ವಿದ್ಯಾರ್ಥಿಗಳ ಆಪದ್ಬಾಂಧವ ಬಸವರಾಜ ಬಯ್ಯಾ

KannadaprabhaNewsNetwork | Published : Jul 10, 2024 12:33 AM

ಸಾರಾಂಶ

ಬಸವಕಲ್ಯಾಣದ ಬಸವೇಶ್ವರ ಐಟಿಐ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಬಸವರಾಜ ಬಯ್ಯಾ ಅವರಿಗೆ ಇಸ್ಲಾಂಪೂರ ಗ್ರಾಮದಲ್ಲಿ ಸನ್ಮಾನಿಸಲಾಯಿತು.

ನಿವೃತ್ತ ಅಧ್ಯಾಪಕ ಬಯ್ಯಾರವರಿಗೆ ಹುಟ್ಟೂರಲ್ಲಿ ಸನ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ನಿವೃತ್ತಿ ಹೊಂದಿರುವ ಬಸವರಾಜ ಬಯ್ಯಾ ಅವರು ಕೈಗಾರಿಕಾ ಕಂಪನಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನವಿತ್ತು ಅವರಿಗೆ ಉದ್ಯೋಗ ದೊರಕುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕೂಡ ಕೊಟ್ಟಿದ್ದಾರೆ. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಆಪದ್ಬಾಂಧವರಾಗಿ, ಹಿತಚಿಂತಕರಾಗಿ ಅವರ ಶಿಕ್ಷಣಕ್ಕೆ ನೆರವಾಗಿದ್ದಾರೆ ಎಂದು ಬಸವೇಶ್ವರ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಜ್ಞಾನರೆಡ್ಡಿ ಬೋಳಿಂಗೆ ಹೇಳದರು.

ಪಟ್ಟಣದ ಬಸವೇಶ್ವರ ಐಟಿಐ ಕಾಲೇಜಿನಲ್ಲಿ ಅಧ್ಯಾಪಕರಾಗಿ 28 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಬಸವರಾಜ ಬಯ್ಯಾ ಅವರಿಗೆ ಇಸ್ಲಾಂಪೂರ ಗ್ರಾಮದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವರಾಜ ಬಯ್ಯಾ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರೊಂದಿಗೆ ಉತ್ತಮ ಸ್ನೇಹವಿಟ್ಟುಕೊಂಡು ಅವರ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿದ್ದಾರೆ. ಇಂದು ಜಿಲ್ಲೆಯಲ್ಲಿ ಬಸವಕಲ್ಯಾಣದ ಬಸವೇಶ್ವರ ಐಟಿಐ ಕಾಲೇಜಿಗೆ ಉತ್ತಮ ಹೆಸರಿದೆ. ಇದರ ಬೆಳವಣಿಗೆಗೆ ಬಸವರಾಜರ ಯೋಗದಾನ ಬಹಳಷ್ಟಿದೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿ, ಪಾಲಕ, ಬೋಧಕ, ಆಡಳಿತವರ್ಗದವರ ಮಧ್ಯೆ ಕೌಟುಂಬಿಕ ವಾತಾವರಣ ನಿರ್ಮಾಣಗೊಳ್ಳಲು ಇವರು ಕಾರಣಕರ್ತರಾಗಿದ್ದಾರೆ. ಇವರ ಬೋಧನೆ, ಸಾಧನೆ ಸೇವೆ, ದಕ್ಷತೆ, ಆದರ್ಶ ವ್ಯಕ್ತಿತ್ವ ನೋಡಿ ಸಂಸ್ಥೆಯ ಆಡಳಿತ ಮಂಡಳಿಯವರು ಇವರಿಗೆ ಸಂಸ್ಥೆಯಲ್ಲಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಇವರ ಮುಂದುವರಿಕೆಗೆ ವಿದ್ಯಾರ್ಥಿ ಮತ್ತು ಪಾಲಕರ ಆಗ್ರಹವೂ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ರಮೇಶ ಪುಟ್ಟಾ, ಹಿರಿಯ ಶಿಕ್ಷಕರಾದ ಗುಂಡಪ್ಪ ಧುಂಪಾ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಬಯ್ಯಾ, ಜನನಿ ಜನ್ಮಭೂಮಿ ಸಂಬಂಧ ಅನ್ಯಾದೃಶ್ಯವಾಗಿರುತ್ತದೆ. ಹುಟ್ಟೂರಾದ ಇಸ್ಲಾಂಪೂರ ಗ್ರಾಮದ ಸನ್ಮಾನ ನನ್ನ ಸೇವೆಗೆ ವರಪ್ರದವಾಗಿದೆ. ನನ್ನ ಕೆಲಸಗಳಿಗೆ ಇದು ಪ್ರೇರಣಾದಾಯಕವಾಗಿದೆ. ನಿವೃತ್ತಿ ನಂತರ ನನಗೆ ಇಂದು ಬಹಳಷ್ಟು ಗೌರವ ಪ್ರಾಪ್ತವಾಗುತ್ತಿದೆ. ಒಳ್ಳೆ ಕೆಲಸ ಕಾರ್ಯಗಳಿಗೆ ಸಮಾಜದಲ್ಲಿ ಯಾವತ್ತೂ ಗೌರವಾದರ ಹೆಚ್ಚಿರುತ್ತದೆ ಎಂಬುದು ಇದರಿಂದ ಮನದಟ್ಟಾಗುತ್ತದೆ. ನಾನು ಮುಂದೆಯೂ ರಚನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಮುಖ್ಯ ಶಿಕ್ಷಕಿಯಾದ ಆಶಾ ಶ್ರೀನಿವಾಸರಡ್ಡಿ, ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರುಕ್ಮೋದ್ದಿನ್ ಇಸ್ಲಾಂಪೂರ ಮಾತನಾಡಿ, ಬಸವರಾಜ ಬಯ್ಯಾ ಅವರಲ್ಲಿ ಅಗಾಧವಾದ ಜ್ಞಾನ ಸಂಪತ್ತಿದೆ. ಇವರು ಉತ್ತಮ ಸಮಾಲೋಚಕರು, ಚಿಂತಕರೂ ವಾಗ್ಮಿಗಳೂ, ಅಧ್ಯಯನಶೀಲರಾಗಿದ್ದಾರೆ. ಇವರ ಸಕಾಲಿಕ ಮಾರ್ಗದರ್ಶನ ಮತ್ತು ಸಹಾಯದಿಂದಾಗಿ ಬಹಳಷ್ಟು ಬಡ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಸಂಪಾದಿಸಿದ್ದಾರೆ ಎಂದರು.

ಈ ವೇಳೆ ನಾಗರಡ್ಡಿ ರಂಗಂಪಲ್ಲೆ, ವಿಠ್ಠಲರೆಡ್ಡಿ ಬೆಲಮಕುಂಡಾ, ಸುಭಾಸ ಬೆಲಮಕುಂಡಾ, ಪ್ರಭು ಕೌಡಾಳೆ, ಬಾಬು ಗೋಟೂರು, ರಾಮಚಂದ್ರ ಪೂಜಾರಿ, ಡಾ.ಅನೀಲ ಪೂಜಾರಿ, ಅನೀಲ ಚಾಂದೆ, ಮಾರುತಿ ಕೋಲೆ, ಶಿವರಾಜ ಧುಂಪಾ, ಆಕಾಶ ಸಿಂಗೆ ಮುಂತಾದವರು ಭಾಗವಹಿಸಿದರು.

Share this article