ಕಾರವಾರ: ಬಸವಣ್ಣ ಅವರು ಸಮಾಜ ಸುಧಾರಣಾ ಕಾರ್ಯಗಳು ಮತ್ತು ತಮ್ಮ ವಚನಗಳ ಮೂಲಕ ಮೂಢನಂಬಿಕೆ, ಅಜ್ಞಾನದಿಂದ ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹಾನ್ ಸಾಂಸ್ಕೃತಿಕ ನಾಯಕ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಅಂದಿನ ಕಾಲದಲ್ಲಿದ್ದ ಜಾತಿ ಮತ್ತು ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ಲಿಂಗಾಯಿತ ಧರ್ಮದ ಮೂಲಕ ಸಮಾನತೆಯ ತತ್ವ ಬೋಧಿಸಿದ್ದರು. ಅವಿದ್ಯಾವಂತರಿಗೂ ಸರಳವಾಗಿ ಅರ್ಥವಾಗುವಂತೆ ವಚನಗಳನ್ನು ರಚಿಸಿ, ಅವುಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು. ಅವರು ವಚನಗಳ ಮೂಲಕ ನೀಡಿರುವ ಸಂದೇಶಗಳನ್ನು ಎಲ್ಲರೂ ತಮ್ಮ ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದು ಅಭಿಪ್ರಾಯಿಸಿದರು.
ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರವನ್ನು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಸ್ಥಳೀಯಾಡಳಿತದ ಕಚೇರಿಗಳು, ಗ್ರಾಪಂಗಳಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ಉತ್ತರ ಭಾರತ ಮೂಲದ ತಮಗೆ ಪಿಯುಸಿಯಲ್ಲಿ ಬಸವಣ್ಣನವರ ಬಗ್ಗೆ ಸ್ವಲ್ಪ ತಿಳಿದಿತ್ತು. ಆದರೆ ತಾವು ಐಎಎಸ್‌ಗೆ ಅಧ್ಯಯನ ಮಾಡುವಾಗ ಬಸವಣ್ಣನವರ ಬಗ್ಗೆ ಸವಿವರವಾಗಿ ತಿಳಿಯಲು ಸಾಧ್ಯವಾಯಿತು. 900ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಬಸವಣ್ಣನವರು ತಮ್ಮ ವಚನಗಳಲ್ಲಿ ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ, ಜಾತೀಯ ವ್ಯವಸ್ಥೆ, ಅಹಿಂಸೆ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಅತ್ಯಂತ ಸರಳವಾಗಿ ತಿಳಿಸಿದ್ದಾರೆ. ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದಂತೆ ಅವರ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಪೂರ್ವ ಬಸವಣ್ಣ ಅವರ ಭಾವಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಿತು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಹಾಗೂ ಅಧಿಕಾರಿಗಳು ಇದ್ದರು.