ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದ್ದು, ಮಳೆಯಿಂದಾಗುವ ಹಾನಿಯನ್ನು ಹಾಗೂ ಪ್ರಸ್ತುತ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಜೊತೆ ಜೊತೆಗೆ ನಿವಾರಿಸಲು ಜಿಲ್ಲಾಮಟ್ಟದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚನೆಗಳನ್ನು ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಮುಂಗಾರು ಪೂರ್ವ ಸಿದ್ಧತಾ ಕಾರ್ಯಗಳನ್ನು ನಿರ್ವಹಿಸಬೇಕಿದೆ. ಮೇ ತಿಂಗಳ ಆರಂಭದಿಂದಲೇ ಮಳೆ ಪ್ರಮಾಣ ಜಿಲ್ಲೆಯಲ್ಲಿ ಉತ್ತಮವಾಗಿದೆ. ಈವರೆಗೆ 26 ಮಿ.ಮೀ ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, 2 ಮಿ.ಮೀ ಮಳೆಯಾಗಿದೆ. ಶೇ. 93 ರಷ್ಟು ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು, ಮಳೆ ಹಾನಿಗಳನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ತಡೆಗಟ್ಟಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ ಎಂದರು.
55 ಕೋಟಿಗೂ ಹೆಚ್ಚು ಬರ ಪರಿಹಾರ ಪಾವತಿ:2023-24ನೇ ಸಾಲಿನಲ್ಲಿ 9ನೇ ಹಂತದವರೆಗೆ 17,70,69,155 ರು.ಗಳನ್ನು ಬರ ಪರಿಹಾರವಾಗಿ ಜಿಲ್ಲೆಯ 97,278 ರೈತರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆಯ ನಿಯಮಗಳನ್ವಯ ಪಾವತಿಸಲಾಗಿತ್ತು. ಇತ್ತೀಚೆಗೆ 10ನೇ ಹಂತದಲ್ಲಿ 37,33,26,422 ರು.ಗಳನ್ನು ರೈತರ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಒಟ್ಟಾರೆ ಈ ಸಾಲಿನಲ್ಲಿ ಜಿಲ್ಲೆಯ 97 ಸಾವಿರಕ್ಕೂ ಹೆಚ್ಚು ರೈತರಿಗೆ ಒಟ್ಟು 55,03,95,577 ರು.ಗಳನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದರು.
ಬಿತ್ತನೆ ಬೀಜ ವಿತರಣೆ:ಮಳೆ ಆರಂಭವಾದ ಮೇಲೆ ಮೇ ತಿಂಗಳಿನಿಂದ ರಾಗಿ, ಜೋಳ, ತೊಗರಿ, ಶೇಂಗಾ ಬಿತ್ತನೆ ಬೀಜಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಏಪ್ರಿಲ್ ತಿಂಗಳಿನಿಂದಲೇ ಬಿತ್ತನೆ ಬೀಜನಗಳ ವಿತರಣೆಗೆ ಕೃಷಿ ಇಲಾಖೆಯಿಂದ ಚಾಲನೆ ನೀಡಲಾಗಿದೆ. ಪ್ರಸ್ತುತ ಬಿತ್ತನೆ ಬೀಜನಗಳ ವಿತರಣಾ ಕಾರ್ಯ ಚುರುಕುಗೊಂಡಿದ್ದು, ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ನೇರ ಸಂಪರ್ಕವನ್ನು ಕೈಗೊಂಡು ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ಕೊರತೆಯುಂಟಾಗದಂತೆ ಕ್ರಮ ವಹಿಸಬೇಕು. ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಇತ್ತೀಚೆಗೆ 9,000 ಮೇವಿನ ಕಿಟ್ ಗಳನ್ನು ವಿತರಿಸಲಾಗುತ್ತಿದ್ದು, ಉಳಿದ ಕಿಟ್ ಗಳ ವಿತರಣೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮೇವು ಬೆಳೆಯಲು ರೈತರನ್ನು ಉತ್ತೇಜಿಸುವ ಕಾರ್ಯವನ್ನು ಪಶುಪಾಲನಾ ಇಲಾಖೆಯ ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ರಸಗೊಬ್ಬರಕ್ಕೆ ಕೊರತೆ ಇಲ್ಲ:ನಿಯಮಿತವಾಗಿ ರಸಗೊಬ್ಬರವನ್ನು ರೈತರಿಗೆ ಪೂರೈಸಬೇಕು. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ 4 ಸಾವಿರ ಕ್ವಿಂಟಾಲ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಪೂರೈಸುವ ಕಾರ್ಯವನ್ನು ನಿರ್ವಹಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಮಳೆಹಾನಿ ನಿರ್ವಹಣೆಯ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ಕಾರ್ಯವನ್ನೂ ನಿರ್ವಹಿಸಬೇಕಿದೆ. ಪ್ರಸ್ತುತ ಜಿಲ್ಲೆಯ ನಗರಾಡಳಿತ ಪ್ರದೇಶಗಳ 29 ವಾರ್ಡ್ ಗಳಲ್ಲಿ 17 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಜೊತೆಗೆ ಮುಂದೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿದಾಗ ನೀರು ಪೂರೈಕೆಗೆ ಖಾಸಗಿ ಕೊಳವೆ ಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಸನ್ನದ್ಧರಾಗಿರಬೇಕು ಎಂದು ತಿಳಿಸಿದರು.ಸುಸ್ಥಿತಿಯಲ್ಲಿಲ್ಲದ ಮನೆಗಳು,ಶಾಲೆಗಳನ್ನು ಗುರುತಿಸಿ:
ಸುಸ್ಥಿತಿಯಲ್ಲಿಲ್ಲದ ಶಾಲಾ ಕೊಠಡಿಗಳನ್ನು ಶಾಲಾ ಸಾಕ್ಷರತೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅಂತಹ ಕೊಠಡಿಗಳಲ್ಲಿ ಪಾಠ- ಪ್ರವಚನಗಳನ್ನು ನಡೆಸದಂತೆ ಸೂಚನೆ ನೀಡಬೇಕು. ಹಾಗೆಯೇ ಅಂಗನವಾಡಿ ಕಟ್ಟಡಗಳ ಸ್ಥಿತಿಗತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕು. ಗ್ರಾಪಂ ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿರುವ ಹಳೆ ಮನೆಗಳು, ಮಣ್ಣಿನಿಂದ ನಿರ್ಮಿಸಿರುವ ಮನೆಗಳು, ಕಲ್ಲು ಚಪ್ಪಡಿಗಳಿಂದ ನಿರ್ಮಿಸಿರುವ ಮನೆಗಳನ್ನು ಗುರುತಿಸಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಸುಸ್ಥಿತಿಯಲ್ಲಿಲ್ಲದ ಮನೆಗಳ ಜನರನ್ನು ಸ್ಥಳಾಂತರಿಸಲು ಕ್ರಮವಹಿಸಬೇಕು. ಮಳೆಯಿಂದಾಗಿ ಹಾನಿಗೊಳಗಾಗುವ ವಿದ್ಯುತ್ ಕಂಬಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕು. ಸುಸ್ಥಿತಿಯಲ್ಲಿಲ್ಲದ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕು. ಈ ಎಲ್ಲಾ ಕಾರ್ಯಗಳ ಕುರಿತು ಮೇಲಾಧಿಕಾರಿಗಳು ನಿಗಾ ವಹಿಸಿ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾಲೋಚಿತ ಸೂಚನೆ ನೀಡಿ ಮಳೆ ಹಾನಿಯಿಂದಾಗಲಿ ಅಥವಾ ಬರಪರಿಸ್ಥಿತಿಯಿಂದಾಗಲಿ ಜನರು ಸಮಸ್ಯೆಗೆ ಸಿಲುಕದಂತೆ ಅಗತ್ಯ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ಎನ್. ಭಾಸ್ಕರ್, ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ರೈ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.