ಕೊಟ್ಟೂರು: ಮಾರಕವಾಗಿ ಪರಿಣಮಿಸಿದ ಡೆಂಘೀ ಜ್ವರ ಕೊಟ್ಟೂರು, ಕೂಡ್ಲಿಗಿ ತಾಲೂಕಿಗೆ ಪ್ರವೇಶಿಸದಂತೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ಈಗಿನಿಂದಲೇ ಪೂರ್ವ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಮಾಡಿಕೊಳ್ಳಬೇಕು ಎಂದು ಶಾಸಕರಾದ ಕೆ.ನೇಮಿರಾಜ ನಾಯ್ಕ, ಡಾ.ಎನ್.ಟಿ. ಶ್ರೀನಿವಾಸ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸೋಮವಾರ ಕೊಟ್ಟೂರು ತಾಪಂನ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿಲಾಗಿದ ಕೊಟ್ಟೂರು ತಾಲೂಕು ಕೆಡಿಪಿ ಸಭೆಯಲ್ಲಿ ಶಾಸಕರು ಮಾತನಾಡಿ, ಡೆಂಘೀ ಜ್ವರ ಹರಡುವ ಸ್ಥಳಗಳನ್ನು ಕೂಡಲೇ ನಿರ್ನಾಮಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.ಶಾಸಕ ಶ್ರೀನಿವಾಸ ಮಾತನಾಡಿ, ಈಡಿಸ್ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳಾದ ಕುಡಿಯುವ ನೀರಿನ ಡ್ರಮ್, ಗಚ್ಚು, ಸಂಪು, ಸಿಂಟೆಕ್ಸ್‌ಗಳನ್ನು ಐದು ದಿನಕ್ಕೂಮ್ಮೆ ಸ್ವಚ್ಛವಾಗಿ ತೊಳೆದಿಟ್ಟುಕೊಳ್ಳುವಂತೆ ಜನತಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲಕುಮಾರ್ ಸಭೆಯಲ್ಲಿ ಕೊಟ್ಟೂರು ತಾಲೂಕಿನಲ್ಲಿ ಇದುವರೆಗೆ 77 ಮಿ.ಮೀ. ಮಳೆ ಸುರಿದಿದೆ. 49 ಮಿ.ಮೀ. ಮಳೆ ಕೊರತೆ ಉಂಟಾಗಿದ್ದು, ಹೆಚ್ಚಿನ ಮಳೆ ಬಂದಲ್ಲಿ ತಾಲೂಕಿನಲ್ಲಿ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಶಾಸಕ ಕೆ.ನೇಮಿರಾಜ ನಾಯ್ಕ್ ಮಾತನಾಡಿ, ರೈತರಿಗೆ ಬಿತ್ತನೆಗೆ ಅನುಕೂಲವಾಗಲು ಎಲ್ಲ ಬಗೆಯ ಬೀಜಗಳು ಕೂಡಲೇ ಸಿಗುವಂತೆ ದಾಸ್ತಾನಿರಿಸಿಕೊಳ್ಳಬೇಕು. ರೈತರು ಕೇಳುವ ರಸಗೊಬ್ಬರಗಳನ್ನು ಸರ್ಕಾರ ನಿಗದಿಗೊಳಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಅಂಗಡಿಯವರಿಗೆ ಎಚ್ಚರಿಕೆ ನೀಡಬೇಕು ಎಂದರು.ಯುರಿಯಾ ಗೊಬ್ಬರ ಖರೀದಿಸಲು ಬರುವ ರೈತರಿಗೆ ಅದರ ಜೊತೆಗೆ ಬೇರೆಯೊಂದು ರಸಗೊಬ್ಬರ ತೆಗೆದುಕೊಳ್ಳುವಂತೆ ಒತ್ತಾಯ ಮಾಡುವ ಅಂಗಡಿಯವರ ವಿರುದ್ಧ ಕೃಷಿ ಅಧಿಕಾರಿಗಳು ಕ್ರಮ ಕೈಗೂಳ್ಳಬೇಕು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಅದರಲ್ಲೂ ಎಸ್ಸಿ, ಎಸ್ಟಿ ಹಾಸ್ಟಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೂಳಬೇಕೆಂದು ಸಹಾಯಕ ನಿರ್ದೇಶಕ ಜಗದೀಶ್ ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಶಾಸಕರು ಸೂಚಿಸಿದರು.ತಹಸೀಲ್ದಾರ್‌ಗೆ ಪ್ರತ್ಯೇಕ ಆಸೀನ:ಕೊಟ್ಟೂರು ತಾಪಂ ಕೆಡಿಪಿ ಸಭೆಯಲ್ಲಿ ತಹಶೀಲ್ದಾರ್ ಅಮರೇಶ್ ಜಿ.ಕೆ ಆಗಮಿಸಿ ವೇದಿಕೆಯ ಕೆಳ ಭಾಗದಲ್ಲಿನ ಆಸನದಲ್ಲಿ ಆಸೀನರಾಗಿದ್ದರು ಒಂದು ತಾಸು ಸಭೆ ನಡೆದು ಮುಂದುವರಿಯುತ್ತಿದಂತೆಯೇ ಶಾಸಕ ಕೆ.ನೇಮಿ ರಾಜ ನಾಯ್ಕ್ ಗಮನಿಸಿ ಕೂಡಲೇ ಕೆಳಗಡೆ ಆಸೀನರಾಗಿದ್ದ ತಹಶೀಲ್ದಾರರನ್ನು ವೇದಿಕೆ ಮೇಲೆ ಬಂದು ಆಸೀನರಾಗಲು ಸೂಚಿಸಿದರು. ನಂತರ ಪ್ರತ್ಯೇಕ ಆಸನವನ್ನು ತಹಶೀಲ್ದಾರಗೆ ತರಿಸಿ ವೇದಿಕೆಯಲ್ಲಿ ತಮ್ಮೊಂದಿಗೆ ಆಸೀನರಾಗಲು ಅನುವು ಮಾಡಿಕೊಟ್ಟರು.
ತಾಪಂ ಆಡಳಿತ ಅಧಿಕಾರಿ ಶರಣಪ್ಪ ಮುದಗಲ್, ತಹಶೀಲ್ದಾರ್ ಅಮರೇಶ್ ಜಿ.ಕೆ., ತಾಪಂ ಇಒ ವೈ.ರವಿಕುಮಾರ್ ಇದ್ದರು.ಸಹಾಯಕ ನಿರ್ದೇಶಕ ಬೆಣ್ಣಿ ವಿಜಯಕುಮಾರ್ ಸ್ವಾಗತಿಸಿದರು.