ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಈ ಬಾರಿ ಕ್ಷೇತ್ರದಲ್ಲಿ ವಿಪರೀತ ಮಳೆ ಸುರಿದಿದ್ದು, ಕೃಷ್ಣಾ ನದಿ ಸೇರಿದಂತೆ ಗ್ರಾಮಗಳಲ್ಲಿ ಜನಜೀವನಕ್ಕೆ ಮತ್ತು ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆಯಾ ಗ್ರಾಪಂ ಪಿಡಿಒಗಳು ಗ್ರಾಮಗಳಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ತೋರಿಬಾರದು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ತಾಪಂನಲ್ಲಿ ನಡೆದ ಮುಂಗಾರು ಮಳೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಪೋರ್ಸ್ ಹಾಗೂ ವಿಪತ್ತು ನಿರ್ವಹಣಾ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ಉತ್ತಮ ಆದಾಯದ ಕನಸು ಕಂಡಿದ್ದರು. ಆದರೆ ವಿಪರೀತ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಯಾವುದೇ ಕಾರಣಕ್ಕೂ ರೈತರಿಗೆ, ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಪ್ರತಿ ರೈತನ ಹೊಲಗಳಿಗೆ ತೆರಳಿ ಬೆಳೆ ನಷ್ಟದ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು. ಇದರಿಂದ ಪರಿಹಾರದ ಜತೆಗೆ ಆರ್ಥಿಕ ನೆರವು ನೀಡಲು ಅನುಕೂಲವಾಗುತ್ತದೆ ಎಂದರು.ಇದಕ್ಕೆ ಉತ್ತರಿಸಿದ ತಾಲೂಕು ಕೃಷಿ ಅಧಿಕಾರಿ ಸುರೇಶ ಬಾವಿಕಟ್ಟಿ ಮಾತನಾಡಿ, ಸದ್ಯ ಇಲ್ಲಿತನಕ ಯಾವುದೇ ಹಾನಿ ಬಗ್ಗೆ ವರದಿ ಕಂಡುಬಂದಿಲ್ಲ. ಇನ್ನು ಮುಂದೆ ಮಳೆ ಮುಂದುವರಿದರೆ ಬೆಳೆ ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಲದಕ್ಕೂ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದರು.ಕ್ಷೇತ್ರದಲ್ಲಿ ಎಷ್ಟು ಶಾಲೆಗಳು ದುರಸ್ಥಿಯಲ್ಲಿವೆ, ಹೊಸ ಕಟ್ಟಡಗಳ ನಿರ್ಮಿಸಬೇಕು ಎಂಬದರ ಬಗ್ಗೆ ಮಾಹಿತಿ ತಿಳಿಸಿ ಎಂದು ಬಿಇಒ ಬಿ.ಎಸ್.ಸಾವಳಗಿಗೆ ಪ್ರಶ್ನಿಸಿದರು. 1741 ಒಟ್ಟು ಕೊಠಡಿಗಳು ಇದ್ದು ಇದರಲ್ಲಿ 774 ಕೊಠಡಿಗಳು ಮಳೆಯಿಂದ ಸೋರುತ್ತವೆ. 321 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ತುರ್ತು ದುರಸ್ಥಿ ಕೈಗೊಳ್ಳಬೇಕಿದೆ. 436 ಕೊಠಡಿಗಳಿಗೆ ಸಣ್ಣಪುಟ್ಟ ದುರಸ್ಥಿ ಕಾಮಗಾರಿ ಕೈಗೊಳ್ಳಬೇಕಿದೆ. 234 ಕೊಠಡಿಗಳ ಜತೆಗೆ ಶೌಚಾಲಯ, ಆಟದ ಮೈದಾನ ಸೇರಿದಂತೆ ಇತರೆ ಕೊಠಡಿಗಳನ್ನು ನಿರ್ಮಿಸಬೇಕಿದೆ ಎಂದರು.ಕ್ಷೇತ್ರದಲ್ಲಿ ಜೆಜೆಎಂ ಸ್ಕೀಂ ಸಂಪೂರ್ಣ ಕಳಪೆ ಮಟ್ಟದಿಂದ ನಿರ್ಮಿಸಿದ್ದು, ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ಮಿಸಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ ಎಂದು ಪಂಚಾಯಿತಿ ಪಿಡಿಒಯೊಬ್ಬರು ಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಶಾಸಕ ನಾಡಗೌಡ ಅವರು ಏನು ಮಾಡೋದು ಕಾಮಗಾರಿ ಮುಗಿಯದೇ ಪಿಡಿಒಗಳು ಎನ್‌ಒಸಿ ಕೊಟ್ಟಿದ್ದಾರೆ. ಪುನಃ ಕಾಮಗಾರಿ ನಡೆಸುವ ಮೂಲಕ ಜನರಿಗೆ ಅನುಕೂಲವಾಗುವಂತೆ ಮಾಡಿ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಆರ್.ಎಚ್.ಹಿರೇಗೌಡರಗೆ ಸಲಹೆ ನೀಡಿದರು.ಪಟ್ಟಣದ ವಾಲ್ಮೀಕ ನಗರದ ಅಂಬೇಡ್ಕರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಢವಳಗಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ರಕ್ಕಸಗಿಯ ಬಾಲಕರ ವಸತಿ ನಿಲಯ ಹಾಗೂ ತಾಳಿಕೋಟೆ ತಾಲೂಕಿನ ಕೊಣ್ಣೂರ ಮತ್ತು ಕೊಡಗಾನೂರ ಗ್ರಾಮಗಳ ಬಾಲಕರ ವಸತಿ ನಿಲಯಗಳಲ್ಲಿ ಮಳೆಯಾದಾಗ ಮೇಲ್ಚಾವಣಿಗಳು ಸೋರುತ್ತಿದ್ದು, ಮಕ್ಕಳಿಗೆ ತೊಂದರೆಯಾಗುತ್ತಿದೆ. ಇವುಗಳನ್ನು ದುರಸ್ಥಿ ಮಾಡಿಕೊಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಸಂತಿ ಮಠ ವಿನಂತಿಸಿದರು. ದುರಸ್ಥಿಗೊಳಿಸಲು ತಾಪಂ ಇಒ ವೆಂಕಟೇಶ ವಂದಾಲ ಅವರಿಗೆ ತಾಲೂಕಿನ ಎಲ್ಲ ಅಂಗನವಾಡಿಗಳಲ್ಲಿ ಮಕ್ಕಳಿಗೆ ಆಹಾರ ಧಾನ್ಯಗಳನ್ನು ನೀಡುವಲ್ಲಿ ಮತ್ತು ಮಳೆಯಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಡಿಪಿಒ ಶಿವಮೂರ್ತಿ ಕುಂಬಾರ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ಅಪ್ಪಾಜಿ ನಾಡಗೌಡ ಸೂಚಿಸಿದರು.ಈ ಸಂದರ್ಭದಲ್ಲಿ ತಾಲೂಕಾ ಸರ್ಕಾರಿ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ತಾಳಿಕೋಟಿ ತಾಪಂ ಇಒ ಆರ್.ಎಸ್.ಹಿರೇಗೌಡ್ರು, ತಹಸೀಲ್ದಾರ್ ಕೀರ್ತಿ ಚಾಲಕ್, ತಾಪಂ ಯೋಜನಾಧಿಕಾರಿ ಖುಬಾಸಿಂಗ್ ಜಾಧವ್, ಸಹಾಯಕ ನಿರ್ದೆಶಕ ಪಿ.ಎಸ್.ಕಸನಕ್ಕಿ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಎಲ್ಲ ಗ್ರಾಪಂ ಪಿಡಿಒಗಳು ಇದ್ದರು.