ಕುರುಗೋಡು: ತಾಲೂಕಿನಲ್ಲಿ ವೈರಾಣು ಜ್ವರ ಹೆಚ್ಚು ಜನರನ್ನು ಬಾಧಿಸುತ್ತಿದೆ. ಅದು ಉಲ್ಬಣಗೊಳ್ಳದಂತೆ ಮುಂಜಾಗ್ರತೆ ವಹಿಸಬೇಕು. ಜನರಲ್ಲಿ ರೋಗನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ವಾಗೀಶ ಶಿವಾಚಾರ್ಯ ಸೂಚಿಸಿದರು.
ಇಲ್ಲಿನ ತಾಪಂ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆ ಪ್ರಕರಣಗಳನ್ನು ಬಳ್ಳಾರಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ ಎನ್ನುವ ಬಗ್ಗೆ ಚರ್ಚಿಸಿದ ಅವರು, ಈ ಬಗ್ಗೆ ಗಮನಹರಿಸಬೇಕು ಮತ್ತು ಚಿಕ್ಕಮಕ್ಕಳ ಆರೈಕೆಗಾಗಿ ಎನ್‌ಐಸಿಯು ವಾರ್ಡ್ ಪ್ರಾರಂಭಿಸುವಂತೆ ಸೂಚಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಮಂಜುನಾಥ, ಪ್ರಸವಪೂರ್ವ ಹೆರಿಗೆ ಮತ್ತು ಗಂಡಾಂತರ ಹೆರಿಗೆ ಎಂದು ಗುರುತಿಸಿದವರನ್ನು ಮಾತ್ರ ಬಳ್ಳಾರಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಉಳಿದಂತೆ ತಿಂಗಳಿಗೆ ಕನಿಷ್ಠ ೫೦ಕ್ಕೂ ಹೆಚ್ಚು ಹೆರಿಗೆ ಮಾಡಲಾಗುತ್ತದೆ. ಪ್ರಸ್ತುತ ೩೦ ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರ. ನಿತ್ಯ ೭೦ಕ್ಕೂ ಅಧಿಕ ಒಳರೋಗಿಗಳು ದಾಖಲಾಗುತ್ತಿದ್ದಾರೆ. ೭೦೦ಕ್ಕೂ ಅಧಿಕ ಹೊರರೋಗಿಗಳು ಬರುತ್ತಿದ್ದಾರೆ. ನಿರ್ಮಾಣ ಹಂತದಲ್ಲಿರುವ ೧೦೦ ಹಾಸಿಗೆ ಆಸ್ಪತ್ರೆ ಪ್ರಾರಂಭಗೊಂಡ ಆನಂತರ ಎನ್‌ಐಸಿಯು ವಾರ್ಡ್ ಪ್ರಾರಂಭಿಸಲಾಗುವುದು ಎಂದರು.ಕೃಷಿ ಇಲಾಖೆಯ ಮಾಹಿತಿ ಪಡೆದ ಅವರು, ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಯೂರಿಯಾ ಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಬೆಳೆ ವಿಮೆ ಸೇರಿದಂತೆ ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಪ್ರಚಾರ ನಡೆಸಬೇಕು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗರ್ಜೆಪ್ಪ, ಈ ವರ್ಷ ಮೆಕ್ಕೆಜೋಳದ ಬೆಳೆ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಬೇಡಿಕೆ ಪ್ರಮಾಣದಲ್ಲಿ ದಾಸ್ತಾನು ಲಭ್ಯವಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಾರ ಸಂಘಗಳು ಮತ್ತು ವರ್ತಕರು ಸಲ್ಲಿಸಿದ ಬೇಡಿಕೆಯ ಪ್ರಮಾಣದಲ್ಲಿ ಸರಬರಾಜು ಮಾಡಲಾಗಿದೆ. ಬೆಳೆವಿಮೆ ಮಾಡಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ಸಾಲ ಪಡೆಯುವ ಬ್ಯಾಂಕ್‌ಗಳಲ್ಲಿಯೇ ಬೆಳೆ ವಿಮೆ ಕಂತಿನ ಹಣ ಮುರುವಳಿ ಮಾಡಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದು ಮಾಹಿತಿ ನೀಡಿದರು.ತಾಲೂಕು ಶಿಕ್ಷಣ ಇಲಾಖೆ, ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಉಚಿತ ಶೂ ಮತ್ತು ಸಾಕ್ಸ್‌ಗಳನ್ನು ಆದಷ್ಟು ಬೇಗನೆ ವಿತರಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರ ನೀಡಲಾಗಿದೆ. ಶೂ ಮತ್ತು ಸಾಕ್ಸ್ ಸದ್ಯದಲ್ಲಿ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣ ಇಲಾಖೆಯ ವ್ಯವಸ್ಥಾಪಕ ಭುಜಂಗಯ್ಯ ತಿಳಿಸಿದರು.
ಸಿಡಿಪಿಒ ಮೋಹನಕುಮಾರಿ ಮಾತನಾಡಿ, ತಾಲೂಕು ಅಂಗನವಾಡಿ ಕೇಂದ್ರ ಮಾರುತಿ ಕ್ಯಾಂಪ್, ಸಿಂಧಿಗೇರಿ ಕೇಂದ್ರ ಸಿದ್ದಮ್ಮನಹಳ್ಳಿ ಸೇರಿ ಒಟ್ಟು ಏಳು ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಬಂಧಿಸಿದ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಬೇಕಿದೆ ಎಂದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆಗೆ ಸೇರಿದ ವಿಷಯಗಳ ಚರ್ಚೆಯಾದವು.
ಇಒ ಕೆ.ವಿ. ನಿರ್ಮಲಾ, ನರೇಗಾ ಎ.ಡಿ. ಶಿವರಾಮ ರೆಡ್ಡಿ, ಪ್ರಭಾರೆ ಸಹಾಯಕ ನಿರ್ದೇಶಕ ಅನಿಲ್‌ಕುಮಾರ ಇದ್ದರು.