ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತದ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದ ಹಾಗೂ ಅಂಬೇಡ್ಕರ್ ಸಂವಿಧಾನವನ್ನೇ ಬರೆದಿಲ್ಲವೆಂದು ರಾಜ್ಯದ ವಿವಿಧೆಡೆ ಭಾಷಣ ಮಾಡಿದ ಮಹಾನುಭಾವರಿದ್ದು, ಒಂದು ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ ನಾವ್ಯಾರೂ ಹೀಗೆ ಒಟ್ಟಾಗಿ ಸೇರಲು ಸಾಧ್ಯವಿರಲಿಲ್ಲ ಎಂಬುದು ಮರೆಯಬಾರದು ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಸೂಚ್ಯವಾಗಿ ಹೇಳಿದರು.ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಹಾಗೂ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಹಾಗೂ ಜೋಗೇಂದ್ರ ಸಿಂಗ್ ಮಂಡಲ್‌ರ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಂವಿಧಾನದ ಬಗ್ಗೆ ಹೆಚ್ಚು ಹೆಚ್ಚು ವಿಷಯಗಳ ನಾವು ತಿಳಿದುಕೊಳ್ಳಬೇಕು. ಮನೆ ಮನೆಗೆ ಸಂವಿಧಾನ ಹಾಗೂ ಸಂವಿಧಾನದ ಆಶಯಗಳ ತಿಳಿಸುವ ಕೆಲಸ ಪ್ರಜಾ ಪರಿವರ್ತನಾ ಸಂಘಟನೆ ಮಾಡಬೇಕು. ಈ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸಾಮಾನ್ಯ ಜನರು ಸಂವಿಧಾನದ ಬಗ್ಗೆ ಮಾತನಾಡುವಂತಾಗಬೇಕು ಎಂದು ತಿಳಿಸಿದರು.
ದಾರಿ ಯಾವುದೇ ರೀತಿ ಇರಲಿ, ಅದನ್ನು ಸರಿಪಡಿಸುವ ಬುದ್ಧಿವಂತಿಕೆ ಬೆಳೆಸಿಕೊಂಡು, ಸಮಾಜ ಪರಿವರ್ತನೆ, ಬದಲಾವಣೆ ತರುವ ಜವಾಬ್ದಾರಿ ಬೆಳೆಸಿಕೊಳ್ಳಬೇಕು. ಸಮಾಜವು ನಮಗೇನು ಮಾಡಿದೆಯೆಂದು ಪ್ರಶ್ನಿಸುತ್ತಾ ಕೂರುವ ಬದಲಿಗೆ, ಸಮಾಜಕ್ಕೆ ನಾವೇನು ಕೊಡುಗೆ ನೀಡಬೇಕು ಎಂಬುದಾಗಿ ನಮಗೆ ನಾವೇ ಕೇಳಿಕೊಂಡು, ನಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.ಮನುಷ್ಯರಾದ ನಮಗೆ ಯಾವುದನ್ನು ಕೆಡಿಸಿದರೆ ಮತ್ತೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲವೋ ಅಂತಹದ್ದನ್ನು ಯಾವುದೇ ಕಾರಣಕ್ಕೂ ಕೆಡಿಸುವ ಕೆಲಸ ಮಾಡಬಾರದು. ಒಂದು ವೇಳೆ ನಮಗೆ ಯಾವುದೋ ಒಂದು ಮರ ಟೊಂಗೆ ತುಂಡರಿಸಿದರೆ ಮತ್ತೆ ಅದನ್ನು ಅದೇ ಜಾಗಕ್ಕೆ ಸೇರಿಸುವ ಶಕ್ತಿ ಇರಬೇಕು. ಹಾಗಿದ್ದರೆ ಟೊಂಗೆ ಕತ್ತರಿಸಬೇಕು. ಅದನ್ನು ಜೋಡಿಸುವ ಶಕ್ತಿ ಇಲ್ಲವೆಂದರೆ, ಟೊಂಗೆ ಮುರಿಯುವ, ಕತ್ತರಿಸುವಂತಹ ಕೆಲಸಕ್ಕೆ ಯಾವುದೇ ಕಾರಣಕ್ಕೂ ಕೈಹಾಕಬಾರದು. ಅಂಗುಲಿಮಾಲನನ್ನು ಭಗವಾನ್ ಬುದ್ಧ ಸಹ ಇದೇ ರೀತಿ ಪರಿವರ್ತನೆ ಮಾಡಿದರು ಎಂದು ಕಿವಿಮಾತು ಹೇಳಿದರು.
ವೇದಿಕೆ ಜಿಲ್ಲಾಧ್ಯಕ್ಷ ಎಚ್.ಕೆ.ಕೃಷ್ಣ ಅರಕೆರೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ, ಉಪಾಧ್ಯಕ್ಷ ಡಾ.ಸೈಯದ್ ರೋಷನ್ ಮುಲ್ಲಾ ಸಂವಿಧಾನದ ಕುರಿತು ಮಾತನಾಡಿದರು. ನಿವೃತ್ತ ಎಸ್ಪಿ ಎನ್.ರುದ್ರಮುನಿ, ಎನ್.ಕಾಂಚನಾ, ಕೆ.ಓ.ಮಂಜಪ್ಪ ಇತರರಿದ್ದರು.