ಮಾರ್ಗಸೂಚಿ ದರ ಆಧರಿಸಿ ಆಸ್ತಿ ತೆರಿಗೆ!

KannadaprabhaNewsNetwork | Updated : Feb 21 2024, 01:16 PM IST

ಸಾರಾಂಶ

ಘಟಕವಾರು ಮೌಲ್ಯಾಧಾರಿತ ಪದ್ಧತಿ (ಯುಎವಿ) ಆಧರಿಸಿ ಆಸ್ತಿ ತೆರಿಗೆ ಬದಲು ಇದೀಗ ಬಿಬಿಎಂಪಿಯು ಮಾರ್ಗಸೂಚಿ ದರ ಆಧರಿಸಿ ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ತರುವುದಕ್ಕೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಘಟಕವಾರು ಮೌಲ್ಯಾಧಾರಿತ ಪದ್ಧತಿ (ಯುಎವಿ) ಆಧರಿಸಿ ಆಸ್ತಿ ತೆರಿಗೆ ಬದಲು ಇದೀಗ ಬಿಬಿಎಂಪಿಯು ಮಾರ್ಗಸೂಚಿ ದರ ಆಧರಿಸಿ ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ತರುವುದಕ್ಕೆ ಮುಂದಾಗಿದೆ.

ಈ ಕುರಿತು ಮಂಗಳವಾರ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು, ನಿವೇಶನ, ವಸತಿ ಕಟ್ಟಡ, ವಾಣಿಜ್ಯ ಕಟ್ಟಡ, ಸ್ಟಾರ್‌ ಹೋಟೆಲ್‌, ಕೈಗಾರಿಕೆ ಸೇರಿದಂತೆ ಪ್ರತ್ಯೇಕ ದರ ನಿಗದಿ ಪಡಿಸಿದೆ.

ಈ ಕುರಿತು ಆಕ್ಷೇಪಣೆಗಳಿದ್ದರೆ 15 ದಿಗಳಲ್ಲಿ ಬಿಬಿಎಂಪಿಗೆ ಸಲ್ಲಿಕೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಕೋರಿದ್ದಾರೆ.

ಬಿಬಿಎಂಪಿ ನಗರದಲ್ಲಿ ಎ ಯಿಂದ ಎಫ್‌ ವರೆಗಿನ 6 ವಲಯಗಳನ್ನು ರೂಪಿಸಿಕೊಂಡಿದ್ದು, ಘಟಕವಾರು ಮೌಲ್ಯಾಧಾರಿತ ಪದ್ಧತಿದಲ್ಲಿ ಆಯಾ ವಲಯದ ಆಸ್ತಿಗಳಿಗೆ ದರ ನಿಗದಿ ಪಡಿಸಿದೆ. 

ಅದಕ್ಕೆ ಅನುಗುಣವಾಗಿ ಆಸ್ತಿ ತೆರಿಗೆ ನಿಗದಿಪಡಿಸಿ ವಸೂಲಿ ಮಾಡುತ್ತಿದೆ. ಇನ್ನು ಮುಂದೆ ನಿವೇಶನಗಳಿಗೆ ಉಪ ನೋಂದಣಿ ಇಲಾಖೆ ನಿಗದಿ ಪಡಿಸಿರುವ ಮಾರ್ಗಸೂಚಿದರ, ಕಟ್ಟಡಗಳಿಗೆ ಲೋಕೋಪಯೋಗಿ ಇಲಾಖೆಯ ದರ ಆಧಾರಿಸಿ ದರ ನಿಗದಿ ಪಡಿಸಿದ್ದು, ಆ ಪ್ರಕಾರ ಆಸ್ತಿ ತೆರಿಗೆ ವಿಧಿಸುವುದಕ್ಕೆ ಮುಂದಾಗಿದೆ.

ಖಾಲಿ ನಿವೇಶನಕ್ಕೆ ವಿಧಿಸುವ ತೆರಿಗೆ: ನಿವೇಶನ ಸ್ವಂತ ಬಳಕೆಗೆ ಶೇ. 0.1ರಷ್ಟು ತೆರಿಗೆ ವಿಧಿಸಲಾಗುತ್ತದೆ. ಖಾಲಿ ನಿವೇಶನಕ್ಕೆ ಶೇ. 0.025ರಷ್ಟು, ಬಾಡಿಗೆ ನೀಡಲಾದ ನಿವೇಶನಕ್ಕೆ ಶೇ. 0.2ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಸ್ವಂತ ಕಟ್ಟಡಕ್ಕೆ ವಿಧಿಸುವ ತೆರಿಗೆ: ಕಟ್ಟಡಗಳನ್ನು ಸ್ವಂತ ವಾಸ ಕಟ್ಟಡ, ವಾಸದ ಬಾಡಿಗೆ ಕಟ್ಟಡ ಎಂದು ಎರಡು ರೀತಿ ವರ್ಗೀಕರಣ ಮಾಡಿಕೊಳ್ಳಲಾಗಿದೆ. ಪ್ರತಿ ಚದರ ಅಡಿ 1500 ಕಟ್ಟಡ ಮೌಲ್ಯ ನಿಗದಿ ಪಡಿಸಲಾಗಿದೆ.

 ಸ್ವಂತ ಬಳಕೆಯ ವಾಸ ಕಟ್ಟಡಕ್ಕೆ ಶೇ0.1 ರಷ್ಟು ಹಾಗೂ ಬಾಡಿಗೆ ನೀಡಲಾದ ಕಟ್ಟಡಕ್ಕೆ ಶೇ. 0.2ರಷ್ಟು ತೆರಿಗೆ ವಿಧಿಸಲಾಗುತ್ತದೆ.

ವಾಣಿಜ್ಯ ಬಳಕೆ ಕಟ್ಟಡಗಳಿಗೆ ಪ್ರತಿ ಚದರಡಿ ನಿರ್ಮಾಣ ಮೌಲ್ಯವನ್ನು 2 ಸಾವಿರ ರು. ನಿಗದಿ ಪಡಿಸಲಾಗಿದೆ. ಸ್ವಂತ ಬಳಕೆ ಮತ್ತು ಬಾಡಿಗೆ ಎರಡಕ್ಕೂ ಶೇ. 0.5ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಸ್ಟಾರ್‌ ಹೋಟೆಲ್‌ ಕಟ್ಟಡ ನಿರ್ಮಾಣ ಮೌಲ್ಯವನ್ನು 4 ಸಾವಿರ ರು.ಗೆ ನಿಗದಿ ಪಡಿಸಲಾಗಿದೆ. ಶೇ.0.75 ರಷ್ಟು ಆಸ್ತಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ನಗರದಲ್ಲಿರುವ ವಿವಿಧ ಟೆಲಿಕಾಂ ಸಂಸ್ಥೆಯ ಟವರ್‌ ಗಳಿಗೆ ವಾರ್ಷಿಕವಾಗಿ 20 ಸಾವಿರ ರು. ವಾರ್ಷಿಕ ಶುಲ್ಕವನ್ನು ನಿಗದಿ ಪಡಿಸಲಾಗಿದೆ. 

ಉಳಿದಂತೆ ವಾಹನ ಪಾರ್ಕಿಂಗ್‌ ಪ್ರದೇಶಕ್ಕೆ ಶೇ. 50ರಷ್ಟು ವಿನಾಯಿತಿ ನೀಡಲಾಗುವುದು. ಪ್ರತಿ ವರ್ಷ ಶೇ. 5ರಷ್ಟು ಆಸ್ತಿ ತೆರಿಗೆ ಹೆಚ್ಚಳಕ್ಕೆ ಅವಕಾಶ ನೀಡುವುದು ಸೇರಿದಂತೆ ಮೊದಲಾದ ಅಂಶಗಳು ಕರಡು ಅಧಿಸೂಚನೆಯಲ್ಲಿದೆ.

ಶೇ.20 ರಷ್ಟು ಮಾತ್ರ ಹೆಚ್ಚಳ: ಹೊಸ ಆಸ್ತಿ ತೆರಿಗೆ ಪದ್ಧತಿಯಿಂದ ಭಾರೀ ಪ್ರಮಾಣ ಆಸ್ತಿ ತೆರಿಗೆ ಹೆಚ್ಚಳವಾದರೆ, ಅವರಿಂದ ಶೇ.20 ರಷ್ಟು ಮಾತ್ರ ಹೆಚ್ಚುವರಿ ತೆರಿಗೆ ವಸೂಲಿ ಮಾಡಲಾಗುವುದು ಎಂದು ತಿಳಿಸಲಾಗಿದೆ. 

ಉದಾಹರಣೆಗೆ ಈವರೆಗೆ 100 ರು ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದ ಮಾಲೀಕರ ಹೊಸ ಪದ್ಧತಿಯಿಂದ 130 ರು. ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆ ಪಾವತಿಸಬೇಕಾದರೆ ಆ ಮಾಲೀಕರಿಂದ ಶೇ.20 ರಷ್ಟು ಹೆಚ್ಚುವರಿ ಸೇರಿಸಿ 120 ರು. ಪಡೆಯಲಾಗುವುದು ಎಂದು ತಿಳಿಸಲಾಗಿದೆ. 

ಒಂದು ವೇಳೆ ಆಸ್ತಿ ತೆರಿಗೆ ಮೊತ್ತವು ಹಾಲಿ ಪಾವತಿ ಮೊತ್ತಕ್ಕಿಂತ ಕಡಿಮೆಯಾದರೆ, ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಆಸ್ತಿ ತೆರಿಗೆ ಲೆಕ್ಕ ಹಾಕುವ ವಿಧಾನ

Share this article