ಲೋಕಾಯುಕ್ತ ಕಾಯ್ದೆಯ ಬಗ್ಗೆ ಅರಿತುಕೊಳ್ಳಿಕೊಳ್ಳಿ: ನ್ಯಾಯಾಧೀಶ ಸಿದ್ದರಾಮ

KannadaprabhaNewsNetwork | Published : Jul 8, 2024 12:41 AM

ಸಾರಾಂಶ

ಪ್ರತಿಯೊಬ್ಬರು ಲೋಕಾಯುಕ್ತ ಕಾಯ್ದೆಯ ಬಗ್ಗೆ ಅರಿತುಕೊಳ್ಳಬೇಕು. ಯುವಕರು ವಿದ್ಯಾವಂತರಾದರೆ ಸಾಲದು, ಅದರ ಜೊತೆಯಲ್ಲಿ ಕನಿಷ್ಠ ಕಾನೂನು ಜ್ಞಾನ ಪಡೆದುಕೊಂಡರೆ ಶೋಷಣೆಯಿಂದ ಮುಕ್ತಿ ಹೊಂದಲು ಸಾಧ್ಯ.

ಕನ್ನಡಪ್ರಭ ವಾರ್ತೆ ಶಹಾಪುರ

ಪ್ರತಿಯೊಬ್ಬರು ಲೋಕಾಯುಕ್ತ ಕಾಯ್ದೆಯ ಬಗ್ಗೆ ಅರಿತುಕೊಳ್ಳಬೇಕು. ಯುವಕರು ವಿದ್ಯಾವಂತರಾದರೆ ಸಾಲದು, ಅದರ ಜೊತೆಯಲ್ಲಿ ಕನಿಷ್ಠ ಕಾನೂನು ಜ್ಞಾನ ಪಡೆದುಕೊಂಡರೆ ಶೋಷಣೆಯಿಂದ ಮುಕ್ತಿ ಹೊಂದಲು ಸಾಧ್ಯ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ನ್ಯಾಯಾಧೀಶ ಸಿದ್ದರಾಮ ಟಿ.ಪಿ. ಹೇಳಿದರು.

ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲೋಕಾಯುಕ್ತ ಕಾಯ್ದೆ ಹಾಗೂ ಲಂಚ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಾಯುಕ್ತವು ರಾಜ್ಯ ಮಟ್ಟದ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಸಂಸ್ಥೆಯಾಗಿದೆ. ಅದು ಪ್ರತಿ ರಾಜ್ಯದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ತನ್ನದೇ ಆದ ಅಧಿಕಾರಗಳು, ನ್ಯಾಯವ್ಯಾಪ್ತಿ ಮತ್ತು ಕಾರ್ಯವಿಧಾನಗಳನ್ನು ಹೊಂದಿದೆ. ಲಂಚ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಸೇರಿದಂತೆ ಭ್ರಷ್ಟಾಚಾರ ಮತ್ತು ದುರಾಡಳಿತದ ದೂರುಗಳ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಇದೆ ಎಂದು ತಿಳಿಸಿದರು.

ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಇತರ ಅಧಿಕಾರಿಗಳು ಸೇರಿದಂತೆ ಯಾವುದೇ ಸಾರ್ವಜನಿಕ ನೌಕರನ ವಿರುದ್ಧದ ದೂರುಗಳನ್ನು ತನಿಖೆ ಮಾಡುವ ಅಧಿಕಾರ ಲೋಕಾಯುಕ್ತಕ್ಕೆ ಇದೆ. ಸಾಕ್ಷಿಗಳನ್ನು ಕರೆಯಿಸಿಕೊಳ್ಳುವ ದಾಖಲೆಗಳನ್ನು ಕೋರುವ ಮತ್ತು ಅದರ ತನಿಖೆಗಳನ್ನು ಕೈಗೊಳ್ಳಲು ಅಗತ್ಯವಿದ್ದರೆ ಶೋಧನೆ ಮತ್ತು ವಶಪಡಿಸಿಕೊಳ್ಳುವ ಅಧಿಕಾರವನ್ನು ಹೊಂದಿದೆ. ಯಾವುದೇ ಅರ್ಜಿ, ದೂರು ಹಾಗೂ ಸಾರ್ವಜನಿಕ ಸೇವೆಗಳು ನಿಗದಿತ ಅವಧಿಯಲ್ಲಿ ಒದಗಿಸಬೇಕು. ಲಂಚವನ್ನು ಯಾವುದೇ ಕಾರಣಕ್ಕೆ ನೀಡುವುದು ಅಪರಾಧವಾಗಿದೆ. ಇದನ್ನು ಮೆಟ್ಟಿ ನಿಲ್ಲಬೇಕು ಎಂದರೆ ಕಾನೂನು ತಿಳುವಳಿಕೆ ಅಗತ್ಯವಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ, ಸಮಾಜಕ್ಕೆ ದೊಡ್ಡ ಪಿಡುಗಾಗಿರುವ ಭ್ರಷ್ಟಾಚಾರದ ನಿರ್ಮೂಲನೆಗೆ ಪ್ರತಿಯೊಬ್ಬರು ಕೈಜೋಡಿಸುವ ಅವಶ್ಯಕತೆಯಿದೆ. 2013ರಲ್ಲಿ ಗ್ಲೋಬಲ್ ಸಂಸ್ಥೆ ವರದಿ ಪ್ರಕಾರ ಜಗತ್ತಿನಲ್ಲಿ ಇತರೆ ಕಡೆ ಇರುವ ಭ್ರಷ್ಟಾಚಾರದ ದುಪ್ಪಟ್ಟು ನಮ್ಮ ದೇಶದಲ್ಲಿದೆ ಎನ್ನುವ ಆತಂಕಕಾರಿ ಸಂಗತಿ ಹೊರಹಾಕಿದೆ. ಭ್ರಷ್ಟಾಚಾರದಲ್ಲಿ ಏಷ್ಯಾದಲ್ಲೆ ನಮ್ಮ ದೇಶ ಪ್ರಥಮ ಸ್ಥಾನದಲ್ಲಿದೆ. ಒಂದು ಮಾಹಿತಿ ಪ್ರಕಾರ ಪೊಲೀಸ್ ಇಲಾಖೆ ಶೇ.60, ಕಂದಾಯ ಇಲಾಖೆ ಶೇ.61 ಮತ್ತು ಶಿಕ್ಷಣ ಇಲಾಖೆಯಲ್ಲಿ ಶೇ.48 ರಷ್ಟು ಭ್ರಷ್ಟಾಚಾರವಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಪಣತೊಡಬೇಕಿದೆ ಎಂದರು.

2023 ಜುಲೈ 22ರಂದು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಭ್ರಷ್ಟಾಚಾರದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಉದಾಹರಣೆ ಇದೆ. ತಪ್ಪು ಯಾರೇ ಮಾಡಲಿ ಅದಕ್ಕೆ ತಕ್ಕ ಶಿಕ್ಷೆ ಆಗುತ್ತದೆ. ಸೇವಾ ನಿವೃತ್ತಿ ದಿನವೇ ಜಿಲ್ಲಾ ನ್ಯಾಯಾಧೀಶರೊಬ್ಬರು ಭ್ರಷ್ಟಾಚಾರದ ಆರೋಪದಲ್ಲಿ ಸೇವೆಯಿಂದ ಅಮಾನತುಗೊಳಿಸಲಾಯಿತು ಎಂದು ಉದಾಹರಣೆ ಮೂಲಕ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಅಯ್ಯಣ್ಣ ಇನಾಮದಾರ, ಎಪಿಪಿ ದಿವ್ಯಾರಾಣಿ ನಾಯಕ ಸುರಪುರ, ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ, ಕಾರ್ಯದರ್ಶಿ ಅಮರೇಶ ಇಟಗಿ, ಪಿಎಸ್ಐ ಸೋಮಲಿಂಗಪ್ಪ ಇತರರಿದ್ದರು.

---

2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ 2613 ಅಭ್ಯರ್ಥಿಗಳಲ್ಲಿ 581 ಅಭ್ಯರ್ಥಿಗಳು ಅಪರಾಧ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. 404 ಅಭ್ಯರ್ಥಿಗಳ ಮೇಲೆ ಗಂಭೀರ ಆರೋಪ ಹೊತ್ತಿದ್ದಾರೆ. ಅಲ್ಲದೆ 49 ಜನ ಮಹಿಳಾ ಅಭ್ಯರ್ಥಿಗಳ ಮೇಲೆ ಅಪರಾಧ ಪ್ರಕರಣ ದಾಖಲಾಗಿವೆ. 35 ಅಭ್ಯರ್ಥಿಗಳ ಮೇಲೆ ಕೊಲೆ ಪ್ರಕರಣದ ಆರೋಪಗಳಿವೆ. ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Share this article