ಬಸವಣ್ಣನವರ ವಿಚಾರಧಾರೆ ಎಂದೆಂದಿಗೂ ಪ್ರಸ್ತುತ

KannadaprabhaNewsNetwork |  
Published : Feb 18, 2024, 01:31 AM IST
ಚಿತ್ರ 17ಬಿಡಿಆರ್3ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ನಡೆದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕ್ರಾರ್ಯಕ್ರಮದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಯುವ ಮುಖಂಡ ಸಾಗರ ಖಂಡ್ರೆ, ರಾಜಶೇಖರ ಅಷ್ಟೂರೆ, ಶ್ರೀಕಾಂತ ಭೋರಾಳೆ, ಬಸವರಾಜ ವಂಕೆ, ಗಣೇಶ ಪಾಟೀಲ್, ಸಂತೋಷ ಬಿಜಿ ಪಾಟೀಲ್ ಸೇರಿದಂತೆ ಹಲವರು | Kannada Prabha

ಸಾರಾಂಶ

ಶ್ವಗುರು ಬಸವಣ್ಣನವರ ವಿಚಾರಧಾರೆ ಈ ಜಗದಲ್ಲಿ ಸೂರ್ಯ ಇರುವವರೆಗೂ ಶಾಶ್ವತವಾಗಿ ಉಳಿಯಲಿವೆ.

ಭಾಲ್ಕಿ: ವಿಶ್ವಗುರು ಬಸವಣ್ಣನವರ ವಿಚಾರಧಾರೆ ಈ ಜಗದಲ್ಲಿ ಸೂರ್ಯ ಇರುವವರೆಗೂ ಶಾಶ್ವತವಾಗಿ ಉಳಿಯಲಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಅವರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಿರೇಮಠ ಸಂಸ್ಥಾನದಿಂದ ಶನಿವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, ಬಸವಣ್ಣನವರು ಕಂದಾಚಾರ, ಮೌಢ್ಯತೆ, ಅಸ್ಪೃಶ್ಯತೆ, ಜಾತೀಯತೆ ವಿರುದ್ಧ ಹೋರಾಡಿದರು. ವಚನಗಳನ್ನು ರಚಿಸಿ ಜಾಗೃತಿ ಮೂಡಿಸಿದರು ಎಂದರು.

ಮಹಿಳೆಯರಿಗೆ ಸ್ವಾತಂತ್ರ‍್ಯ ಕಲ್ಪಿಸಿ ಸಮಸಮಾಜದ ಕಲ್ಪನೆ ಬಿತ್ತಿದರು. ಎಲ್ಲ ಸಮುದಾಯದ ಶರಣರನ್ನು ಅನುಭವ ಮಂಟಪದಲ್ಲಿ ಸೇರಿಸಿ ಸಮಾನತೆ ಸಾರಿದರು. ಬಸವಣ್ಣನವರ ಚಿಂತನೆ, ತತ್ವ, ವಿಚಾರಧಾರೆ ಇಂದು-ಮುಂದು ಎಂದೆಂದಿಗೂ ಪ್ರಸ್ತುತವಾಗಿ ಉಳಿಯಲಿವೆ ಎಂದರು.

ಅಂತಹ ಬಸವಣ್ಣನವರ ವಿಚಾರಧಾರೆ ಜಗದಗಲಕ್ಕೂ ಮುಟ್ಟಿಸಲು ಡಾ.ಬಸವಲಿಂಗ ಪಟ್ಟದ್ದೇವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಮನವಿ ಮೇರೆಗೆ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಘೋಷಣೆ ಮಾಡುವದರ ಜೊತೆಗೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಇದಲ್ಲದೇ ಬಸವಣ್ಣನವರ ತತ್ವಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಾರ ಗೌರವ ಇದೆ. ಬರುವ ದಿನಗಳಲ್ಲಿ ಬಸವ ಜಯಂತಿಯನ್ನು ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಆಚರಿಸಲು ಕ್ರಮ ಜರುಗಿಸಬೇಕು ಎಂದರು.

ಯುವ ಮುಖಂಡ ಸಾಗರ ಖಂಡ್ರೆ ಅವರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದರು. ಅಕ್ಕನ ಬಳಗದ ಶರಣೆಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಸವಲಿಂಗ ದೇವರು ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ನ್ಯಾಯವಾದಿ ಶ್ರೀಕಾಂತ ಭೋರಾಳೆ, ತಾಲೂಕು ಕರವೇ ಅಧ್ಯಕ್ಷ ಗಣೇಶ ಪಾಟೀಲ್ ಜ್ಯಾಂತಿ, ಕಸಾಪ ನಗರ ಅಧ್ಯಕ್ಷ ಸಂತೋಷ ಬಿ.ಜಿ.ಪಾಟೀಲ್‌, ಅಶೋಕ ಬಾವುಗೆ, ಕಪಿಲ ಕಲ್ಯಾಣೆ, ಮಲ್ಲಿಕಾರ್ಜುನ ಬಿರಾದಾರ, ಪ್ರಶಾಂತ ಕೊಟಗೀರಾ, ರಾಜಕುಮಾರ ಬಾವುಗೆ, ಸುನಿತಾ ಮಮ್ಮಾ ಸೇರಿದಂತೆ ಬಸವಾಭಿಮಾನಿಗಳು, ಅಕ್ಕನ ಬಳಗದ ಶರಣೆಯರು ಹಾಜರಿದ್ದರು. ಬಸವರಾಜ ಮರೆ ಸ್ವಾಗತಿಸಿದರೆ ದೀಪಕ ಠಮಕೆ ನಿರೂಪಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ