ಡೆಂಘೀ ಬಗ್ಗೆ ಮುಂಜಾಗ್ರತೆ ಇರಲಿ

KannadaprabhaNewsNetwork | Published : May 18, 2024 12:31 AM

ಸಾರಾಂಶ

ಡೆಂಘೀ ಜ್ವರದ ಅಪಾಯಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗ ಲಕ್ಷಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶದಲ್ಲಿ ಪ್ರತಿ ವರ್ಷ ‘ಮೇ 16ರಂದು ರಾಷ್ಟ್ರೀಯ ಡೆಂಘೀ ದಿನ‘ ಎಂದು ಆಚರಿಸಲಾಗುತ್ತದೆ. ಡೆಂಘೀ ಜ್ವರ ಸೊಳ್ಳೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಮುಂಗಾರು ಮಳೆ ಪ್ರಾರಂಭವಾಗಿದೆ. ಹಳ್ಳ-ಕೊಳ್ಳಗಳಲ್ಲಿ ನೀರು ನಿಲ್ಲುತ್ತದೆ. ಹೆಚ್ಚಾಗಿ ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎ.ಎಸ್.ತೇರದಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಾಲಯ ವಿಜಯಪುರ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಶ್ರೀ ಸಿದ್ದಗಂಗಾ ಪ್ಯಾರಾ ಮೆಡಿಕಲ್ ಕಾಲೇಜ್ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಘೀ ದಿನ ಆಚರಣೆಯಲ್ಲಿ ಅವರು ಮಾತನಾಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಛಲವಾದಿ ಮಾತನಾಡಿ, ಡೆಂಘೀ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಬಹಳ ಪ್ರಮುಖವಾಗಿದೆ. ಡೆಂಘೀ ಜ್ವರದ ಲಕ್ಷಣಗಳಾದ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ವಿಪರೀತ ರಕ್ತಸ್ರಾವ, ಒಸಡುಗಳಲ್ಲಿ ರಕ್ತಸ್ರಾವ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಹಾಗೂ ಎಲ್ಲಾ ಸೇವೆಗಳು ಉಚಿತವಾಗಿರುತ್ತದೆ ಎಂದು ತಿಳಿಸಿದರು.

ತಾಲೂಕು ವ್ಹಿ ಬಿ ಡಿ ಮೇಲ್ವಿಚಾರಕ ಎಸ್ ಸಿ ರುದ್ರವಾಡಿ ಮಾತನಾಡಿ, ಡೆಂಘೀ ಜ್ವರಕ್ಕೆ ಬ್ರೆಕ್ ಬೋನ್ ಫಿವರ್ ಎಂದು ಕರೆಯುತ್ತಾರೆ. ಅಷ್ಟು ಜ್ವರದ ತೀವ್ರತೆ ಇರುತ್ತದೆ. ಈ ರೋಗ ನಿಯಂತ್ರಣಕ್ಕೆ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಕಾರಣ ಮನೆಯಲ್ಲಿರುವ ತೊಟ್ಟಿ, ಬ್ಯಾರೇಲ್, ಡ್ರಂಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು ಪುನಃ ನೀರು ತುಂಬಿಸುವುದು ಮತ್ತು ತೊಟ್ಟಿ, ಬ್ಯಾರೇಲ್, ಡ್ರಂಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತ ಮುತ್ತ ಬೀಸಾಡಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ಚೆರಮನ್‌ ಮಹಾಂತಮ್ಮ ಎಸ್ ನಾಶಿ, ಕಾಲೇಜಿನ ಉಪನ್ಯಾಸಕ ಪ್ರಶಾಂತ್ ಕಡಿ, ಐಶ್ವರ್ಯ ಬಿ, ಮುನಿರಬೇಗಂ ನದಾಫ್, ಹಿನಾಕೌಸರ್ ಸುತಾರ, ಮುಕ್ತರಹಮ್ಮದ್ ಬಾವೂರ, ಆರೋಗ್ಯ ಇಲಾಖೆಯ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಎಸ್ ಸಿ ಮಾನಕರ್, ಎಸ್ ಆರ್ ಸಜ್ಜನ, ಇಸ್ಮಾಯಿಲ್ ವಾಲಿಕಾರ ಹಾಗೂ ಕಾಲೇಜಿನ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು. ನಗರ ಆರೋಗ್ಯ ನಿರೀಕ್ಷಣಾಧಿಕಾರಿ ನಿರೂಪಿಸಿದರು. ಎಂ ಎಸ್ ಗೌಡರ ವಂದಿಸಿದರು.

Share this article