ಕಾರವಾರ: ಜಿಲ್ಲೆಯಲ್ಲಿ ಮಾನ್ಸೂನ್ ಅವಧಿಯಲ್ಲಿ ಕಂಡುಬರುವ ನೆರೆ ಮತ್ತು ಗುಡ್ಡ ಕುಸಿತದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಈಗಿನಿಂದಲೇ ಜಿಲ್ಲಾ, ತಾಲೂಕು ಮತ್ತು ಗ್ರಾಮಮಟ್ಟದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮತ್ತು ನೌಕಾನೆಲೆಯ ಸಮೀಪದ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ಉಂಟಾಗದಂತೆ, ಈ ಭಾಗದಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವ ಕುರಿತಂತೆ, ನೀರು ಹರಿಯುವ ಪ್ರದೇಶದಲ್ಲಿ ಯಾವುದೇ ಅಡೆತಡೆಗಳು ಇಲ್ಲದಂತೆ ಸ್ವಚ್ಛಗೊಳಿಸಬೇಕು. ಬಿಣಗಾ, ಚೆಂಡಿಯಾ, ಅರಗಾ ವ್ಯಾಪ್ತಿಯಲ್ಲಿ ನೀರು ಹರಿಯುವ ನಾಲೆಗಳ ಡ್ರೆಜ್ಜಿಂಗ್ ಮತ್ತು ಅಗಲೀಕರಣ ಕೆಲಸಗಳನ್ನು ಕೈಗೊಳ್ಳಬೇಕು. ಈ ಕಾರ್ಯವನ್ನು ನೌಕಾಪಡೆ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಈ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ನಿರ್ದೇಶನ ನೀಡಿದರು.ಸೀಬರ್ಡ್ ಅಧಿಕಾರಿಗಳು, ನೌಕಾನೆಲೆಯ ಒಳಗೆ ನಿರ್ಮಿಸಲಾಗುತ್ತಿರುವ 3 ಸೇತುವೆಗಳ ಕಾಮಗಾರಿಗಳು ಈಗಾಗಲೇ ಶೇ. 95ರಷ್ಟು ಮುಕ್ತಾಯವಾಗಿದ್ದು, ಇನ್ನೂ ಒಂದು ತಿಂಗಳ ಒಳಗೆ ಸಂಪೂರ್ಣವಾಗಲಿದೆ. ಹೆದ್ದಾರಿ ಮೂಲಕ ಮತ್ತು ಸಮೀಪದ ಜನವಸತಿ ಪ್ರದೇಶಗಳ ಮೂಲಕ ನೌಕಾನೆಲೆ ಒಳಗಿನ ಪ್ರದೇಶದಲ್ಲಿ ಮಳೆ ನೀರು ಹರಿಯಲು ಯಾವುದೇ ಅಡೆತಡೆಗಳು ಇಲ್ಲವೆಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗುವ ಮತ್ತು ಗುಡ್ಡ ಕುಸಿತ ಉಂಟಾಗುವ ಪ್ರದೇಶ ಈಗಾಗಲೇ ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಪತ್ತು ಸಂದರ್ಭದಲ್ಲಿ ತುರ್ತು ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬೇಕಾಗುವ ಮಾನವ ಸಂಪನ್ಮೂಲ, ಯಂತ್ರೋಪಕರಣಗಳು, ವಾಹನಗಳು ಮತ್ತು ರಕ್ಷಣಾ ಉಪಕರಣಗಳ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಈ ಬಗ್ಗೆ ಸಭೆ ನಡೆಸಿ ಪ್ರತಿಯೊಬ್ಬರಿಗೂ ಜವಾಬ್ದಾರಿಯನ್ನು ಹಂಚಿಕೆ ಮಾಡುವಂತೆ ಎಲ್ಲ ತಹಸೀಲ್ದಾರರಿಗೆ ಸೂಚಿಸಿದರು.ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಗುಡ್ಡ ಕುಸಿತ ಪ್ರದೇಶದಲ್ಲಿ ಅತಿಕ್ರಮಿಸಿಕೊಂಡು ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಳೆಗಾಲ ಆರಂಭವಾಗುವ ಮುನ್ನ ಕೈಗೊಳ್ಳಬೇಕು. ಶಿರೂರು ದುರ್ಘಟನೆಯಲ್ಲಿ ಈ ರೀತಿಯ ಮಳಿಗೆ ಇದ್ದುದರಿಂದಲೇ ಮಾನವ ಜೀವ ಹಾನಿಯಾಗಿದೆ. ಬಂದರು ಇಲಾಖೆಯಿಂದ ಹಾರವಾಡ, ಕಾರವಾರ, ಕುಮಟಾ, ಮಾಜಾಳಿಯಲ್ಲಿ ನಡೆಯುತ್ತಿರುವ ಸಮುದ್ರ ಗೋಡೆ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ, ಈ ಬಾರಿ ಆ ಪ್ರದೇಶದಲ್ಲಿ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಅರಣ್ಯ ಪ್ರದೇಶದಲ್ಲಿ ಬೆಂಕಿ ನಿಯಂತ್ರಣ ಮಾಡಲು ಮತ್ತು ಗೇರುಸೊಪ್ಪ ಜಲಾಶಯದಲ್ಲಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಮಾಣೀಕೃತ ಕಾರ್ಯ ವಿಧಾನಗಳ ರಚನೆಯ ಕುರಿತಂತೆ ಚರ್ಚೆ ನಡೆಯಿತು.ಸಿಇಒ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಸೀಬರ್ಡ್ ಅಧಿಕಾರಿಗಳು ಇದ್ದರು.
ಕುಡಿಯುವ ನೀರಿನ ಸಮಸ್ಯೆ: ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಫಲವಾಗಿರುವ ಕೊಳವೆ ಬಾವಿಗಳು ಮತ್ತು ಉಪಯೋಗವಿಲ್ಲದ ತೆರೆದ ಬಾವಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಾರ್ವಜನಿಕರು ಯಾವುದೇ ಅಪಾಯಗಳಿಗೆ ಒಳಗಾಗದ ರೀತಿಯಲ್ಲಿ ಮುಚ್ಚಿರುವ ಕುರಿತಂತೆ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.