯಕ್ರಮದಲ್ಲಿ ಹಾದರ ಕಾಯಕದ ಪುಣ್ಯಸ್ತ್ರೀ ಗಂಗಮ್ಮ ಹಾಗೂ ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಖಮ್ಮ ಅವರ ವ್ಯಕ್ತಿತ್ವ ಮತ್ತು ಅವರ ರಚನೆಯ ವಚನಗಳ ವಿಶ್ಲೇಷಣೆ ಮಾಡುತ್ತಾ ಮಾತನಾಡಿದರು.

ಎಂಟನೇ ವಯಸ್ಸಿನಲ್ಲಿಯೇ ಬಸವಣ್ಣ ಉಪನಯನ ಮತ್ತು ಜನಿವಾರ ಧಾರಣೆಗೆ ಕುಟುಂಬ ಸಜ್ಜಾದಾಗ ಅಕ್ಕನಿಗೆ ಇಲ್ಲದ ಧಾರ್ಮಿಕ ವಿಧಿ-ವಿಧಾನ ನನಗೂ ಬೇಡ ಎಂದು ತನ್ನ ತಂದೆಯ ವಿರುದ್ಧವೇ ತಿರುಗಿ ನಿಲ್ಲುತ್ತಾರೆ. ಅಂದು ಸಮಾಜದಿಂದ ಬಹಿಷ್ಕಾರಗೊಂಡು ಲಿಂಗವಂತ ಸಮಾಜದ ಅಭ್ಯುದಯಕ್ಕೆ ಹೊಸ ವಿಚಾರಗಳನ್ನು ಅನುಭವ ಮಂಟಪದ ಮೂಲಕ ತರುತ್ತಾರೆ. ಸಾಮಾನ್ಯರಿಗೆ ಈ ಜ್ಞಾನ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಅಂದು ಯಾರು ಮಹಿಳೆಯರು ಹಾಗೂ ಶೂದ್ರರೆಂದು ಕರೆಸಿಕೊಂಡಿದ್ದರೋ ಅವರ ಅಭ್ಯುದಯಕ್ಕೆ ತನ್ನ ಬದುಕನ್ನೇ ಪಣವಾಗಿರಿಸಿದ್ದ ಬಸವಣ್ಣನವರ ಜ್ಞಾನದ ಬಲದಿಂದ ಇಂದು ಸಮಾನತೆ ಬಂದಿದೆ. ಅದರ ಫಲವೇ ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ ಹಾಗೂ ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಖಮ್ಮ ಅವರುಗಳು ಅನುಭವ ಮಂಟಪಕ್ಕೆ ಬಂದು ವಚನ ರಚನೆ ಮಾಡಿದರು. ಇದು ಬಸವಣ್ಣನವರ ಲಿಂಗ ಸಮಾನತೆಯ ಪ್ರತೀಕ ಎಂದೇ ಹೇಳಬಹುದಾಗಿದೆ. ಎಂತೆಂತಹವರು ತಮ್ಮ ಮೂಲವನ್ನು ಬಿಟ್ಟು ಕಲ್ಯಾಣದಲ್ಲಿ ಕೇವಲ ಸಣ್ಣಪುಟ್ಟ ಕಾಯಕ ಮಾಡಿಕೊಂಡು ಧನ್ಯರಾದ ಬಗ್ಗೆ ಚರಿತ್ರೆ ದಾಖಲಿಸಿದೆ. ಶರಣರ ಮಹಿಮೆ ಅಪಾರವಾದದ್ದು. ಅಂತಹ ಶರಣರುಗಳ ವಿಚಾರ ಈ ಸಂದರ್ಭದಲ್ಲಿ ಮನನ ಮಾಡಿಕೊಟ್ಟಿದೆ ಶ್ರೀಮಠ. ಅದರ ಸದುಪಯೋಗವನ್ನು ಸಾರ್ವಜನಿಕರು ಮಾಡಿಕೊಳ್ಳಬೇಕು ಎಂದರು.

ಹೊಸದುರ್ಗ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಜೆ. ಮಲ್ಲೇಶ್ ಮಾತನಾಡಿ ಗಂಗಮ್ಮ ವೇಶ್ಯೆವೃತ್ತಿಯಲ್ಲಿದ್ದರೂ ಶರಣರ ಕೃಪಾದೃಷ್ಟಿಗೆ ಬಿದ್ದು ಆ ಕಾಯಕ ಬಿಟ್ಟು ಶರಣಸಂಗ ಸೇರಿ ಪುನೀತರಾಗಿ ಗಂಗೇಶ್ವರ ಎಂಬ ಅಂಕಿತದಲ್ಲಿ ಒಂದು ವಚನ ರಚಿಸಿರುವುದು ಸಿಕ್ಕಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನಿರ್ದೇಶಕ ನಾಗರಾಜ್ ಆರ್ ಪುಣ್ಯಸ್ತ್ರೀ ರೇಖಮ್ಮರ ಬಗ್ಗೆ ಮಾತನಾಡಿ ಶರಣ ತಿಂಥಿಣಿಯಲ್ಲಿ ಹೂಮಾಲೆ ಕಟ್ಟಿ ಶರಣರಿಗೆ ತಲುಪಿಸುವ ಕಾಯಕ ಮಾಡಿಕೊಂಡಿದ್ದ ಇವರೂ ಸಹ ವಚನ ರಚನೆ ಮಾಡಿದ್ದು ಒಂದು ವಚನ ಲಭ್ಯವಿದೆ. ಗುರಸಿದ್ಧೇಶ್ವರ ಅಂಕಿತದಲ್ಲಿ ಅವರ ವಚನವಿದೆ ಎಂದರು.

ಈ ಸಂದರ್ಭದಲ್ಲಿ ಇಳಕಲ್‍ನ ಬಸವರಾಜದೇವರು, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ ಸೇರಿದಂತೆ ವಿವಿಧ ಸಮಾಜ, ಸಂಘ-ಸಂಸ್ಥೆ, ಎಸ್ ಜೆಎಂ ವಿದ್ಯಾಪೀಠದ ಶಾಲಾ-ಕಾಲೇಜುಗಳ ನೌಕರವರ್ಗದವರು ಭಾಗವಹಿಸಿದ್ದರು.

ಉಮೇಶ್ ಪತ್ತಾರ ಇಬ್ಬರೂ ವಚನಕಾರ್ತೆಯರ ವಚನಗಾಯನ ಮಾಡಿದರು. ವೀರೇಶ್ ದೇವರು ಹಾಗೂ ಗಂಗಾಧರ ದೇವರು ಅವರು ವಚನ ಪಠಣ ಮಾಡಿದರು. ಬೃಹನ್ಮಠ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ಗಿರೀಶಾಚಾರ್ ಸ್ವಾಗತಿಸಿ ವಿಜಯಲಕ್ಷ್ಮಿ ಗಡ್ಡೆಪ್ಪನವರ್ ನಿರೂಪಿಸಿ ಮಹಂತೇಶ್ ನಿಟುವಳ್ಳಿ ಶರಣು ಸಮರ್ಪಣೆ ಮಾಡಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು