ಕನ್ನಡಪ್ರಭ ವಾರ್ತೆ ಗೋಣಿಕೊಪ್ಪಎಲ್ಲ ಧರ್ಮಗಳು ಮಾನವ ಮೌಲ್ಯಗಳನ್ನು ಬಿತ್ತುವ ಉದ್ದೇಶದೊಂದಿಗೆ ಆ ಧರ್ಮದೊಳಗಿನ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಶ್ರೀ ಕ್ಷೇತ್ರ ಕಿರಿಕೊಡ್ಲಿಮಠದ ಸದಾಶಿವ ಸ್ವಾಮಿಗಳು ತಿಳಿಸಿದರು.
ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಗೋಣಿಕೊಪ್ಪ ಕೊಡಗು ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಎನ್.ಆರ್. ಅಮೃತ್‌ರಾಜಾ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಓಣಂ ಉತ್ಸವ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.ವೈಜ್ಞಾನಿಕವಾಗಿ ಮಾನವ ಕುಲ ಮುಂದುವರಿಯುತ್ತಿದೆ. ಆದರೆ ಮನುಷ್ಯ ತನ್ನ ಬದುಕಿನ ಮೌಲ್ಯಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾನೆ. 15 ವರ್ಷಗಳ ಹಿಂದೆ ಮನೆಯ ಕೋಣೆಯೊಂದರಲ್ಲಷ್ಟೇ ದೂರವಾಣಿ ಇತ್ತು. ಯಾವುದೇ ಅಂಜಿಕೆ ಇಲ್ಲದೆ ಆ ಸಂದರ್ಭದಲ್ಲಿ ಮುಕ್ತವಾಗಿ ಮಾತನಾಡುವ ವ್ಯವಸ್ಥೆ ರೂಪುಗೊಳ್ಳುತ್ತಿತ್ತು. ಆದರೆ ಇತ್ತೀಚಿನ ಮೊಬೈಲ್ ಬೆಳವಣಿಗೆಯ ನಂತರ ಮನೆಯ ಪ್ರತಿ ಸದಸ್ಯರು ಗೌಪ್ಯವಾಗಿ ಮಾತನಾಡುವುದರಿಂದ ಕೌಟುಂಬಿಕವಾಗಿ ದೂರ ಉಳಿಸುತ್ತಿದೆ. ವಿಜ್ಞಾನದ ಬೆಳವಣಿಗೆಯಿಂದ ಅಭಿವೃದ್ಧಿಯು ಸಾಧ್ಯ. ಆದರೆ ಮನುಷ್ಯ ಬಳಸುವ ರೀತಿಯಲ್ಲಿ ಬದಲಾವಣೆ ಕಂಡುಕೊಂಡರೆ ವಿನಾಶವು ಸಾಧ್ಯ ಎಂಬುವುದನ್ನು ಮೊಬೈಲ್ ವ್ಯವಸ್ಥೆ ಇಂದು ತೋರಿಸಿ ಕೊಡುತ್ತಿದೆ ಎಂದರು.
ಧಾರ್ಮಿಕ ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿಗೆ ಹಿನ್ನೆಲೆಯಲ್ಲಿ ಪ್ರಪಂಚದಾದ್ಯಂತ ಭಾರತವನ್ನು ದೇವಾಲಯದ ನಾಡು ಎಂದು ಗುರುತಿಸಲಾಗುತ್ತಿದೆ. ಆದರೆ, ಭಾರತ ವೈಜ್ಞಾನಿಕವಾಗಿ ಮುಂದುವರಿದಂತೆ ನಮ್ಮತನವನ್ನು ನಾವು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂಬುದು ವಿಷಾದನೀಯ ಎಂದು ಹೇಳಿದರು.ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಂಘಟನೆಗಳು ಶಕ್ತಿಯುತವಾಗಿರಬೇಕು. ಶಿಕ್ಷಣ ಅಂಕವನ್ನು ಗಳಿಸುವ ವ್ಯವಸ್ಥೆಗಷ್ಟೇ ಸೀಮಿತವಾಗದೆ ಮೌಲ್ಯಗಳನ್ನು ಗಳಿಸುವ ವೇದಿಕೆಯಾಗಬೇಕು. ಕುಟುಂಬದಲ್ಲಿ ಪ್ರಮುಖವಾಗಿ ತಂದೆ ತಾಯಿ ಮಕ್ಕಳಿಗೆ ನೀಡುವ ಬದುಕಿನ ಮೌಲ್ಯಗಳು ಜೀವನಕ್ಕೆ ಆಧಾರವಾಗಿರುತ್ತದೆ. ತಂದೆ ತಾಯಿ ಮಾದರಿ ಮಕ್ಕಳಲ್ಲಿ ಬೆಳೆಸಲು ಉದ್ದೇಶಿಸಿದಾಗ ಮಕ್ಕಳ ಭವಿಷ್ಯವೂ ಈ ಮಾನವ ಕುಲದ ಪ್ರೇಮದ ಜೀವನವನ್ನು ಸಾಗಿಸಲು ಸಾಧ್ಯವಾಗಬಲ್ಲದು. ಮಾನವ ಪ್ರೀತಿಯನ್ನು ಎದೆಯೊಳಗೆ ಬಿತ್ತಿಕೊಂಡಾಗ ಜೀವನದ ಹಾದಿಯಲ್ಲಿ ಸಂತೋಷವನ್ನು ಕಾಣಬಹುದು. ಹಣವೇ ಜೀವನದಲ್ಲಿ ಪ್ರಮುಖವಾಗದೆ ಸರಳ ಜೀವನದ ಕಡೆಗೆ ತೆರೆದುಕೊಳ್ಳಬೇಕು. ಹಾಗಾದರೆ ಮಾತ್ರ ಮನುಷ್ಯ ಸಂಭ್ರಮ ಮತ್ತು ಸಂತೋಷದಿಂದ ಬದುಕಲು ಸಾಧ್ಯವಾಗಬಲ್ಲದು ಎಂದು ನುಡಿದರು.
ಯಾವುದೇ ಧರ್ಮದೊಳಗೆ ಜಾತಿ ಸಮುದಾಯಗಳು ಇದ್ದರೂ ಎಲ್ಲವೂ ಮಾನವೀಯ ನೆಲೆಯಡಿಯಲ್ಲಿ ನಿಲ್ಲಬೇಕು. ಭಾರತ ದೇಶದಲ್ಲಿ ಕೇರಳ ಶಿಕ್ಷಣವಂತ ರಾಜ್ಯ ಎಂದು ಗುರುತಿಸಿಕೊಂಡರು ಮತ್ತೊಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ವೃದ್ಧಾಶ್ರಮಗಳನ್ನು ಹೊಂದಿದ ರಾಜ್ಯವೆಂಬ ಕಪ್ಪು ಚುಕ್ಕಿಯನ್ನು ಅಂಟಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಆ ನೆಲದಲ್ಲಿ ಸಂಸ್ಕಾರ ಸಿಗುತ್ತಿಲ್ಲ ಎಂದರು.ಪ್ರತಿಯೊಬ್ಬರಲ್ಲೂ ತನ್ನ ಸಂಸ್ಕೃತಿಯ ಬಗ್ಗೆ ಕುತೂಹಲ ಮತ್ತು ಗೌರವ ಉಳಿಸಿಕೊಂಡಾಗ ಆ ನೆಲದ ಭಾಷೆ ಸಂಸ್ಕೃತಿ ಬೆಳವಣಿಗೆಗೆ ಕಾರಣವಾಗಬಲ್ಲದು. ಈ ನಿಟ್ಟಿನಲ್ಲಿ ಮಲಯಾಳಂ ಸಮಾಜ ತಮ್ಮ ಸಮುದಾಯವನ್ನ ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿರುವುದುನ್ನು ಶ್ಲಾಘಿಸಿದರು.
ಮುಖ್ಯ ಭಾಷಣಕಾರಗಿ ಕೇರಳದ ರೀಜಾ ಭಟ್ಟಾದ್ರಿ ಪಾಡ್ ಮಾತನಾಡಿ, ಭಾಷೆ ಆಚಾರ ವಿಚಾರಗಳು ಉಳಿಯಬೇಕಾದರೆ ಸಮಾಜದ ಒಗ್ಗೂಡುವಿಕೆಗೆ ಅತಿ ಮುಖ್ಯ ಮತ್ತು ಯುವ ಸಮುದಾಯಕ್ಕೆ ಸಮಾಜದ ಹಿನ್ನೆಲೆ ಇತಿಹಾಸಗಳನ್ನು ತಿಳಿಸುವ ಕಾರ್ಯವು ನಿರಂತರವಾಗಿ ಮುಂದುವರಿಸಬೇಕಾಗಿದೆ. ಅದರ ಮೌಲ್ಯಗಳನ್ನು ತಿಳಿಸಬೇಕಾಗಿದೆ ಎಂದು ಹೇಳಿದರು.ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್, ಪ್ರತಿಯೊಬ್ಬರೂ ಶಿಕ್ಷಣವಂತರಾಗದಾಗ ಈ ಸಮಾಜದಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳಲು ಸಾಧ್ಯವಾಗಬಲ್ಲದು. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಶಿಕ್ಷಣವಂತರಾಗಬೇಕು ಎಂದು ಕರೆ ನೀಡಿದರು.
ಪಂಚಭಾಷಾ ಸಾಹಿತಿ ಡಾ. ಉಳುವಂಗಡ ಕಾವೇರಿ ಉದಯ, ಚಲನಚಿತ್ರ ನಟಿ, ನಿರ್ಮಾಪಕಿ ಈರಮಂಡ ಹರಿಣಿ ವಿಜಯ, ರಾಜ್ಯ ಪ್ರವಾಸೋದ್ಯಮ ನಿಗಮದ ಮಾಜಿ ನಿರ್ದೇಶಕ ಬಿ.ಎನ್ .ಪ್ರಕಾಶ್, ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ. ಎಸ್. ಶರತ್ ಕಾಂತ್, ಮಲಯಾಳಿ ಸಮಾಜದ ಕಾನೂನು ಸಲಹೆಗಾರ ಕೆ.ಬಿ ಸಂಜೀವ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು.ಉಳುವಂಗಡ ಕಾವೇರಿ ಉದಯ ರಚಿಸಿದ ಮಲೆಯಾಳಿ ಸಾಹಿತ್ಯ ಕೃತಿಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ನಿವೃತ್ತ ಯೋಧರು, ಪತ್ರಕರ್ತರಿಗೆ, ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಧಾನ ಕಾರ್ಯದರ್ಶಿ ವಿ.ವಿ. ಅರುಣ್ ಕುಮಾರ್, ಉಪಾಧ್ಯಕ್ಷ ಎಂ.ಎಸ್. ಸುಬ್ರಮಣಿ, ರೀನಾ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಸಮುದಾಯದ ಬಾಂಧವರು ಇದ್ದರು.