ಅಂಕೋಲಾ: ನಾನು ಮಹಿಳೆಯಾಗಿ ಹುಟ್ಟಿರುವುದೇ ಹೆಮ್ಮೆ. ನನ್ನ ಕಚೇರಿ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ನೂರು ಜನ್ಮವಿದ್ದರೂ ಹೆಣ್ಣಾಗಿಯೇ ಜನಿಸಬೇಕು ಎನ್ನುವ ಬಯಕೆ ನನ್ನದು ಎಂದು ಜಿಲ್ಲಾ ಜಿಎಸ್‌ಟಿ ಅಸಿಸ್ಟಂಟ್ ಕಮೀಷನರ್ ಶಾಲಿನಿ ಗಾಂವಕರ ತಿಳಿಸಿದರು.
ರೂರಲ್ ರೋಟರಿ ಕ್ಲಬ್ ವತಿಯಿಂದ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೆಂಕಿ ಇಲ್ಲದೇ ಅಡುಗೆ ತಯಾರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೂರಲ್ ರೋಟರಿ ಕ್ಲಬ್‌ನ ಈ ಕಾರ್ಯ ಶ್ಲಾಘನಾರ್ಹ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರೆ ಪುರುಷರ ಸಹಕಾರ ಸಮಾಜದಲ್ಲಿ ಅಗತ್ಯ ಎಂದರು.ವಂದನಾ ನಾಯಕ ಅಲಗೇರಿ ಮಾತನಾಡಿ, ನಿರುದ್ಯೋಗ ಎಂದು ಮನೆಯಲ್ಲಿ ಇರುವ ಬದಲು ಮನೆಯಲ್ಲಿಯೇ ರಾಸಾಯನಿಕಗಳನ್ನು ಬಳಸದೆ ತಿಂಡಿ- ತಿನಿಸುಗಳನ್ನು ರುಚಿಕಟ್ಟಾಗಿ ಮಾಡಿದಾಗ ಗ್ರಾಹಕರು ಇಂದಿನ ಕಾಲದಲ್ಲಿ ಹುಡುಕಿಕೊಂಡು ಬರುತ್ತಾರೆ ಎಂದರು.
ಗುಳ್ಳಾಪುರದ ವನದುರ್ಗಾ ನರ್ಸರಿಯ ಮಾಲಕಿ ಸಂಧ್ಯಾ ಭಟ್ಟ ಮಾತನಾಡಿ, ಕೇವಲ ಕೆಲವೇ ಗಿಡಗಳಿಂದ ಆರಂಭಗೊಂಡ ನಮ್ಮ ನರ್ಸರಿ ಇಂದು ಜಿಲ್ಲಾದ್ಯಂತ ವಿಸ್ತರಿಸಿದೆ. ಪ್ರತಿಯೊಬ್ಬ ಮಹಿಳೆಯರು ಕ್ರಿಯಾಶೀಲರಾದಾಗ ಯಶಸ್ಸು ಸಾಧ್ಯ ಎಂದರು.ರೂರಲ್ ರೋಟರಿ ಕ್ಲಬ್‌ನ ಅಧ್ಯಕ್ಷ ಹರ್ಷಾ ನಾಯಕ ಮಾತನಾಡಿದರು. ಅಂಕೋಲಾದ ಆರ್ಯ ಮೆಡಿಕಲ್‌ನ ಡಾ. ಶ್ರೀದೇವಿ ತಿನೇಕರ ಉಪಸ್ಥಿತರಿದ್ದರು. ಮುಖ್ಯ ಗ್ರಂಥಪಾಲಕಿ ಸವಿತಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾವನಾ ನಾಯಕ ಸ್ವಾಗತಿಸಿದರು. ಕ್ಲಬ್‌ನ ಕಾರ್ಯದರ್ಶಿ ಸದಾನಂದ ನಾಯಕ ವಂದಿಸಿದರು. ರೊಟೇರಿಯನ್‌ಗಳಾದ ಯೋಗಿತಾ ಕಾಮತ, ಪುಷ್ಪಲತಾ ನಾಯಕ, ವಿನಾಯಕ ಕಾಮತ, ಮಹೇಶ ಪೈ, ಕೌಸ್ತುಬ ನಾಯಕ, ಶಿವಾನಂದ ನಾಯಕ, ಪ್ರವೀಣ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ರುಚಿ ರುಚಿ ಅಡುಗೆ ತಯಾರಿಹಲವು ಕಡೆಗಳಿಂದ ಮಹಿಳೆಯರು ಆಗಮಿಸಿ ಬೆಂಕಿ ಇಲ್ಲದೇ ರುಚಿ ರುಚಿಯಾದ ಅಡುಗೆ ತಿಂಡಿ- ತಿನಿಸುಗಳನ್ನು ಸಿದ್ಧಪಡಿಸಿ ಮೆಚ್ಚುಗೆ ಗಳಿಸುವುದರ ಜತೆಗೆ ಬಹುಮಾನವನ್ನು ಪಡೆದರು.