ಆರೋಗ್ಯಕರ ಬೆಂಗಳೂರು
ಆರೋಗ್ಯಕರ ಬೆಂಗಳೂರಿಗೆ ₹200 ಕೋಟಿನಗರದ ನಿವಾಸಿಗಳ ಸ್ವಾಸ್ತ್ಯ ಕಾಪಾಡಲು ‘ಬ್ರ್ಯಾಂಡ್ ಬೆಂಗಳೂರು ಆರೋಗ್ಯಕರ ಬೆಂಗಳೂರು’ ಅಡಿಯಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಪ್ರಮುಖವಾಗಿ ಬೆಂಗಳೂರು ವ್ಯಾಪ್ತಿಯ ಆರೋಗ್ಯ ಸೇವೆಯನ್ನು ಉನ್ನತಿಕರಿಸಲು ಮುಂದಿನ 2 ವರ್ಷಗಳಲ್ಲಿ ₹200 ಕೋಟಿ ಖರ್ಚು ಮಾಡುವುದಾಗಿ ತಿಳಿಸಿದ್ದು, ಅದರ ಭಾಗವಾಗಿ ಪ್ರಸಕ್ತ ಸಾಲಿನಲ್ಲಿ ₹100 ಕೋಟಿ ಮೊತ್ತದ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಘೋಷಿಸಲಾಗಿದೆ. ಹಾಗೆಯೇ, ‘ಸಮಗ್ರ ಸದೃಢ ಆರೋಗ್ಯ’ ಯೋಜನೆ ಅಡಿಯಲ್ಲಿ 40 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ, 81 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನವೀಕರಣ ಮಾಡಲು ₹64 ಕೋಟಿ ಹಾಗೂ 24 ಹೆರಿಗೆ ಆಸ್ಪತ್ರೆ ಮತ್ತು ರೆಫೆರಲ್ ಆಸ್ಪತ್ರೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಿಸಲು ₹24 ಕೋಟಿ ಖರ್ಚುಮಾಡುವುದಾಗಿ ತಿಳಿಸಲಾಗಿದೆ.
ರೋಗನಿರೋಧಕ ಚುಚ್ಚುಮದ್ದು ನೀಡುವ ವ್ಯವಸ್ಥೆಯನ್ನು ಬದಲಿಸಲಾಗುತ್ತಿದ್ದು, ‘ಆರೋಗ್ಯ ಸಾರಥಿ’ ವಾಹನದ ಮೂಲಕ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು, 14 ಅತ್ಯಾಧುನಿಕ ಆ್ಯಂಬುಲೆನ್ಸ್ ಖರೀದಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗಾಗಿ ₹25 ಕೋಟಿ ಖರ್ಚು ಮಾಡುವುದಾಗಿ ಹೇಳಲಾಗಿದೆ.ಅದರ ಜತೆಗೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನಡುವೆ ಸಮನ್ವಯ ಸುಗಮಗೊಳಿಸಲು ಹಾಗೂ ಆರೋಗ್ಯ ವ್ಯವಸ್ಥೆ ಸದೃಢಗೊಳಿಸಲು ಆರೋಗ್ಯ ಆಯುಕ್ತರ ಹುದ್ದೆ ಸೃಜಿಸುವ ಘೋಷಣೆ ಮಾಡಲಾಗಿದ್ದು, ಅವರ ವ್ಯಾಪ್ತಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್‌ಗಳು, ಹೆರಿಗೆ ಆಸ್ಪತ್ರೆ, ರೆಫೆರಲ್ ಯೂನಿಟ್‌ಗಳನ್ನು ತಂದು ಅವುಗಳ ನಿರ್ವಹಣೆಗಾಗಿ ₹20 ಕೋಟಿ ಒದಗಿಸುವುದಾಗಿ ಘೋಷಿಸಲಾಗಿದೆ.*ದಕ್ಷಿಣ ವಲಯ ವ್ಯಾಪ್ತಿಯ ಪೋಬ್ಬತಿ ಹೆರಿಗೆ ಆಸ್ಪತ್ರೆಯಲ್ಲಿ ಅಂಗವಿಕಲ ಮಕ್ಕಳ ಬೆಳವಣಿಗೆಗಾಗಿ ₹1 ಕೋಟಿ ವೆಚ್ಚದಲ್ಲಿ ಆರೈಕೆ ಕೇಂದ್ರ ಸ್ಥಾಪನೆ
*ಬಿಬಿಎಂಪಿ ವೈದ್ಯರು ಮತ್ತು ತಜ್ಞರ ಸಹಾಯದಿಂದ ಮನೋಬಿಂಬ ಸಂವಾದಾತ್ಮಕ ಯೂಟ್ಯೂಬ್ ಚಾನಲ್ ಆರಂಭ*ಮುಂಬೈ ಮಹಾನಗರ ಪಾಲಿಕೆ ಮಾದರಿಯಲ್ಲಿ ಬಿಬಿಎಂಪಿಯಿಂದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ
*₹15 ಕೋಟಿ ವೆಚ್ಚದಲ್ಲಿ ಹೊಸ ಚಿತಾಗಾರ ಮತ್ತು ರುದ್ರಭೂಮಿಗಳ ನಿರ್ಮಾಣ ಹಾಗೂ ಈಗಿರುವ ಚಿತಾಗಾರ ಮತ್ತು ರುದ್ರಭೂಮಿಗಳ ಉನ್ನತೀಕರಣ*ಪ್ರಾಣಿಗಳ ತ್ಯಾಜ್ಯ ವಿಲೇವಾರಿಗೆ 2 ವಲಯಕ್ಕೊಂದರಂತೆ ₹10 ಕೋಟಿ ವೆಚ್ಚದಲ್ಲಿ 4 ಘಟಕಗಳ ನಿರ್ಮಾಣ
---ಶಿಕ್ಷಣ ಬೆಂಗಳೂರು
ಬಿಬಿಎಂಪಿ ಶಾಲೆಗಳಲ್ಲಿ ಭಾರಿ ಬದಲಾವಣೆಖಾಸಗಿ ಶಾಲೆಗಳತ್ತ ಹೆಚ್ಚಾಗಿ ಮುಖ ಮಾಡಿರುವ ಮಕ್ಕಳನ್ನು ಬಿಬಿಎಂಪಿ ಶಾಲೆಗಳತ್ತ ಸೆಳೆಯಲು ಶಿಕ್ಷಣ ವಿಭಾಗದಲ್ಲಿ ಭಾರೀ ಬದಲಾವಣೆ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದರಂತೆ ಶಾಲೆಗಳನ್ನು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ವಾಸ್ತ್ಯ ಹೆಚ್ಚಿಸುವ ಯೋಜನೆ ಅನುಷ್ಠಾನಗೊಳಿಸುವುದು, ಬಿಬಿಎಂಪಿಯ 167 ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ಪ್ರಯೋಗಾಲಯಗಳ ಸ್ಥಾಪನೆ, ಇ-ಗ್ರಂಥಾಲಯ ತೆರೆಯಲು ₹10 ಕೋಟಿ ಒದಗಿಸುವುದಾಗಿ ಹೇಳಲಾಗಿದೆ. ಬಿಬಿಎಂಪಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಆರೋಗ್ಯ ಕಾಪಾಡಲು ‘ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ’ ಯೋಜನೆ ಅಡಿಯಲ್ಲಿ ಉಚಿತ ಆರೋಗ್ಯ ವಿಮೆ ಜಾರಿಗೊಳಿಸುವುದಾಗಿ ತಿಳಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಶಾಲಾ-ಕಾಲೇಜು ಕಟ್ಟಡಗಳ ನಿರ್ಮಾಣ ಹಾಗೂ ಈಗಾಗಲೇ ಇರುವ ಶಾಲಾ-ಕಾಲೇಜು ಕಟ್ಟಡಗಳ ಉನ್ನತೀಕರಣಕ್ಕೆ ₹173 ಕೋಟಿ ಅನುದಾನ ನೀಡುವುದಾಗಿ ಉಲ್ಲೇಖಿಸಲಾಗಿದೆ. ಹಾಗೆಯೇ, ಪೂರ್ತಿ ಶಿಥಿಲಾವಸ್ಥೆಗೆ ತಲುಪಿರುವ 19 ಶಾಲೆಗಳ ಕಟ್ಟಡವನ್ನು ತೆರವು ಮಾಡಿ ಮರು ನಿರ್ಮಾಣ ಮಾಡುವುದು ಹಾಗೂ 67 ಶಾಲಾ/ಕಾಲೇಜು ಕಟ್ಟಡಗಳ ದುರಸ್ತಿ, ಕುಡಿಯುವ ನೀರಿನ ಘಟಕ ಸ್ಥಾಪನೆ, ಶೌಚಾಲಯ ನಿರ್ವಹಣೆ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ₹35 ಕೋಟಿ ಒದಗಿಸುವುದಾಗಿ ಹೇಳಲಾಗಿದೆ.*ಬಿಬಿಎಂಪಿಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಾಲೆ ತೋಟ ಕಾರ್ಯಕ್ರಮ ಅನುಷ್ಠಾನ*ಶಾಲೆಗಳ ನಿರ್ಮಾಣ, ಉನ್ನತೀಕರಣಕ್ಕಾಗಿ 208 ಕೋಟಿ ರು. ಮೀಸಲು
*ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು 10 ಕೋಟಿ ರು. ನಿಗದಿ*ಬಿಬಿಎಂಪಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ವಿಶೇಷ ಕಾರ್ಯಕ್ರಮಗಳ ಅನುಷ್ಠಾನ
---ಟೆಕ್ ಬೆಂಗಳೂರುಪಾರದರ್ಶಕ ಆಡಳಿತಕ್ಕೆ ಐಟಿಗೆ ಮೊರೆ
ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಿ ಅದನ್ನು ಶೀಘ್ರದಲ್ಲಿ ಬಗೆಹರಿಸುವ ವ್ಯವಸ್ಥೆಯನ್ನು ಬದಲಿಸುವುದಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದಕ್ಕಾಗಿ ತಂತ್ರಜ್ಞಾನದ ನೆರವು ಪಡೆಯುವುದಾಗಿಯೂ ಉಲ್ಲೇಖಿಸಲಾಗಿದೆ. ಅದರಂತೆ ತಾಂತ್ರಿಕ ಪರಿಣಿತರನ್ನು ನೇಮಕ ಮಾಡಿ ಐಟಿ-ಪಿಎಂಯು ವ್ಯವಸ್ಥೆ ಜಾರಿಗೊಳಿಸಲಾಗುವುದು. ಆ ಮೂಲಕ ಬಿಬಿಎಂಪಿ ಆಡಳಿತ ಯಂತ್ರದ ಜತೆ ಸಾರ್ವಜನಿಕರು ಮುಖಾ-ಮುಖಿ ಸಂಪರ್ಕ ಕಡಿಮೆಗೊಳಿಸಿ, ತಂತ್ರಜ್ಞಾನ ಸಹಾಯದಿಂದ ಪಾರದರ್ಶಕ ಮತ್ತು ತ್ವರಿತ ಪರಿಹಾರ ಕೊಡಲಾಗುವುದು ಎಂದು ಹೇಳಲಾಗಿದೆ. ಅದರ ಜತೆಗೆ ಮೊಬೈಲನ್ನು ಆದ್ಯತಾ ಸೇವಾ ವಿತರಣಾ ವೇದಿಕೆಯಾಗಿಸಿ, ಬಹುತೇಕ ಸೇವೆಯನ್ನು ಮೊಬೈಲ್ ಮೂಲಕ ಸಿಗುವಂತೆ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಲಾಗಿದೆ.ಪ್ರಮುಖವಾಗಿ ಆಸ್ತಿ ಮಾಲೀಕರು ಆಸ್ತಿ ಮಾರಾಟ-ಖರೀದಿ ನಡೆಸಿದಾಗ ಬಿಬಿಎಂಪಿ ಅಧಿಕಾರಿಗಳು ಮೊಬೈಲ್ ಮೂಲಕ ಸ್ವಯಂ ಚಾಲಿತವಾಗಿ ಮುಟೇಷನ್ ಅನುಮೋದಿಸುವುದು, ಆಸ್ತಿ ಮಾಲೀಕರು ಪ್ರಾಪರ್ಟಿ ಐಡಿ ಆಧಾರಿತ ದಾಖಲೆಗಳನ್ನು ಪಡೆಯುವುದು, ಕಟ್ಟಡಗಳ ನಕ್ಷೆ ಮಂಜೂರಾತಿ ಪಡೆಯುವುದು ಹೀಗೆ ಹಲವು ವ್ಯವಸ್ಥೆಗಳನ್ನು ಮೊಬೈಲ್ ಮೂಲಕವೇ ಮಾಡುವಂತೆ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.*ಬಿಬಿಎಂಪಿ ಸೇವಾ ವಿತರಣೆಗೆ ಸಂಬಂಧಿಸಿದ ಎಲ್ಲ ವಿವರವನ್ನು ಜನರಿಗೆ ತಿಳಿಸಲು ಸೇವಾ ವೇದಿಕೆ ಅಭಿವೃದ್ಧಿ ಪಡಿಸುವ ಘೋಷಣೆ
*ಬಿಬಿಎಂಪಿಯ ಎಲ್ಲ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಕ್ಕಾಗಿ 70 ತಂತ್ರಾಂಶ ಮತ್ತು ಐಟಿ ಆ್ಯಪ್‌ಗಳ ಸಂಯೋಜಿಸಿ ಸಮಗ್ರ ವ್ಯವಸ್ಥೆ ಜಾರಿ*ಬಿಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಅನುಷ್ಠಾನಕ್ಕಾಗಿ 50 ಕೋಟಿ ಒದಗಿಸುವುದಾಗಿ ಘೋಷಣೆ
--ವೈಬ್ರೆಂಟ್ ಬೆಂಗಳೂರುಸುಂದರ ನಗರ ನಿರ್ಮಾಣಕ್ಕೆ ಸ್ಕೈಡೆಕ್, ಉದ್ಯಾನ
ಆಡಳಿತ, ಸೇವಾ ಕ್ಷೇತ್ರವಷ್ಟೇ ಅಲ್ಲದೆ ಬೆಂಗಳೂರನ್ನು ಸುಂದರವಾಗಿಸುವ ಸಲುವಾಗಿ ವೈಬ್ರೆಂಟ್ ಬೆಂಗಳೂರು ಅಡಿಯಲ್ಲಿ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದಕ್ಕಾಗಿ ಬೃಹತ್ ಯೋಜನೆಗಳನ್ನು ರೂಪಿಸಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಪ್ರಮುಖವಾಗಿ 250 ಮೀ. ಎತ್ತರದ ಸ್ಕೈ-ಡೆಕ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ₹350 ಕೋಟಿ ಅವಶ್ಯಕತೆಯಿದೆ. ಆ ಯೋಜನೆಯ ಪ್ರಾಥಮಿಕ ಹಂತದ ಅನುಷ್ಠಾನಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹50 ಕೋಟಿ ಒದಗಿಸುವುದಾಗಿ ತಿಳಿಸಲಾಗಿದೆ.ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆಗಾಗಿ ಈ ಬಾರಿಯ ಬಜೆಟ್‌ನಲ್ಲೂ ₹50 ಕೋಟಿ ಮೀಸಲಿಡುವುದಾಗಿ ತಿಳಿಸಲಾಗಿದೆ. ಅದರ ಜತೆಗೆ ಈ ಬಾರಿ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ತಾದ ಕೆಂಪೇಗೌಡ ಭವನ ನಿರ್ಮಾಣ ಮಾಡುವುದಾಗಿಯೂ ಘೋಷಿಸಲಾಗಿದೆ. ಈ ಹಿಂದೆಯೇ ಘೋಷಿಸಿ, ಅನುಷ್ಠಾನದಲ್ಲಿದಿರುವ ಹೈಮಾಸ್ಟ್ ಬೀದಿ ದೀಪಗಳನ್ನು ಎಲ್‌ಇಡಿ ಬೀದಿ ದೀಪಗಳಾಗಿ ಪರಿವರ್ತಿಸುವ ಎನರ್ಜಿ ಎಫಿಶಿಯೆನ್ಸಿ ಯೋಜನೆಯನ್ನು ಈ ವರ್ಷ ಮುಂದುವರಿಸುವುದಾಗಿ ತಿಳಿಸಲಾಗಿದೆ.
ಬೆಂಗಳೂರು ನಗರವನ್ನು ಆಕರ್ಷಣೀಯವನ್ನಾಗಿಸಲು ನಗರದ ಮೇಲ್ಸೇತುವೆ, ಕೆಳಸೇತುವೆ, ರಸ್ತೆ ಕೂಡು ಜಾಗಗಳು, ಉದ್ಯಾನಗಳಲ್ಲಿ ₹100 ಕೋಟಿ ವೆಚ್ಚದಲ್ಲಿ ಆಕರ್ಷಕ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರ ಜೀವನೋತ್ಸಾಹ ಕೇಂದ್ರಗಳು ಥೀಮ್ ಆಧಾರಿತ ಪ್ರದರ್ಶನಗಳನ್ನು ಮಾಡಲು ₹5 ಕೋಟಿ ಒದಗಿಸುವುದಾಗಿ ಘೋಷಿಸಲಾಗಿದೆ.*ಶಾಪಿಂಗ್ ಮಾಲ್, ಬಸ್ ನಿಲ್ದಾಣಗಳು ಮತ್ತು ಶೌಚಾಲಯಗಳಲ್ಲಿ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಮತ್ತು ವಿಶ್ರಾಂತಿ ಕೊಠಡಿ ಲಭ್ಯವಾಗುವಂತೆ ಮಾಡುವುದು*ಸಂಚಾರ ಸಿಗ್ನಲ್‌ಗಳಲ್ಲಿ ಆ್ಯಂಬುಲೆನ್ಸ್ ಸಿಲುಕಿದ್ದರೆ, ಕೂಡಲೆ ಸಿಗ್ನಲ್ ಮುಕ್ತಗೊಳಿಸುವ ವ್ಯವಸ್ಥೆ ಅನುಷ್ಠಾನ
*ನಗರದ ಪ್ರವಾಸಿ ತಾಣಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಹಬ್ಬಗಳ ಆಯೋಜನೆ---
ಕಲ್ಯಾಣ ವಿಭಾಗಪೌರಕಾರ್ಮಿಕರ ಪಿಂಚಣಿಗೆ ₹137 ಕೋಟಿ
ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದವರಿಗೆ ನೆರವಾಗುವ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಕಲ್ಯಾಣ ವಿಭಾಗದ ಮೂಲಕ ಈ ಬಾರಿ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು, ಪೌರಕಾರ್ಮಿಕರ ನಿವೃತ್ತಿ ನಂತರ ಪಿಂಚಣಿ ನೀಡಲು ₹137.50 ಕೋಟಿ ಒದಗಿಸುವುದಾಗಿ ಹೇಳಲಾಗಿದೆ. ಹಾಗೆಯೇ, ಮಹಿಳೆಯರು, ಎಸ್ಸಿ/ಎಸ್ಟಿ, ಹಿಂದುಳಿದ ಅಲ್ಪಸಂಖ್ಯಾತರು ಹಾಗೂ ಮಂಗಳಮುಖಿಯರು ವಿದ್ಯುತ್ ಚಾಲಿತ ಆಟೋ/ಗೂಡ್ಸ್ ಆಟೋಗಳ ಖರೀದಿಗೆ ಇ-ಸಾರಥಿ ಯೋಜನೆ ಜಾರಿಗೊಳಿಸಲಾಗುವುದು. ಅದರ ಮೂಲಕ 250 ಮಂದಿಗೆ ಸಹಾಯಧನ ನೀಡಲಾಗುವುದು, ಅದಕ್ಕಾಗಿ ₹5 ಕೋಟಿ ಒದಗಿಸುವುದಾಗಿ ಘೋಷಿಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯ ಕಾರ್ಮಿಕ ಮಹಿಳೆಯರು ಮತ್ತು ಪೌರಕಾರ್ಮಿಕರು ಹಾಗೂ ಅಂಗವಿಕಲರಿಗೆ ವಿದ್ಯುತ್ ಚಾಲಿತ ಎರಡು ಮತ್ತು ಮೂರು ಚಕ್ರದ ವಾಹನವನ್ನು ಉಚಿತವಾಗಿ ನೀಡಲಾಗುವುದು ಹಾಗೂ ಅದಕ್ಕಾಗಿ ₹12 ಕೋಟಿ ವ್ಯಯಿಸಲಾಗುವುದು ಎಂದು ತಿಳಿಸಲಾಗಿದೆ.
ಮಂಗಳಮುಖಿಯರು ಹಾಗೂ ಆರ್ಥಿಕ ಹಿಂದುಳಿದವರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಬಿಬಿಎಂಪಿಯಿಂದ ಗರಿಷ್ಠ ₹1.50 ಲಕ್ಷ ಸಹಾಯಧನ ನೀಡಲು ಉದ್ದೇಶಿಸಿದ್ದು, ಅದಕ್ಕಾಗಿ ₹10 ಕೋಟಿ ನಿಗದಿ ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಒಂಟಿ ಮನೆ ಯೋಜನೆ ಅಡಿಯಲ್ಲಿ ಈ ಬಾರಿ ಎಸ್ಸಿ/ಎಸ್ಟಿ, ಹಿಂದುಳಿದ ವರ್ಗ, ವಿಶೇಷ ಚೇತನ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡಲು ಬಜೆಟ್‌ನಲ್ಲಿ ₹211 ಕೋಟಿ ಮೀಸಲಿಡಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.*ವಲಯಕ್ಕೊಂದು ಶ್ರವಣ ವಸತಿ ವೃದ್ಧಾಶ್ರಮ ಹಾಗೂ ಹೆಣ್ಣು ಮಕ್ಕಳಿಗಾಗಿ ಸಾವಿತ್ರಿ ವಸತಿ ನಿಲಯ ತೆರೆಯಲು ₹8 ಕೋಟಿ*ಮಂಗಳಮುಖಿಯರ ರಾತ್ರಿ ತಂಗುದಾಣ ನಿರ್ಮಾಣ ಹಾಗೂ ಹಾಲಿ ಇರುವ ನಿರಾಶ್ರಿತರ ತಂಗುದಾಣಗಳ ನಿರ್ವಹಣೆಗೆ ₹4 ಕೋಟಿ
*5 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ರಿಕ್ಷಾ ಖರೀದಿಗೆ ಸಹಾಯಧನ ನೀಡಲು ₹50 ಕೋಟಿ ಅನುದಾನ---
ಹಣಕಾಸು ವಿಭಾಗಹಣ ವರ್ಗಾವಣೆಯ ನಿಖರ ಮಾಹಿತಿ
ಬಿಬಿಎಂಪಿ ಆಡಳಿತದ ಪ್ರಮುಖ ವಿಭಾಗವಾದ ಹಣಕಾಸು ವಿಭಾಗದಲ್ಲಿನ ವ್ಯವಸ್ಥೆಗೆ ಅಮೂಲಾಗ್ರ ಬದಲಾವಣೆ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಅದಕ್ಕಾಗಿ ಹಲವು ಯೋಜನೆಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ ಹಣಕಾಸು ವಿಭಾಗದಿಂದ ಅಂತರ ಕಚೇರಿ ನಿಧಿ ವರ್ಗಾವಣೆ ಮತ್ತು ಬಿಬಿಎಂಪಿಯ ಎಲ್ಲ ಪಾವತಿ, ಸ್ವೀಕೃತಿಗಳನ್ನು ಇಂಟಿಗ್ರೇಟೆಡ್ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಎಫ್‌ಎಂಎಸ್) ಮೂಲಕವೇ ಮಾಡಲಾಗುವುದು. ಆ ಮೂಲಕ ಹಣ ವರ್ಗಾವಣೆಯ ನಿಖರ ಮಾಹಿತಿಯನ್ನು ಪ್ರತಿದಿನ ತಿಳಿದು ಪಾದರ್ಶಕ ಆಡಳಿತ ನಡೆಸುವುದಾಗಿ ಹೇಳಲಾಗಿದೆ.ಬಿಬಿಎಂಪಿಯ ದೈನಂದಿನ ಲೆಕ್ಕಪತ್ರ ನಿರ್ವಹಣೆ ಜತೆಗೆ, ಆಯವ್ಯಯ ತಯಾರಿಕೆ, ತೆರಿಗೆ ಸಂಬಂಧಿತ ವಿಷಯಗಳ ನಿರ್ವಹಣೆ ಹಾಗೂ ಇತರ ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ಸಲಹೆ ನೀಡಲು ತಜ್ಞ ಲೆಕ್ಕಪರಿಶೋಧಕರ ನೇತೃತ್ವದಲ್ಲಿ ಪಾಲಿಕೆ ಲೆಕ್ಕಪತ್ರ ಮತ್ತು ಆಯವ್ಯಯ ಘಟಕ ಸ್ಥಾಪಿಸುವುದಾಗಿ ತಿಳಿಸಲಾಗಿದೆ. ಹಾಗೆಯೇ, ಆರ್ಥಿಕ ವಿಕೇಂದ್ರೀಕರಣದ ಭಾಗವಾಗಿ ವಲಯಗಳಲ್ಲಿನ ಕಚೇರಿಗಳ ಆಡಳಿತಾತ್ಮಕ ವೆಚ್ಚ, ಕಾರ್ಯಾಚರಣೆ, ನಿರ್ವಹಣಾ ವೆಚ್ಚ ಹಾಗೂ ವಾರ್ಡ್ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನು ಬಜೆಟ್‌ನಲ್ಲಿ ವಲಯಗಳಿಗೆ ಹಂಚಿಕೆ ಮಾಡುಲಾಗುವುದು. ಆ ಮೂಲಕ ಆಯಾ ವಲಯಗಳಿಗೆ ಲಭ್ಯವಾಗುವ ಸಂಪನ್ಮೂಲಗಳ ಸ್ಪಷ್ಟ ಚಿತ್ರಣ ನೀಡಲಾಗುವದು ಎಂದು ಉಲ್ಲೇಖಿಸಲಾಗಿದೆ.