ಪ್ರತಿ ವಿಷಯದ ತಳಮಟ್ಟದ ಅಧ್ಯಯನ ಅಗತ್ಯ

KannadaprabhaNewsNetwork | Published : Mar 15, 2024 1:18 AM

ಸಾರಾಂಶ

ವಾಣಿಜ್ಯ ಅಥವಾ ನಿರ್ವಹಣಾಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ; ಇನ್ನಿತರ ವಿಭಾಗಗಳ ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಅಧ್ಯಯನ ವಿಷಯ ಪರಿಚಯಿಸುವುದು ಅಗತ್ಯವಿದೆ.

ಬಳ್ಳಾರಿ: ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಎಂಬ ವಿಷಯವನ್ನು ಕೌಶಲ್ಯವರ್ಧನೆ ವಿಷಯವನ್ನಾಗಿ ಪಠ್ಯಕ್ರಮದಲ್ಲಿ ಅಳವಡಿಸಿರುವುದರಿಂದ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಕ್ಷಿಪ್ರ ಕಲಿಕೆಗೆ ಹಾಗೂ ಉದ್ಯೋಗಶೀಲರನ್ನಾಗಿಸಲು ಸಹಕಾರಿಯಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಂ. ಮೇತ್ರಿ ಅಭಿಪ್ರಾಯಪಟ್ಟರು.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ ‘ವ್ಯಾಪಾರದಲ್ಲಿ ಸ್ಥಿತಿಸ್ಥಾಪಕತ್ವದ ನವ ಪ್ರವೃತ್ತಿ’ ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಾಣಿಜ್ಯ ಅಥವಾ ನಿರ್ವಹಣಾಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ; ಇನ್ನಿತರ ವಿಭಾಗಗಳ ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಅಧ್ಯಯನ ವಿಷಯ ಪರಿಚಯಿಸುವುದು ಅಗತ್ಯವಿದೆ. ಪ್ರತಿಯೊಂದು ವಿಷಯದ ಅಭಿವೃದ್ಧಿಗೆ ತಳಮಟ್ಟದ ಅಧ್ಯಯನ ಬಹು ಮುಖ್ಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ನಗರದ ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್ ಮಾತನಾಡಿ, ವ್ಯಾಪಾರದಲ್ಲಿ ಅನೇಕ ಅಡೆ-ತಡೆಗಳು ಇರುವುದು ಸಾಮಾನ್ಯ. ಅದರಿಂದ ಹೊರಬರುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಪ್ರಸುತ್ತ ದಿನಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮವು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ವಾಣಿಜ್ಯೋದ್ಯಮಿಗಳು ಇದರ ಸದಪಯೋಗ ಪಡೆದುಕೊಳ್ಳಬೇಕು ಎಂದರು.ಮೌಂಟ್ ಕಾರ್ಮೆಲ್ ಕಾಲೇಜು ಡೀನ್ ಡಾ. ಎಸ್. ರಮೇಶ್ ಮಾತನಾಡಿ, ಹಣ, ಅಧಿಕಾರ, ಆರೋಗ್ಯ ಮತ್ತು ಮನೋರಂಜನೆ ಒಂದಕ್ಕೊಂದು ಸಂಬಂಧಿಸಿದ ವಿಷಯಗಳು. ಅವುಗಳ ಸಮರ್ಪಕ ನಿರ್ವಹಣೆ ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಎಲ್ಲರಿಂದ ಸಾಧ್ಯವಿಲ್ಲ. ತಂತ್ರಜ್ಞಾನ ಬಳಕೆ ಮತ್ತು ಕೌಶಲ್ಯಯುತ ಕಲಿಕೆಯ ಸಮಜ್ಞಾನದಿಂದ ಇವುಗಳ ನಿರ್ವಹಣೆ ಭಾಗಶಃ ಪಡೆದುಕೊಳ್ಳಬಹುದು ಎಂದು ಹೇಳಿದರು.

ವಿವಿಯ ಕುಲಸಚಿವ ಎಸ್.ಎನ್. ರುದ್ರೇಶ್, ಪ್ರೊ. ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ. ಸದ್ಯೋಜಾತಪ್ಪ, ನಿರ್ವಹಣಾಶಾಸ್ತ್ರ ಡೀನ್ ಪ್ರೊ. ಜಿ.ಪಿ. ದಿನೇಶ್, ಸಮ್ಮೇಳನದ ಸಂಚಾಲಕ ಪ್ರೊ. ಜಿಲಾನ್ ಬಾಷಾ ಹಾಗೂ ಪ್ರೊ. ಭೀಮನಗೌಡ ಉಪಸ್ಥಿತರಿದ್ದರು.ಸಮ್ಮೇಳನದಲ್ಲಿ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನಾ ಕುರಿತಾದ ಪ್ರಬಂಧವನ್ನು ಮಂಡಿಸಿದರು. ವಿಶ್ವವಿದ್ಯಾಲಯದ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಇದ್ದರು.

Share this article